ಜನಪರ ಸರ್ಕಾರ ಅಧಿಕಾರಕ್ಕೆ ಬರಲು ಸೂಕ್ತ ಅಭ್ಯರ್ಥಿಗಳ ಆಯ್ಕೆ ಮಾಡಿ: ಖರ್ಗೆ

ಕಲಬುರಗಿ,ಏ.17-ಆರ್ಥಿಕ ಸದೃಢತೆ ಹಾಗೂ ಸಾಮಾಜಿಕ ಸಮಾನತೆ ರೂಪಿಸುವಂತ ಸರ್ಕಾರ ತರುವ ಶಕ್ತಿ ಮತದಾರರಿಗೆ ಇದೆ. ಹಾಗಾಗಿ ಮತದಾರರು ತಮ್ಮ ಅಮೂಲ್ಯ ಮತದ ಮೂಲಕ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಜನಪರ ಸರ್ಕಾರ ಬರುವಂತೆ ನೋಡಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಭಂಕೂರು ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಮತಯಾಚಿಸಿ ಅವರು ಮಾತನಾಡುತ್ತಿದ್ದರು.
ಅಸೆಂಬ್ಲಿ ಚುನಾವಣೆಗೆ ಮುನ್ನ ಐದು ಗ್ಯಾರಂಟಿ ಭರವಸೆ ನೀಡಿದ್ದೆವು. ಅದರಂತೆ ಸರ್ಕಾರ ಬಂದಾಗ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ ಎಂದ ಖರ್ಗೆ, ಗೃಹ ಲಕ್ಷ್ಮೀ ಯೋಜನೆಯಡಿಯಲ್ಲಿ ಪ್ರತಿತಿಂಗಳು ಮನೆಯ ಯಜಮಾನಿಗೆ ರೂ 2000, ಗೃಹಜ್ಯೋತಿ ಯೋಜನೆಯಡಿಯಲಿ 200 ಯೂನಿಟ್ ವರೆಗೆ ವಿದ್ಯುತ್ ಉಚಿತ, ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಅಕ್ಕಿ, ಯುವನಿಧಿ ಯೋಜನೆಯಡಿಯಲ್ಲಿ ಪದವಿ ಹಾಗೂ ಡಿಪೆÇೀಮಾ ಪದವಿಧರರಿಗೆ ರೂ 1500 ಹಾಗೂ ರೂ 3000 ಪ್ರತಿತಿಂಗಳ ನೀಡಲಾಗುತ್ತಿದೆ ಹಾಗೂ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಸರ್ಕಾರಿಬಸ್ ಗಳಲ್ಲಿ ಉಚಿತ ಪ್ರಯಾಣದ ಅವಕಾಶ ನೀಡಲಾಗುತ್ತಿದೆ. ಈ ಎಲ್ಲ ಯೋಜನೆಗಳನ್ನು ಜಾರಿಗೆ ತರಲು ವಾರ್ಷಿಕ 52,000 ಕೋಟಿ ರೂಪಾಯಿ ಬೇಕಾಗುತ್ತದೆ.ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಮಹಿಳೆಯರಿಗೆ ಆರ್ಥಿಕ ಸಬಲತೆ ರೂಪಿಸುವ ಯೋಜನೆಗಳು ನಮ್ಮ ಸರ್ಕಾರದ ಸಾಧನೆಯಾಗಿದೆ ಎಂದರು.
ಬೆಲೆ ಏರಿಕೆ, ಸಿಲಿಂಡರ್ ಬೆಲೆ ಏರಿಕೆ, ಪೆಟ್ರೋಲ್ ಡಿಸೇಲ್ ಆರ್ಥಿಕ ಅಸಮಾನತೆ,ನಿರುದ್ಯೋಗ, ರೈತರ ಆತ್ಮಹತ್ಯೆ, ವಿಧ್ಯಾರ್ಥಿಗಳು ಶಾಲೆಯಿಂದ ಹೊರಗೆ ಇದ್ದಾರೆ, ರೈತರ ಆದಾಯ ದುಪ್ಪಟ್ಟಾಗಲಿಲ್ಲ, ಕನಿಷ್ಠ ಬೆಂಬಲ ಬೆಲೆ ಈ ಎಲ್ಲ ಸಮಸ್ಯೆಗಳು ಇನ್ನೂ ಜೀವಂತವಿದೆ. ಆದರೂ ಮೋದಿಯ ಅಚ್ಛೆದಿನ್ ಆಡಳಿತದಲ್ಲಿವೆ ಎಂದು ಜಾಧವ ಹೇಳುತ್ತಾರೆ ಎಂದು ಟೀಕಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಬೆಳವಣಿಗೆಗೆ ಅನುಕೂಲವಾಲು ಆರ್ಟಿಕಲ್ 372 ಎ ಜಾರಿಗೆ ತರಲು ಅಂದಿನ ಬಿಜೆಪಿ ಸರ್ಕಾರ ತಿರಸ್ಕಾರ ಮಾಡಿತ್ತು. ಆದರೆ ಮಲ್ಲಿಕಾರ್ಜುನ ಖರ್ಗೆ ಅವರು ಎಂಪಿಯಾಗಿ ಆರಿಸಿ ಹೋದಾಗ ಇದನ್ನು ಜಾರಿಗೆ ತಂದರು. ಪರಿಣಾಮವಾಗಿ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ನೀಡಲಾಗುತ್ತದೆ ಎಂದು ಹೇಳಿದರು.
