ಜನಮನಸೆಳೆದಿದ್ದ ಹರಿದಾಸ ಸಾಹಿತ್ಯ;ಬಣ್ಣನೆ


ಹೊನ್ನಾಳಿ.ನ.6; ೧೨ನೇ ಶತಮಾನದಲ್ಲಿ ವಚನ ಸಾಹಿತ್ಯಕ್ಕೆ ಮಹತ್ವ ಲಭಿಸಿತ್ತು. ೧೬ನೇ ಶತಮಾನದಲ್ಲಿ ಹರಿದಾಸ ಸಾಹಿತ್ಯಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು ಎಂದು ನಿವೃತ್ತ ಮುಖ್ಯ ಶಿಕ್ಷಕ ಜಿ.ಎಂ. ಹಿರೇಮಠ ಹೇಳಿದರು.
ತಾಲೂಕು ಕಸಾಪ ಮತ್ತು ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಟಿ.ಬಿ. ವೃತ್ತದ ನಿವೃತ್ತ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಕನಕದಾಸರ ಜೀವನ ದರ್ಶನ” ಕುರಿತು ಅವರು ಉಪನ್ಯಾಸ ನೀಡಿದರು.
ದಾಸ ಸಾಹಿತ್ಯದ ಅಡಿಪಾಯ ಶ್ರೀಪಾದ, ವಾದಿರಾಜರು ಹಾಗೂ ವ್ಯಾಸರಾಯರಾಗಿದ್ದರು. ಎಲ್ಲರ ಮನಗೆದ್ದ ಭಾವೈಕ್ಯತೆ ಮೂರ್ತಿ ಕನಕದಾಸರಾಗಿದ್ದರು ಎಂದು ತಿಳಿಸಿದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎನ್.ಎಚ್. ಗೋವಿಂದಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ, ಟಿ.ಕೆ. ಬೀರಪ್ಪ ವಿರಚಿತ “ಶ್ರೀದೇವಿ ಭಾವ ಲಹರಿ” ಕೃತಿ ಬಿಡುಗಡೆ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಕತ್ತಿಗೆ ಗಂಗಾಧರಪ್ಪ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾನಿಗಳಾದ ಎಚ್.ಕೆ. ರಮೇಶಪ್ಪ, ಕೆ.ಬಿ. ರಾಮು, ನಿವೃತ್ತ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎಫ್. ಬಳಿಗಾರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಖಜಾಂಚಿ ಬಿ.ಎನ್. ಮಹೇಶ್ವರಪ್ಪ, ಮಾಜಿ ಅಧ್ಯಕ್ಷ ಎಂ.ಎಸ್. ರೇವಣಪ್ಪ ಉಪಸ್ಥಿತರಿದ್ದರು.
ಎ.ಜಿ. ಹೇಮಲತಾ, ಎ.ಜಿ. ಸುನಂದ ವಚನ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಯಕ್ಕನಹಳ್ಳಿ ದಿ. ಬನ್ನೇರ ಕೆಂಚಮ್ಮ ಭರಮಪ್ಪ ಸ್ಮರಣಾರ್ಥ ದತ್ತಿ, ತಗ್ಗಿಹಳ್ಳಿ ಶ್ರೀಮತಿ ಶ್ರೀ ಅಂಗಡಿ ನಾಗಮ್ಮ, ಅಂಗಡಿ ಕೆಂಚಪ್ಪ ಹಾಗೂ ಪ್ರಭಾವತಿ ದತ್ತಿ, ಬೋರ್ ಪಾಯಿಂಟ್ ಬೀರಪ್ಪ ಮತ್ತು ಸರೋಜಮ್ಮ ದತ್ತಿ ಉಪನ್ಯಾಸ ಕಾರ್ಯಕ್ರಮಗಳು ನಡೆದವು.