ಜನಮನಗೆದ್ದ ಪುರಸಭೆ ಕಾರ್ಯವೈಖರಿ

ಬ್ಯಾಡಗಿ, ಮಾ 27-ಪಟ್ಟಣದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಉಪಯೋಗಿಸಿಕೊಂಡು ಸಾವಯವ ಗೊಬ್ಬರ ತಯಾರಿಸಿ ಪುರಸಭೆಗೆ ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವತ್ತ ದಾಪುಗಾಲು ಹಾಕುತ್ತಿರುವ ಸ್ಥಳೀಯ ಪುರಸಭೆಯ ಕಾರ್ಯವೈಖರಿ ಜನಮನವನ್ನು ಗೆದ್ದಿದೆ.
ಕಳೆದ ಎರಡು ವರ್ಷಗಳಿಂದ ಹಿಂದೆ ಮನೆ, ಮನೆಯಿಂದ ಕಸವನ್ನು ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿದ ಪುರಸಭೆಯು ಮುಖ್ಯಾಧಿಕಾರಿ ವಿ.ಎಂ. ಪೂಜಾರ ಸಾರಥ್ಯದ ಮಾರ್ಗದರ್ಶನದಲ್ಲಿ ಒಣ ಮತ್ತು ಹಸಿ ಕಸಗಳನ್ನು ಸಂಗ್ರಹಿಸಿ ಅವುಗಳನ್ನು ಪ್ರತ್ಯೇಕವಾಗಿ ಬೇರ್ಪಡಿಸಿ ಸಾವಯವ ಗೊಬ್ಬರ ತಯಾರಿಕೆ ಮಾಡಲು ಮುಂದಾಗಿದ್ದು, ಸಾರ್ವಜನಿಕರಿಂದಲೂ ಈ ಗೊಬ್ಬರಕ್ಕೆ ಬೇಡಿಕೆ ಹೆಚ್ಚುತ್ತಿದೆ. ಪಟ್ಟಣದ ಹೊರವಲಯದಲ್ಲಿ ರಟ್ಟಿಹಳ್ಳಿಗೆ ಹೋಗುವ ರಸ್ತೆಯಲ್ಲಿ ಸುಮಾರು 20ಲಕ್ಷ ರೂಗಳ ವೆಚ್ಚದಲ್ಲಿ ಪುರಸಭೆಯಿಂದ ನಿರ್ಮಿಸಲಾಗಿರುವ ಘನತ್ಯಾಜ್ಯ ವಿಲೇವಾರಿ ಘಟಕವು 5ಎಕರೆ ವಿಸ್ತೀರ್ಣತೆಯನ್ನು ಹೊಂದಿದ್ದು, ಘಟಕದ ಸುತ್ತಲೂ ನೂರಕ್ಕೂ ಹೆಚ್ಚು ತಪಸಿ, ಹೊಂಗೆ, ಬೇವು, ನೇರಳೆ ಸೇರಿದಂತೆ ವಿವಿಧ ಸಸಿಗಳನ್ನು ನೆಡಲಾಗಿದೆ. ಕಳೆದ ಎರಡು ವರ್ಷಗಳಿಂದ ಉತ್ತಮ ಮಳೆ ಆಗುತ್ತಿರುವ ಹಿನ್ನಲೆಯಲ್ಲಿ ಸಸಿಗಳು ಚೆನ್ನಾಗಿ ಬೆಳೆದು ಹಸಿರು ವನಸಿರಿ ಇಡೀ ಘಟಕವನ್ನೇ ಆವರಿಸಿದೆ.
ಪಟ್ಟಣದಲ್ಲಿ ಪ್ರತಿದಿನ 9.5 ಟನ್‍ನಷ್ಟು ಕಸ ಉತ್ಪಾದನೆ ಆಗುತ್ತಿದ್ದು, ಅದರಲ್ಲಿ 4.5 ಟನ್ ಒಣ ಮತ್ತು 3.5 ಟನ್ ಹಸಿ ಕಸವನ್ನಾಗಿ ವಿಂಗಡಣೆ ಮಾಡಲಾಗುತ್ತಿದೆ. ಕಸದ ಸಂಗ್ರಹಣೆಗಾಗಿ 10 ವಾಹನಗಳಿದ್ದು, ಪ್ರತಿದಿನವೂ ಕಸವನ್ನು ಸಂಗ್ರಹಿಸಿ ಘಟಕಕ್ಕೆ ಸಾಗಿಸುವ ವ್ಯವಸ್ಥೆ ಇದೆ. ವಾಹನಗಳು ತಂದು ಸುರಿದ ಕಸವನ್ನು ವೈಜ್ಞಾನಿಕವಾಗಿ ಬೇರ್ಪಡಿಸಲಾಗುತ್ತಿದೆ. ಇದರಲ್ಲಿ ಮರುಬಳಕೆಗೆ ಅನುಕೂಲ ಆಗಿರುವ ಕುಡಿಯುವ ನೀರಿನ ಪ್ಲಾಸ್ಟಿಕ್ ಪ್ಯಾಕೇಟ್‍ಗಳು, ಮದ್ಯದ ಬಾಟಲ್ ಮತ್ತು ರಿಫೀಲ್ ಪ್ಯಾಕ್, ಕಬ್ಬಿಣದ ತುಂಡುಗಳನ್ನು ಬೇರೆ ಬೇರೆಯಾಗಿ ಸಂಗ್ರಹಿಸಲು ಶೆಡ್‍ಗಳನ್ನು ನಿರ್ಮಿಸಲಾಗಿದ್ದು, ಹೀಗೆ ಸಂಗ್ರಹಗೊಂಡ ತ್ಯಾಜ್ಯವನ್ನು ಮುಂದಿನ ದಿನಗಳಲ್ಲಿ ಹರಾಜು ಹಾಕಲು ಯೋಜಿಸಲಾಗಿದೆ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ..
ಘನತ್ಯಾಜ್ಯ ವಿಲೇವಾರಿ ಘಟಕದ ಪಕ್ಕದಲ್ಲಿಯೇ 32ಘಿ65 ಸೈಜಿನಲ್ಲಿ ಶೆಡ್ ನಿರ್ಮಾಣ ಮಾಡಿದ್ದು, ವಿಶಾಲವಾದ ಶೆಡ್’ನಲ್ಲಿ 4ಘಿ16ಸೈಜಿನ 16 ಎರೆಹುಳು ತೊಟ್ಟಿಗಳನ್ನು ನಿರ್ಮಿಸಿ ಅದರಲ್ಲಿ ಖಾಸಗಿಯವರಿಂದ 5ಸಾವಿರ ರೂಗಳ ವೆಚ್ಚದಲ್ಲಿ ಎರೆಹುಳುಗಳನ್ನು ಖರೀದಿಸಿ ಗೊಬ್ಬರ ತಯಾರಿಸಲು ಬಳಸಿದ್ದು, ಅದರಲ್ಲಿ ಮನೆ ಮನೆಯಿಂದ ಸಂಗ್ರಹಿಸಿದ ಹಸಿ ಕಸಗಳನ್ನು ಹಾಕಿ ಗೊಬ್ಬರ ತಯಾರಿಸಲು ಮುಂದಾಗಿದ್ದು, ಪ್ರಥಮ ಹಂತದಲ್ಲಿ 4ಟನ್’ಗಳಷ್ಟು ಸಾವಯವ ಗೊಬ್ಬರ ತಯಾರಿಸಲಾಗುತ್ತಿದೆ. ಈ ಘಟಕದಲ್ಲಿ ನಾಲ್ಕು ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಮಿಕರ ಆರೋಗ್ಯ ಪಾಲನೆ ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕದ ಸ್ವಚ್ಛತೆ ಪಾಲನೆಗೆ ಒತ್ತು ನೀಡಲಾಗುತ್ತಿದೆ. ವಾಸನೆ ಬರದಂತೆ ಮೆಲಾಥಿನ್ ಪೌಡರ್ ಸಿಂಪಡಿಸಲಾಗುತ್ತಿದೆ. ಘನತ್ಯಾಜ್ಯ ವಿಲೇವಾರಿ ಘಟಕದ ಮೂಲಕ ಸಾವಯವ ಗೊಬ್ಬರ ತಯಾರಿಸಲು ಮುಂದೆಜ್ಜೆಯನ್ನಿಟ್ಟು ಕಾರ್ಯ ಪ್ರವೃತ್ತರಾದ ಪುರಸಭಾ ಮುಖ್ಯಾಧಿಕಾರಿ ವಿ.ಎಂ.ಪೂಜಾರ ಈ ಕಾರ್ಯದಲ್ಲಿ ಯಶಸ್ಸನ್ನು ಹೊಂದುವ ಮೂಲಕ ರೈತಾಪಿ ಜನರಿಗೆ ಕಡಿಮೆ ದರದಲ್ಲಿ ಸಾವಯವ ಗೊಬ್ಬರ ಕೈಸೇರುವಂತೆ ಮಾಡಿರುವುದು ಶ್ಲಾಘನೀಯವಾಗಿದ್ದು, ಖಾಸಗಿ ಮಾರಾಟಗಾರರಿಗಿಂತ ಕೈಗೆಟುಕುವ ಕಡಿಮೆ ದರದಲ್ಲಿ ಮಾರಾಟ ಮಾಡಲು ಪುರಸಭೆಯ ವತಿಯಿಂದ ಕ್ರಮ ವಹಿಸಲಾಗಿದೆ.

