
ಸಂಜೆವಾಣಿ ವಾರ್ತೆ
ಹೊಸಪೇಟೆ ಆ3: ನಗರದ ಫ್ರೀಡಂ ಪಾರ್ಕ್ ಸಮೀಪದ ಉತ್ತರಾಧಿಮಠ ಆವರಣದಲ್ಲಿ ಬುಧವಾರ ರಾತ್ರಿ ನಡೆದ ‘ಮಹಿಷ ಮರ್ದಿನಿ‘ ಯಕ್ಷಗಾನವು ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯಿತು. ಕುಂದಾಪುರ ಹಾಲಾಡಿಯ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯವರು ನಡೆಸಿಕೊಟ್ಟ ಯಕ್ಷಗಾನವು ಗಂಭೀರ ಮತ್ತು ಹಾಸ್ಯ ಸಂಭಾಷಣೆಗಳು, ವೀರ ಕುಣಿತಗಳು ಮತ್ತು ಅದ್ಭುತ ನೃತ್ಯದೊಂದಿಗೆ ಮನ ಗೆದ್ದಿತು.
ಬಡಗುತಿಟ್ಟು ಯುಕ್ಷಗಾನದ ವೇಷಭೂಷಣ, ನೃತ್ಯ ವೈಭವ ಜನಮಾನಸದಲ್ಲಿ ಸದಾ ಅಚ್ಚೊತ್ತಿರುವ ಸಂಗತಿ. ಮಾತಿಗೆ ತೆಂಕು ತಿಟ್ಟು, ನಾಟ್ಯಕ್ಕೆ ಬಡಗುತಿಟ್ಟು ಎಂಬ ಮಾತು ಜನಜನಿತ. ಆದರೆ ಇಲ್ಲಿ ನಾಟ್ಯದ ಜತೆಗೆ ಮಾತಿನಲ್ಲೂ ಬಡಗು ತಿಟ್ಟಿನ ಕಲಾವಿದರು ಕಡಿಮೆ ಇಲ್ಲ ಎಂಬುದನ್ನು ವೃತ್ತಿಪರ ಕಲಾವಿದರು ತೋರಿಸಿಕೊಟ್ಟರು.
‘ಮಹಿಷ ಮರ್ದಿನಿ‘ ಪ್ರಸಂಗದಲ್ಲಿ ಮುಖ್ಯ ಪಾತ್ರಗಳೆಂದರೆ ಶ್ರೀದೇವಿ, ಮಹಿಷಾಸುರ ಮತ್ತು ವಿಷ್ಣುವಿನ ಪಾತ್ರಗಳು. ಮಹಿಷಾಸುರನ ರಂಗಪ್ರವೇಶದ ಸನ್ನಿವೇಶ ಎಲ್ಲಾ ಕಡೆಯಲ್ಲೂ ಅದ್ಭುತವಾಗಿಯೇ ಇರುತ್ತದೆ. ಹೊಸಪೇಟೆಯಲ್ಲಿ ಸಹ ಕಲಾವಿದ ಸುಧಾಕರ ಆಲೂರು ಅವರು ಅತ್ಯದ್ಭುತವಾಗಿ ರಂಗಪ್ರವೇಶ ಮಾಡುವ ಮೂಲಕ ಈ ಭಾಗದ ಯಕ್ಷಗಾನ ಪ್ರಿಯರ ಮನ ಗೆದ್ದರು. ಅವರ ಎತ್ತರದ ಭಂಗಿ, ಕಂಚಿನಂತಹ ಧ್ವನಿ, ಕುಣಿತದ ಭಂಗಿಗಳು ಪ್ರೇಕ್ಷಕರನ್ನು ಕುರ್ಚಿಯ ತುದಿಗೆ ತಂದು ಕೂರಿಸಿತ್ತು. ಮಾಧವ ನಾಗೂರು ಅವರ ದೇವಿ ಪಾತ್ರವಂತೂ ಮನೋಹರವಾಗಿತ್ತು. ಸಾಕ್ಷಾತ್ ಶ್ರೀದೇವಿಯ ಮೂರ್ತಿಯನ್ನು ಕಡೆದಂತೆ ಪಾತ್ರ ಇತ್ತು. ವಿಷ್ಣು ಪಾತ್ರ ಮಾಡಿದ ವಿಶ್ವನಾಥ ಆಚಾರ್ಯ ತೊಂಬಟ್ಟು, ಮಧು ಪಾತ್ರ ಮಾಡಿದ ಕೋಡಿ ವಿಶ್ವನಾಥ ಗಾಣಿಗ, ಕೈಠಭ ಪಾತ್ರ ಮಾಡಿದ ಉಳ್ಳೂರು ನಾರಾಯಣ ನಾಯ್ಕ ಅವರು ಸಹ ಪ್ರೇಕ್ಷಕರನ್ನು ರಂಜಿಸಿದರು.
