ಜನಮೆಚ್ಚುವ ಕೆಲಸ ಮಾಡುವಂತೆ ರಾಠೋಡ ಸಲಹೆ

ಕಾಳಗಿ.ಸೆ.21: ತಾಲೂಕಿನ ಕೊಡದೂರ ಗ್ರಾಪಂ. ನೂತನ ಅಧ್ಯಕ್ಷೆಯಾಗಿ ರಾಜೇಶ್ವರಿ ಮೋಹನ್ ಮೆಲಕೇರಿ ಕೊಡದೂರ ಅವರು, ಅವಿರೋಧವಾಗಿ ಆಯ್ಕೆಯಾದರು.

ಒಟ್ಟು ಹದಿನೆಂಟು ಸದಸ್ಯ ಬಲವಿರುವ ಕೋಡದೂರ ಗ್ರಾಪಂ.ಗೆ ಪರಿಶಿಷ್ಠ ಜಾತಿ ಮಹಿಳೆ ಮಿಸಲಾತಿಯನ್ನು ಹೊಂದಿತ್ತು. ನಿರ್ಮಲ ಸಾಬಣ್ಣ ಅವರು, ಕಳೆದ ಹದಿನೈದು ತಿಂಗಳ ಕಾಲ ಅಧಿಕಾರ ಅನುಭವಿಸಿ, ತಮ್ಮ ವಯಕ್ತಿಕ ಕಾರಣದಿಂದ ರಾಜಿನಾಮೆ ನೀಡಿರುವ ಪ್ರಯುಕ್ತ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣಾ ಪ್ರಕ್ರೀಯೆ ಜರುಗಿತ್ತು. 18 ಸದಸ್ಯರ ಪೈಕಿ ಒಬ್ಬ ಮಹಿಳಾ ಸದಸ್ಯೆ ಚಿತ್ಮಾಬೇಗಂ ಮೃತ ಪಟ್ಟಿರುವ ಕಾರಣ ಉಳಿದ ಒಟ್ಟು 17ಜನ ಗ್ರಾಪಂ. ಸದಸ್ಯರು ಒಮ್ಮತದ ನಿರ್ಣಯವನ್ನು ತೆಗೆದುಕೊಂಡು ರಾಜೇಶ್ವರಿ ಮೆಲಕೇರಿ ಅವರನ್ನು ಸಂಪೂರ್ಣ ಬೆಂಬಲ ನೀಡುವ ಮೂಲಕ ಅವಿರೋಧವಾಗಿ ಆಯ್ಕೆ ಮಾಡಿದರು.

ಚುನಾವಣಾಧಿಕಾರಿಯಾಗಿರುವ ಕಾಳಗಿ ಗ್ರೇಡ್-1 ತಹಸೀಲ್ದಾರ ನಾಗನಾಥ ತರಗೆ ಅವರು, ಅಚ್ಚುಕಟ್ಟಾಗಿ ಚುನಾವಣಾ ಪ್ರಕ್ರೀಯೆಯನ್ನು ನೆರವೇರಿಸಿಕೊಟ್ಟರು.
ನಿಗದಿತ ಸಮಯದಲ್ಲಿ ರಾಜೇಶ್ವರಿ ಮೆಲಕೇರಿ ಅವರ ನಾಮಪತ್ರದ ನಂತರ ಯಾವೊಬ್ಬ ಸದಸ್ಯರು ನಾಮಪತ್ರ ಹಾಕದ ಕಾರಣ ಅವರು, ರಾಜೇಶ್ವರಿ ಮೆಲಕೇರಿ ಅವರನ್ನು ಅವಿರೋಧ ಆಯ್ಕೆ ಎಂದು ಘೋಷಣೆ ಮಾಡಿದರು.
ಗ್ರಾಪಂ.ಪಿಡಿಓ ಸುನೀತಾ ಎಸ್.ಕೆ ಸೇರಿದಂತೆ ಅಧಿಕಾರಿಗಳು ಇದ್ದರು. ಕಾಳಗಿ ಸಿಪಿಐ ವಿನಾಯಕ ನೇತೃತ್ವದಲ್ಲಿ ಪಿಎಸ್‍ಐ ಹುಲಿಯಪ್ಪ ಗೌಡಗೊಂಡ ಅವರು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು.
  ಕಾಂಗ್ರೇಸ್ ವಿಜಯೋತ್ಸವ:
       ರಾಜೇಶ್ವರಿ ಮೆಲಕೇರಿ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಗುಂಪು-ಗುಂಪುಗಳನ್ನು ಕಟ್ಟಿಕೊಂಡು ಗುಲಾಲ್ ಎರಚಿ, ಪರಸ್ಪರ ಸಿಹಿಹಂಚಿಕೊಂಡು ಸಂಭ್ರಮಿಸಿದರು.
ವಿಜಯೋತ್ಸವದಲ್ಲಿ ಭಾಗವಹಿಸಿರುವ ಚಿಂಚೋಳಿ ಮತಕ್ಷೇತ್ರದ ಕಾಂಗ್ರೇಸ್ ಅಭ್ಯಾರ್ಥಿ ಸುಭಾಷ ರಾಠೋಡ ಮಾತನಾಡಿ, ತಮ್ಮ ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತೆ ಗ್ರಾಪಂ. ಅಧ್ಯಕ್ಷ ಸ್ಥಾನ ಗಿಟ್ಟಿಕೊಂಡಿರುವುದು ನಮಗೆ ಸಂಭ್ರಮ ಮನೆಮಾಡಿದೆ. ಈ ಸಂಭ್ರಮದ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ಅನ್ಯಾಯವಾಗದಂತೆ ಜನಮೆಚ್ಚುವ ಕೆಲಸ ಮಾಡುವ ಬಹುದೊಡ್ಡ ಜವಾಬ್ದಾರಿ ತಮ್ಮದಾಗಿದೆ ಎಂದರು.

