ಜನರಲ್ಲಿ ಜಾಗೃತಿ-ಧೈರ್ಯ ತುಂಬುವ ಕೆಲಸವಾಗಲಿ

ಮಂಗಳೂರು, ಏ.೧- ಕೊರೋನಾ ಸಾಂಕ್ರಾಮಿಕ ಮಹಾಮಾರಿಯ ಬಗ್ಗೆ ಸರಕಾರ ಹಾಗೂ ಅಧಿಕಾರಿಗಳು ಜನರನ್ನು ಭಯದ ಕೂಪಕ್ಕೆ ತಳ್ಳುತ್ತಿರುವ ನಡುವೆ ಮಾಧ್ಯಮಗಳು ಕೂಡಾ ಅದೇ ಹಾದಿಯನ್ನು ಹಿಡಿಯದೆ ಜನರಲ್ಲಿ ಜಾಗೃತಿ ಹಾಗೂ ಧೈರ್ಯ ತುಂಬುವ ಕೆಲಸ ಮಾಡಬೇಕು. ಆ ಮೂಲಕ ಜನ ಸಾಂಕ್ರಾಮಿಕ ರೋಗ ಭಯವನ್ನು ಮೀರಿ ಮನಶ್ಶಾಂತಿಯಿಂದ ಜೀವಿಸುವ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಸಲಹೆ ನೀಡಿದರು.
ಅಖಿಲ ಭಾರತ ಬ್ಯಾರಿ ಸಾಹಿತ್ಯ ಪರಿಷತ್ (ರಿ) ಆಶ್ರಯದಲ್ಲಿ ವೆಲ್ ನೆಸ್ ಹೆಲ್ಪ್ ಲೈನ್ ಮಂಗಳೂರು ಇದರ ಸಹಯೋಗದೊಂದಿಗೆ ಬಲ್ಮಠ ಸಹೋದಯ ಸಭಾ ಭವನದಲ್ಲಿ ಮಾ ೨೬ ರಂದು ಸಂಜೆ ನಡೆದ ಸಾರ್ವಜನಿಕ ಆರೋಗ್ಯ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ರೋಗ ಭೀತಿ ಹಾಗೂ ಜೀವನ ಸಂಕಷ್ಟದಲ್ಲಿರುವ ಜನತೆಯ ಪಾಲಿಗೆ ಆಶಾಭಾವನೆ, ಜಾಗೃತಿ ಮೂಡಿಸಬೇಕಾದ ಸ್ವತಃ ಜಿಲ್ಲಾಧಿಕಾರಿಗಳೇ ಬೀದಿಗಿಳಿದು ಜನರನ್ನು ಹೆದರಿಸಿ-ಬೆದರಿಸಿ ಬಂಧಿಸುವ ಸನ್ನಿವೇಶ ಕಂಡು ಬರುತ್ತಿದ್ದು, ಇದೊಂದು ಆತಂಕಕಾರಿ ಬೆಳವಣಿಗೆ ಎಂದವರು ವಿಷಾದ ವ್ಯಕ್ತಪಡಿಸಿದರು. ಕೊರೊನಾ ಜಾಗೃತಿ ಹೆಸರಿನಲ್ಲಿ ಜನರನ್ನು ಮಾನಸಿಕವಾಗಿ ಕುಗ್ಗಿಸುವ ಬದಲು ಸದೃಢಗೊಳಿಸುವ ಕಾರ್ಯವನ್ನು ಸರಕಾರಗಳು ಮಾಡಬೇಕಾಗಿದೆ ಎಂದವರು ಆಗ್ರಹಿಸಿದರು.
ವೆಲ್ ನೆಸ್ ಹೆಲ್ಪ್ ಲೈನ್ ಟ್ರಸ್ಟಿಗಳಾದ ಅಹ್ಮದ್ ಖಾಸಿಂ ಎಚ್ ಕೆ ಹಾಗೂ ಝಿಯಾ, ಡಾ ಹಾರೂನ್ ಅವರು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದು ಹಾಗೂ ಜಾಗೃತಿ ಮೂಡಿಸುವ ಬಗ್ಗೆ ಮಾಹಿತಿ ನೀಡಿದರು.
ಪರಿಷತ್ ಅಧ್ಯಕ್ಷ ಹಾಜಿ ಕೆ ಎಸ್ ಅಬೂಬಕ್ಕರ್ ಪಲ್ಲಮಜಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪರಿಷತ್ ಸ್ಥಾಪಕಾಧ್ಯಕ್ಷ ಜೆ ಹುಸೈನ್, ಗೌರವಾಧ್ಯಕ್ಷ ಯೂಸುಫ್ ವಕ್ತಾರ್, ಕಾರ್ಪೋರೇಟರ್ ಅಬ್ದುಲ್ ಲತೀಫ್ ಖಂದಕ್, ಮನಪಾ ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ ಬೈಲ್ ಭಾಗವಹಿಸಿದ್ದರು.
ಪರಿಷತ್ ಕಾರ್ಯದರ್ಶಿ ಅಬ್ದುಲ್ ಅಝೀಝ್ ಹಕ್ ಸ್ವಾಗತಿಸಿ, ಕೋಶಾಧಿಕಾರಿ ನಿಸಾರ್ ಫಕೀರ್ ಮುಹಮ್ಮದ್ ವಂದಿಸಿದರು. ಉಪಾಧ್ಯಕ್ಷ ಅಬ್ದುಲ್
ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.