ಬಾಕ್ಸ್ ..
ಸಾವಯವ ಗೊಬ್ಬರಕ್ಕೆ ಪ್ರಮಾಣ ಪತ್ರ..!!

ಬ್ಯಾಡಗಿ ಪಟ್ಟಣದಲ್ಲಿ ಪ್ರತಿಯೊಂದು ಮನೆಯಿಂದ ಕಸ ಸಂಗ್ರಹಣೆ ಮಾಡಲು ವರ್ಷಕ್ಕೆ 180ರೂಗಳನ್ನು ನಿಗದಿಪಡಿಸಲಾಗಿದೆ. ಸಂಗ್ರಹಣೆಗೊಂಡ ಕಸವನ್ನು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಿ ಅಲ್ಲಿ ಹಸಿಕಸವನ್ನು ಬೇರ್ಪಡಿಸಿ ಸಾವಯವ ಗೊಬ್ಬರ ತಯಾರಿಕೆ ಮಾಡಲು ಬಳಸಲಾಗುತ್ತಿದೆ. ಇಲ್ಲಿ ತಯಾರಿಸಿದ ಗೊಬ್ಬರಕ್ಕೆ ಹೆಬ್ಬಾಳದ ಪ್ರತಿಷ್ಠಿತ ಲ್ಯಾಬ್’ನಿಂದ ಉತ್ತಮ ಗುಣಮಟ್ಟದ ಪ್ರಮಾಣ ಪತ್ರ ದೊರಕಿದ್ದು, ಗೊಬ್ಬರವನ್ನು 25ಕೆಜಿ ಚೀಲದಂತೆ ತಯಾರಿಸಿ, ಪ್ರತಿ ಚೀಲಕ್ಕೆ 75ರೂ ಹಾಗೂ ಕ್ವಿಂಟಾಲಿಗೆ 300 ರೂಗಳಂತೆ ದರ ನಿಗದಿ ಮಾಡಲಾಗಿದೆ. ಈವರೆಗೂ ಪುರಸಭೆಯ ಬೊಕ್ಕಸಕ್ಕೆ 20ಸಾವಿರ ರೂಗಳ ಆದಾಯವನ್ನು ಗಳಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು…

ವಿ.ಎಂ.ಪೂಜಾರ.

ಮುಖ್ಯಾಧಿಕಾರಿ ಪುರಸಭೆ ಬ್ಯಾಡಗಿ.

ಬಾಕ್ಸ್….

ಅಗ್ಗದ ದರದಲ್ಲಿ ಸಾವಯವ ಗೊಬ್ಬರ..!!

“ಕಸದಿಂದ ರಸ” ಎನ್ನುವಂತೆ ಪುರಸಭೆಯ ವ್ಯಾಪ್ತಿಯಲ್ಲಿ ಸಂಗ್ರಹಣೆ ಮಾಡಿದ ಕಸವನ್ನು ಬೇರ್ಪಡಿಸಿ ಸಾವಯವ ಗೊಬ್ಬರ ತಯಾರಿಕೆ ಮಾಡಲು ಮುಂದಾಗಿರುವ ಪುರಸಭೆಯ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಅವರು ರೈತಾಪಿ ವರ್ಗದ ಜನರಿಗೆ ಅಗ್ಗದ ದರದಲ್ಲಿ ಸಾವಯವ ಗೊಬ್ಬರ ಒದಗಿಸಲು ಹಾಗೂ ಪುರಸಭೆಗೆ ಆದಾಯವನ್ನು ಹೆಚ್ಚಿಸುವಲ್ಲಿ ಕ್ರಮ ವಹಿಸಿರುವುದು ನಿಜಕ್ಕೂ ಅಭಿನಂದನೀಯ..,

ಮಂಜುನಾಥ ಪೂಜಾರ.
ಸ್ಥಳೀಯ ನಿವಾಸಿ..