ಒಬ್ಬ ನ್ಯಾಯಧೀಶನಂತೆ ಗುರುತರವಾಗಿರುವ ಬಹು ದೊಡ್ಡ ಅಧಿಕಾರ ಗ್ರಾಪಂ. ಅಧ್ಯಕ್ಷನಾದವನಿಗಿರುತ್ತದೆ. ಕಾರಣ ಜವಾಬ್ದಾರಿಯನ್ನರಿತುಕೊಂಡು ಜನಸೇವೆ ಮಾಡಿ ಪಕ್ಷಕ್ಕೆ ಒಳ್ಳೆಯ ಹೆಸರು ತರುವಂತೆ ಸಲಹೆ ಮಾಡಿದರು.

ಜಿಪಂ.ಮಾಜಿ ಸದಸ್ಯ ರಾಜೇಶ ಗುತ್ತೇದಾರ, ಕಾಂಗ್ರೇಸ್ ಹಿರಿಯ ಮುಖಂಡ ಶಿವಾನಂದ ಮಜ್ಜಗಿ, ಯುವ ನಾಯಕ ಗಣಪತಿ ಹಾಳಕಾಯಿ, ಕಾಳಗಿ ತಾಲೂಕು ಕಾಂಗ್ರೇಸ್ ಪಕ್ಷದ ಯೂತ್ ಅಧ್ಯಕ್ಷ ಶರಣು ಮಜ್ಜಗಿ, ಅಪ್ಪರಾವ ಸೌಕಾರ, ಪ್ರಶಾಂತ ರಾಜಾಪೂರ, ರೇವಣಸಿದ್ದ ಕಟ್ಟಿಮನಿ, ರಾಘವೇಂದ್ರ ಗುತ್ತೇದಾರ, ಭಂಡು ಗದ್ದಿಗೌಡರ್, ನೀಲಕಂಠರಾವ ಪಾಟೀಲ, ಗುರುಲಿಂಗಯ್ಯಸ್ವಾಮಿ, ಈರಣ್ಣ ನಿಂಗದಳ್ಳಿ, ಮನೋಜ ಮಂಗಲಗಿ, ಪ್ರಕಾಶ ಮೆಲಕೇರಿ, ಅವಿನಾಶ ಕೊಡದೂರ, ಮೋಹನ್ ಚಿನ್ನ, ಸಂತೋಷ ನರನಾಳ, ಮಲ್ಲಿಕಾರ್ಜುನ ಡೊಣ್ಣೂರ, ನಾಗರಾಜ ಚಿನ್ನ ಸೇರಿದಂತೆ ಅನೇಕರಿದ್ದರು.