ಜನಪ್ರತಿನಿಧಿಗಳು ಕಳೆದಿದ್ದಾರೆ, ದಯವಿಟ್ಟು ಹುಡುಕಿ ಕೊಡಿ !

ಕಲಬುರಗಿ,ಮಾ.25-ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಕಳೆದಿದ್ದಾರೆ, ದಯವಿಟ್ಟು ಹುಡುಕಿಕೊಡಿ ಎಂದು ಮನವಿ ಮಾಡುವುದರ ಮೂಲಕ ಜೈ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಿದರು.
 2014ರಲ್ಲಿ ಮಂಜೂರಾಗಿ ಉದ್ಘಾಟನೆಗೊಂಡಿದ್ದ ರೈಲ್ವೆ ವಿಭಾಗೀಯ ಕಛೇರಿ ಸೇರಿದಂತೆ ಪ್ರತಿಷ್ಠಿತ, ಯೋಜನೆಗಳಾದ ರೈಲ್ವೇ ವಿಭಾಗೀಯ ಕಛೇರಿ, ಏಮ್ಸ್ ಆಸ್ಪತ್ರೆ' ಜವಳಿ ಪಾರ್ಕ ಮತ್ತು ತೊಗರಿ ತಂತ್ರಜ್ಞಾನ ಪಾರ್ಕ, ಕೇಂದ್ರೀಯ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಎಕ್ಸಲೆನ್ಸ್ ಕೇಂದ್ರ ಈ ಭಾಗದಿಂದ ಕೈಬಿಟ್ಟಿವೆ. ಅನೇಕ ಯೋಜನೆಗಳು ಕೈ ತಪ್ಪಿ ಹೋದರೂ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು, ಶಾಸಕರು, ಸಂಸದರು ಈ ಬಗ್ಗೆ ಚಕಾರವೆತ್ತದೆ ಬಾಯಿಗೆ ಬೀಗ ಹಾಕಿಕೊಂಡು ಮೌನವಾಗಿ ಕುಳಿತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 ಸರಿನ್ ಕಮೀಟಿ ಶಿಫಾರಸ್ಸಿನಂತೆ ಕಲಬುರಗಿಗೆ ರೈಲ್ವೆ ವಿಭಾಗೀಯ ಕಛೇರಿ ಸ್ಥಾಪನೆಗೆ ಅಡಿಗಲ್ಲು ಹಾಕಲಾಗಿತ್ತು. ಆದರೆ, ಏಕಾಏಕಿ ರೈಲ್ವೆ ವಿಭಾಗೀಯ ಕಛೇರಿ ರದ್ದುಪಡಿಸಿರುವುದು ಯಾವ ನ್ಯಾಯ ? ಅಲ್ಲದೆ, ಏಮ್ಸ್ ಆಸ್ಪತ್ರೆಯನ್ನು ಹುಬ್ಬಳ್ಳಿ -ಧಾರವಾಡಕ್ಕೆ ಸ್ಥಳಾಂತರಿಸಿಸುವುದು, ಜವಳಿ ಪಾರ್ಕ, ತೊಗರಿ ತಂತ್ರಜ್ಞಾನ ಪಾರ್ಕ, ಕೇಂದ್ರೀಯ ವಿಶ್ವವಿದ್ಯಾಲಯದ ಸೆಂಟರ್
 ಫಾರ್ ಎಕ್ಸಲೆನ್ಸ್ ಕೇಂದ್ರ ಎಲ್ಲಾ ಪ್ರಮುಖ ಯೋಜನೆಗಳು ಬೇರೆ ಕಡೆ ಸ್ಥಳಾಂತರಿಸಲಾಗಿದೆ. ಆದರೂ ಈ ಭಾಗದ ಚುನಾಯಿತ ಶಾಸಕರು, ಸಂಸದರು ಎಲ್ಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದೊಂದೇ ಯೋಜನೆಗಳನ್ನು ವಾಪಸ್ ಪಡೆಯುತ್ತಿವೆ. ಆದರೂ ಈ ಭಾಗದ ಶಾಸಕರು ಮತ್ತು ಸಂದರು ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದರು.
 ಕಲ್ಯಾಣ ಕರ್ನಾಟಕ ಭಾಗದ ಆಡಳಿತರೂಢ ಬಿಜೆಪಿ ಶಾಸಕರು, ಸಂಸದರನ್ನು ಹುಡುಕಿಕೊಡಬೇಕು, ಅಭಿವೃದ್ಧಿಗೆ ಮುಂದಾಗಬೇಕು. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಚಳಿಗಾಲ ಅಧಿವೇಶನದಲ್ಲಿ ಧ್ವನಿ ಎತ್ತುಬೇಕು ಎಂದು ಆಗ್ರಹಿಸಿದರು.
 ಒಂದು ವೇಳೆ ಕಲಬುರಗಿ ಸೇರಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಮಂಜೂರಾದ ಯೋಜನೆಗಳು ಮರಳಿಸದಿದ್ದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
 ಸಂಘಟನೆಯ ರಾಜ್ಯಾಧ್ಯಕ್ಷ ಮಂಜುನಾಥ ಬಿ, ಹಾಗರಗಿ, ಜಗನ್ನಾಥ ಪಟ್ಟಣಶೆಟ್ಟಿ, ಮಹಿಮೂದ ಯಲಗಾರ, ಬಾಲರಾಜ ಕೊನಳ್ಳಿ, ಶರಣು ಖಾನಾಪೂರೆ, ವಿವೇಕಾನಂದ ಪಾಂಡವ, ರಾಚಣ್ಣ ಪಾಟೀಲ, ರಜನೀಶ ಕೌಂಟೆ, ಪ್ರಭು, ಸಂತೋಷ ಪಾಟೀಲ, ಶಾಂತಕುಮಾರ ವಾಡೇದ, ಆರ್. ಎಸ್. ಪಾಟೀಲ, ಸಿದ್ದು ಹರಸೂರ, ಮಹಿಪಾಲ್, ವಿವೇಕ, ಸಂಗಮೇಶ, ಗುರುರಾಜ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.