ಜನಮುಖಿಯಾಗಿ ಕೆಲಸ ಮಾಡಬೇಕು


ಧಾರವಾಡ,ಆ.29: ಆಹಾರ, ಆರೋಗ್ಯ, ಉದ್ಯೋಗ, ವಸತಿ ಸೇರಿದಂತೆ ಕೃಷಿ, ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರವು ಬಿಡುಗಡೆ ಮಾಡುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕೆಂದು ಮತ್ತು ಸ್ಥಳೀಯ ವಾಸ್ತವಿಕತೆ ಅರಿತು ಜನಮುಖಿಯಾಗಿ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕೆಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಲ್ಹಾದ ಜೋಶಿ ಅವರು ಹೇಳಿದರು.
ಅವರು ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕೇಂದ್ರ ಪುರಸ್ಕøತ ಕಾರ್ಯಕ್ರಮಗಳ ಪರಿಶೀಲನೆಗಾಗಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ದಿಶಾ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಜಲ ಜೀವನ ಮಿಷನ್ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ಸಂಸದ ಆದರ್ಶ ಗ್ರಾಮ ಯೋಜನೆ, ಪ್ರಧಾನ ಮಂತ್ರಿ ಆವಾಸ ಯೋಜನೆ, ಸಂಜೀವಿನಿ, ಸ್ವಚ್ಛಭಾರತ ಮಿಷನ್, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಸೇರಿದಂತೆ ಪ್ರಮುಖ ಯೋಜನೆಗಳ ಕುರಿತು ಸಚಿವರು ಪ್ರಗತಿ ಪರಿಶೀಲನೆ ಮಾಡಿ, ಅತಿವೃಷ್ಠಿಯಿಂದ ಆಗುವ ವಿವಿಧ ರೀತಿಯ ಹಾನಿಗಳನ್ನು ವಾಸ್ತವಿಕ ಅಂಶಗಳ ಮೇಲೆ ಸಮೀಕ್ಷೆ ಮಾಡಬೇಕು. ಮತ್ತು ಕೃಷಿ ತೋಟಗಾರಿಕೆ, ಬೆಳೆ ಹಾನಿಗಳಲ್ಲಿ ನಿಖರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಸಚಿವರು ಸೂಚಿಸಿದರು.
ಜಲ ಜೀವನ ಮಿಷನ್ ಯೋಜನೆ ಅನುಷ್ಠಾನ ತೃಪ್ತಿಕರವಾಗಿಲ್ಲ. ಗ್ರಾಮೀಣ ಭಾಗದ ಈ ಕಾಮಗಾರಿ ಕುರಿತು ಸಾರ್ವಜನಿಕರು ದೂರುಗಳನ್ನು ಸಲ್ಲಿಸಿದ್ದಾರೆ. ಕಾಮಗಾರಿ ಪರಿಶೀಲಿಸಿ, ಕಳಪೆ ಕಂಡುಬಂದಲ್ಲಿ ಗುಣಮಟ್ಟದ ಮರು ಕಾಮಗಾರಿಯನ್ನು ಕೈಗೊಳ್ಳಬೇಕೆಂದು ಮತ್ತು ತದನಂತರವೇ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಬೇಕು. ಈ ಕುರಿತು ಬಂದಿರುವ ಸಾರ್ವಜನಿಕ ದೂರುಗಳನ್ನು ಪರಿಶೀಲಿಸಿ, ಸೂಕ್ತ ಕ್ರಮಕೈಗೊಂಡು ಒಂದು ತಿಂಗಳ ಒಳಗಾಗಿ ಈ ಕುರಿತು ವರದಿ ಸಲ್ಲಿಸಬೇಕು ಮತ್ತು ಮುಂದಿನ ತಿಂಗಳು ಈ ಕುರಿತು ವಿಶೇಷ ಸಭೆ ಜರುಗಿಸುವುದಾಗಿ ಸಚಿವ ಪ್ರಲ್ಹಾದ ಜೋಶಿ ಅವರು ಹೇಳಿದರು.
ಭೂದಾಖಲೆಗಳ ಇಲಾಖೆ, ತೊಟಗಾರಿಕೆ ಇಲಾಖೆ, ಕುಡಿಯುವ ನೀರು ನೈರ್ಮಲ್ಯ ಇಲಾಖೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಜನ ಪ್ರತಿನಿಧಿಗಳೊಂದಿಗೆ ಮತ್ತು ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು. ವಿಳಂಬವಿಲ್ಲದೆ ಸಂಬಂಧಿಸಿದ ರೈತರನ್ನು, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕೆಂದು ಸೂಚಿಸಿದರು.
ರೈತರ ಬೆಳೆ ಸಾಲ, ಇತರೆ ಸಾಲ ಮಂಜೂರಾತಿ, ಸರ್ಕಾರಿ ಸಹಾಯಧನ ಬಿಡುಗಡೆ, ನರೇಗಾ ಯೋಜನೆ ಸೇರಿದಂತೆ ಕೆಲವು ಕಾರ್ಯಕ್ರಮಗಳನ್ನು ಸುಗಮವಾಗಿ ಜಾರಿ ಮಾಡಲು ಸರ್ಕಾರಿ ಮಟ್ಟದಲ್ಲಿ ಯೋಜನಾಂಶಗಳ ತಿದ್ದುಪಡಿ, ಸುತ್ತೋಲೆಗಳ ಅಗತ್ಯವಿರುವುದರಿಂದ ಸೂಕ್ತ ಕ್ರಮಕೈಗೊಳ್ಳುವದಾಗಿ ಅವರು ತಿಳಿಸಿದರು.
ಶಾಸಕ ಎಂ.ಆರ್. ಪಾಟೀಲ ಅವರು ಮಾತನಾಡಿ, ಕ್ಷೇತ್ರಗಳಲ್ಲಿ ಬೆಳೆ ಸಮೀಕ್ಷೆ, ಮನೆ ಹಾನಿ ಸಮೀಕ್ಷೆ, ಫಲಾನುಭವಿಗಳಿಗೆ ಸೌಲಭ್ಯ ವಿತರಣೆ, ತಿಳುವಳಿಕೆ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಶಾಸಕರನ್ನು, ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಂದು ತಿಳಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಅವರು ಮಾತನಾಡಿ, ಭೂದಾಖಲೆಗಳ ಇಲಾಖೆಯ ಹುಬ್ಬಳ್ಳಿ ತಾಲೂಕಿನ ಕಚೇರಿ ಕುರಿತು ಸಾರ್ವಜನಿಕರಿಂದ ದೂರು ಬರುತ್ತಿವೆ. ಸರ್ವೆ ಕಾರ್ಯ ವಿಳಂಬವಾಗುತ್ತಿದೆ. ಇಲಾಖೆ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಹಾಗೂ ಸೌಜನ್ಯಯುತವಾಗಿ ವರ್ತಿಸಬೇಕೆಂದು ತಿಳಿಸಿದರು.