ಜನರನ್ನು ಗೊಂದಲಕ್ಕೀಡು ಮಾಡುವ ಆಶಯಪತ್ರ; ಎಸ್ ಯುಸಿಐ

ದಾವಣಗೆರೆ. ಫೆ‌.20; ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿಯವರು ಮಂಡಿಸಿದ ರೂ. 3,09,000 ಕೋಟಿ ಗಾತ್ರದ ಮುಂಗಡ ಪತ್ರವು ಜನರನ್ನು ಗೊಂದಲಕ್ಕೀಡು ಮಾಡುವ ಆಶಯಪತ್ರ ಮಾತ್ರ ಎಂದು ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ಎಸ್ ಯು ಯು ಸಿ ಐ ಕಾರ್ಯದರ್ಶಿ ಮಂಜುನಾಥ್ ಕೈದಾಳೆ ಈ ಬಜೆಟನ್ನು ವಿಶ್ಲೇಷಿಸುವಾಗ ಇದೇ ಮೇ ತಿಂಗಳಿಗೆ ಈ ಸರ್ಕಾರದ ಅವಧಿ ಮುಗಿಯಲಿದ್ದು, ಈ ಬಜೆಟಿನ ಆಯುಷ್ಯವೂ ಅಷ್ಟೇ ಎಂಬುದನ್ನು ಮರೆಯಲಾಗದು. ಭಾಷಣದ ಹೆಚ್ಚಿನ ಭಾಗದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಧಿಸಲಾಗಿದೆ ಎಂದು ಹೇಳಲಾದ ಅಂಕಿಅಂಶಗಳ ಕಂತೆಯಷ್ಟೇ ಇದೆ. ಚುನಾವಣೆಯಲ್ಲಿ ನೀಡುವ ಭರವಸೆಯಂತೆ ‘ಮಾಡಲಾಗುವುದು’, ‘ಆರಂಭಿಸಲಾಗುವುದು’ ಇತ್ಯಾದಿ ಆಶಯಗಳನ್ನಷ್ಟೇ ವ್ಯಕ್ತಪಡಿಸಲಾಗಿದೆ. ರೂ.77 ಸಾವಿರ ಕೋಟಿಗಳಷ್ಟು ಹೊಸ ಸಾಲ ಸೇರ್ಪಡೆಯಾಗಿದೆ. ಶಿಕ್ಷಣ, ಆರೋಗ್ಯ, ಉದ್ಯೋಗ ಸೃಷ್ಟಿ, ಬೆಲೆ ಏರಿಕೆ ನಿಯಂತ್ರಣ, ನೀರಾವರಿ, ರೈತ ಕಲ್ಯಾಣ ಯೋಜನೆಗಳ ಬಗ್ಗೆ ಈ ಮುಂಗಡಪತ್ರ ಅಸ್ಪಷ್ಟವಾಗಿದೆ. ಸಾರ್ವಜನಿಕ ಶಿಕ್ಷಣ ಬಲಪಡಿಸಲು ಶಿಕ್ಷಣಕ್ಕೆ ಬಜೆಟಿನ ಶೇ.30 ಒದಗಿಸಬೇಕೆಂಬ ಬೇಡಿಕೆ ಈಡೇರಿಲ್ಲ, ಕೇವಲ ಶೇ.11 ನೀಡಲಾಗಿದೆ. ಕುಡಿಯುವ ನೀರನ್ನು ವ್ಯಾಪಾರೀಕರಿಸುವ ಜಲಜೀವನ್ ಮಿಷನ್ ಗೆ ರೂ. 6,250 ಕೋಟಿ ನೀಡಿರುವ ಸರ್ಕಾರ, ಉದ್ಯೋಗ ಖಾತ್ರಿ ಯೋಜನೆಗೆ ಕೇವಲ ರೂ. 1850 ಕೋಟಿ ಮೀಸಲಿಟ್ಟಿರುವುದು ಸರ್ಕಾರದ ಆದ್ಯತೆ ತೋರಿಸುತ್ತದೆ. ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಗೌರವಧನ ರೂ. 1000 ಹೆಚ್ಚಳ ಮಾಡಿರುವುದು ಅವರಿಗೆ ಅಲ್ಪ ಪರಿಹಾರ ನೀಡುವುದಾದರೂ, ಇಂದಿನ ಬೆಲೆ ಏರಿಕೆಗೆ ತಕ್ಕಂತೆ ಇಲ್ಲವೇ ಇಲ್ಲ. ಭೂರಹಿತ ಮಹಿಳಾ ಕಾರ್ಮಿಕರಿಗೆ ಘೋಷಿಸಿರುವ ರೂ. 500 ಮಾಸಿಕ ವೇತನ ವಾಗಲಿ, ನಿರುದ್ಯೋಗಿ ಯುವಜನರಿಗೆ ಒಮ್ಮೆ ರೂ. 2000 ನೀಡುವುದಾಗಲಿ ನೈಜ ಸಮಸ್ಯೆಯನ್ನು ಪರಿಹರಿಸದ, ಚುನಾವಣಾ ಕೊಡುಗೆಗಳಾಗಿ ಮಾತ್ರ ಕಾಣಿಸುತ್ತವೆ.ಇನ್ನೊಂದೆಡೆ ಬಂಡವಾಳ ಹೂಡಿಕೆ ಮಾಡುವವರಿಗೆ ಏನೆಲ್ಲಾ ಸವಲತ್ತುಗಳನ್ನು ನೀಡಲಾಗಿದೆ ಎಂಬುದಕ್ಕೆ ಮುಖ್ಯಮಂತ್ರಿಗಳು ವಿಶೇಷ ಒತ್ತು ನೀಡಿದ್ದಾರೆ. ಇವೆಲ್ಲ ನಮ್ಮ ಸರ್ಕಾರದ ಒಲವು ಯಾವ ಕಡೆಗಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನಗಳು ಎಂದಿದ್ದಾರೆ.