ವಿದ್ಯುನ್ಮಾಲಿ ಪಾತ್ರ ಮಾಡಿದ ನಿತಿನ್ ಶೆಟ್ಟಿ ಸಿದ್ದಾಪುರ ಅವರು ಸತತ ಎಂಟು ನಿಮಿಷಗಳ ಕಾಲ ಶೃಂಗಾರ ಪದ್ಯಕ್ಕೆ ನಾಟ್ಯ ಮಾಡಿದ್ದನ್ನು ಕಂಡ ಪ್ರೇಕ್ಷಕರು ದಂಗಾದರು. ಸುರಸುಂದರಿ ಮಾಲಿನಿಯನ್ನು ವರಿಸುವ ಸಂಭ್ರಮವನ್ನು ಅವರು ನೃತ್ಯದಲ್ಲಿ ಕಟ್ಟಿಕೊಟ್ಟ ರೀತಿ ಎಲ್ಲರನ್ನೂ ಮನಸೂರೆಗೊಳಿಸಿತು. ಮಹಾಬಲೇಶ್ವರ ಭಟ್ ಕ್ಯಾದಗಿ ಅವರು ತಾವು ಎಂತಹ ಹಾಸ್ಯ ಕಲಾವಿದ ಎಂಬುದನ್ನು ಚೆನ್ನಾಗಿ ತೋರಿಸಿಕೊಟ್ಟರು. ಪುರೋಹಿತನ ಪಾತ್ರದಲ್ಲಿ ಕಂಗೊಳಿಸಿದ ಅವರು, ತಾವೆಂತಹ ಸಮಯಪ್ರಜ್ಞೆ ಇರುವ ಕಲಾವಿದ ಎಂಬುದನ್ನು ಮೇಲಿಂದ ಮೇಲೆ ತೋರಿಸುತ್ತಲೇ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದರು. ಜಿ.ರಾಘವೇಂದ್ರ ಮಯ್ಯ ಮತ್ತು ಉಮೇಶ್ ಮರಾಠೆ ಅವರು ಭಾಗವತಿಕೆ ಮನ ತಣಿಸುವಂತಿತ್ತು.
ಸಂಜೆ 7.15ರ ಸುಮಾರಿಗೆ ಆರಂಭವಾದ ಯಕ್ಷಗಾನ ರಾತ್ರಿ 11ರ ತನಕವೂ ನಡೆಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರು ಒಂದಿಷ್ಟೂ ಕದಲದೆ, ಕೊನೆಯ ತನಕ ಯಕ್ಷಗಾನ ನೋಡಿ, ರಸಾನುಭೂತಿ ಪಡೆದರು. ಯಕ್ಷಗಾನ ಕಲಾಸಕ್ತರು ಹಾಗೂ ಅಭಿಮಾನಿಗಳು ಜನನಿ ವಿವಿದೋದ್ದೇಶ ಸಹಕಾರಿ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು, ಅಬಕಾರಿ ಇಲಾಖಾಧಿಕಾರಿ ಬಾಲಕೃಷ್ಣ, ಕಲಾಭಿಮಾನಿಗಳು ಕಲಾರಸದೌತಣ ಪಡೆದರು.
One attachment • Scanned by Gmail