ಜನಪ್ರತಿನಿಧಿಗಳಿಗೆ ಮಾದರಿಯಾದ ಶಾಮನೂರು ಕುಟುಂಬ

ದಾವಣಗೆರೆ.ಜೂ.೭; ದೇಶದಲ್ಲೇ ಪ್ರಥಮ‌ ಬಾರಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಕ್ಷೇತ್ರದ ಜನತೆಗೆ ಉಚಿತ ಲಸಿಕೆಯನ್ನು ನೀಡಿ, ದೇಶದ ಎಲ್ಲಾ ಚುನಾಯಿತ ಜನ ಪ್ರತಿನಿಧಿಗಳಿಗೆ ಮಾದರಿಯಾಗಿರುವ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರಿಗೆ ಜನತೆಯ ಪರವಾಗಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅಭಿನಂದಿಸಿದ್ದಾರೆ.ಶಾಸಕ ಶಾಮನೂರು ಅವರು ಇದಕ್ಕೂ ಮೊದಲಿನಿಂದಲೂ ಅನೇಕ ರೀತಿಯಲ್ಲಿ ತಮ್ಮ ಕ್ಷೇತ್ರದ ಜನತೆಗೆ ಪಕ್ಷಭೇದ, ಜಾತಿಬೇಧ ಮಾಡದೆ ಸೇವೆಯನ್ನು ಮಾಡುತ್ತಾ ಬಂದಿದ್ದು, ಅದಕ್ಕೆ ಸಾಕ್ಷಿ ಎಂಬಂತೆ ನಗರದ ತುಂಬೆಲ್ಲಾ ಶಿಕ್ಷಣ ಕೇಂದ್ರಗಳು,ಉತ್ತಮ ದರ್ಜೆಯ ಮುಖ್ಯ ರಸ್ತೆಗಳು,ಸ್ಮಾರ್ಟ್ ಸಿಟಿ,ಅಮೃತ ನಗರ ಎಂಬ ಯೋಜನೆಗೆ ದಾವಣಗೆರೆ ಆಯ್ಕೆಯಾಗಿರುವುದೇ ಸಾಕ್ಷಿ‌ ಎಂದು ಕೊಂಡಾಡಿದ್ದಾರೆ.ಕಳೆದ ವರ್ಷ ಇಡೀ ವಿಶ್ವಕ್ಕೆ ಅಂಟಿರುವ ಮಹಾಮಾರಿ ಕೊರೊನಾದಿಂದ ವಿಶ್ವದೆಲ್ಲೆಡೆ ಜನರು ತತ್ತರಿಸಿಹೋಗಿದ್ದು, ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅದೇ ರೀತಿ ಕೊರೊನಾದ ಎರಡನೇ ಅಲೆಯಲ್ಲಿಯೂ ಸಹ ಕಳೆದ ಬಾರಿಗಿಂತ ಹೆಚ್ಚಾಗಿ ಸಾವು-ನೋವು ಸಂಭವಿಸಿದ್ದು, ಈ ಬಾರಿ ಸರ್ಕಾರದ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಹೆಚ್ಚಿನ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕೇಂದ್ರ ಸರ್ಕಾರದ ಮುತುವರ್ಜಿಯಿಂದ ಕೊರೊನ ನಿಯಂತ್ರಣಕ್ಕೆ ಲಸಿಕೆಯನ್ನು ಕಂಡುಹಿಡಿದಿದ್ದು, ಅದನ್ನು ಸಾರ್ವಜನಿಕರಿಗೆ ವಿತರಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.ಈ ಎಲ್ಲಾ ಬೆಳವಣಿಗೆಗಳನ್ನು ಅರಿತು  ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವರು, ಯುವ ನಾಯಕರೂ ಆದ ಎಸ್.ಎಸ್.ಮಲ್ಲಿಕಾರ್ಜುನ ಅವರು ದೇಶದ ಯಾವ ಶಾಸಕ, ಸಂಸದ, ಸಚಿವರೂ ಯೋಚನೆ ಮಾಡದ ಮಹತ್ಕಾರ್ಯಕ್ಕೆ ನಾಂದಿ ಹಾಡಿದ್ದು, ಇದರ ಫಲವಾಗಿ ದಾವಣಗೆರೆ ಜನತೆಗೆ ಸುಮಾರು 9 ಕೋಟಿ ರೂಪಾಯಿಯ ಲಸಿಕೆಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ನೀಡುವ ವಾಗ್ದಾನ ಮಾಡಿ, ಕೊಟ್ಟ ಮಾತಿನಂತೆ ನಡೆದುಕೊಂಡಿರುವುದು ಶ್ಲಾಘನೀಯ ಎಂದಿದ್ದಾರೆ.ದಾವಣಗೆರೆಯ ಜನತೆಗೆ ಉಚಿತವಾಗಿ ಲಸಿಕೆ ಹಂಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಹಂತ ಹಂತವಾಗಿ ದಾವಣಗೆರೆಯನ್ನು ಸಂಪೂರ್ಣ ಕೊರೊನ ಮುಕ್ತ ನಗರವನ್ನಾಗಿಸಲು ಪಣ ತೊಟ್ಟಿದ್ದಾರೆ. ಪಕ್ಷದ ಎಲ್ಲಾ ಕಾರ್ಯಕರ್ತರು ತಮ್ಮ ಜವಾಬ್ದಾರಿ ಅರಿತು ಪ್ರತಿಯೊಬ್ಬರಿಗೂ ಲಸಿಕೆ ಪಡೆಯಲು ಸಹಕರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.