ಹತ್ತು ವರ್ಷದಲ್ಲಿ ಮೋದಿ ಸರ್ಕಾರದ ಸಾಧನೆ ಏನಿದೆ ಎಂದು ಪ್ರಶ್ನಿಸಿದ ಖರ್ಗೆ, ರಾಜ್ಯದಲ್ಲಿ ಭೀಕರ ಬರಗಾಲ ಇದೆ ತಂಡ ಕಳಿಸಿ ಎಂದು ಮನವಿ ಮಾಡಿತ್ತು. ಅಧಿಕಾರಿಗಳ ತಂಡ ಬಂದು ಸಮೀಕ್ಷೆ ಮಾಡಿತು. ಅವರ ವರದಿಯಂತೆ 48 ಲಕ್ಷ ಹೆಕ್ಟರ್ ಬೆಳೆ ಹಾನಿಯಾಗಿದೆ ಹಾಗಾಗಿ 18,171 ಕೋಟಿ ಬರ ಪರಿಹಾರ ನೀಡಿ ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ನಯಾಪೈಸೆ ಬಿಡುಗಡೆ ಮಾಡಿಲ್ಲ. ಬರ ಇರುವುದರಿಂದ ನರೇಗಾ ಯೋಜನೆಯಡಿಯಲ್ಲಿ ಮಾನವ ದಿನಗಳನ್ನು 150 ದಿನಗಳಿಗೆ ಹೆಚ್ಚಿಸುವ ಕುರಿತು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಜಾಧವ ಈ ಬಗ್ಗೆ ಮಾತನಾಡಲಿ ಎಂದು ಅಗ್ರಹಿಸಿದರು.
ನಮ್ಮ ಗ್ಯಾರಂಟಿಗಳ ಕಾಪಿ ಮಾಡಿರುವ ಬಿಜೆಪಿ ಈಗ ಮೋದಿ ಹೆಸರಲ್ಲಿ ಗ್ಯಾರಂಟಿ ಎಂದು ಹೇಳುತ್ತಿದೆ. ಅವುಗಳಿಗೆ ವಾರಂಟಿ ಇಲ್ಲ, ಅವು ಏನಿದ್ದರೂ ಪೇಪರ್ ಮೇಲಿರುವ ಗ್ಯಾರಂಟಿಗಳು ನಮ್ಮ ಗ್ಯಾರಂಟಿಗಳು ಜನರ ಕೈಯಲ್ಲಿ ಇವೆ ಎಂದರು.
ವಂದೇ ಭಾರತ ಎಕ್ಸಪ್ರೆಸ್ ರೇಲ್ವೆ ಹಣವಂತರು ಪ್ರಯಾಣಿಸುವ ರೇಲ್ವೆ ಎಂದು ಟೀಕಿಸಿದ ಸಚಿವರು, ಈ ರೇಲ್ವೆ ಬಿಟ್ಟಿದ್ದೇ ಜಾಧವ ಸಾಧನೆ. ಒಂದು ಟ್ರೇನ್ ಬಿಟ್ಟಿದ್ದಕ್ಕೆ ಹಸಿರು ಧ್ವಜ ತೋರಿಸಿದ್ದಾರೆ. ಸ್ಟೇಷನ್ ಮಾಸ್ಟರ್ ಮಾಡುವ ಕೆಲಸ ಇದು. ಖರ್ಗೆ ಅವರು 27 ಹೊಸ ರೇಲ್ವೆಗಳನ್ನು ಓಡಿಸಿದರೂ ಒಮ್ಮೆಯೂ ಧ್ವಜ ತೋರಿಸಲು ಹೋಗಿಲ್ಲ. ಈ ಟ್ರೇನ್ ಓಡಾಡುತ್ತಿರುವುದೇ ಕಾಂಗ್ರೆಸ್ ಹಾಕಿದ ಹಳಿಗಳ ಮೇಲೆ ಎಂದು ಹೇಳಿದರು.
ಹೋದ ಸಲದ ಚುನಾವಣೆಯಲ್ಲಿ ನಮಗೆ ಹಿನ್ನೆಡೆಯಾಗಿದೆ. ಅದರ ಪರಿಣಾಮ ಅಭಿವೃದ್ದಿಗೆ ಭಾರೀ ಹಿನ್ನಡೆಯಾಯಿತು. ಈ ಸಲ ಹಾಗೆ ಮಾಡಬೇಡಿ, ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಆಶೀರ್ವಾದ ಮಾಡಿ. ರಾಧಾಕೃಷ್ಟ ಅವರು ಚಿತ್ತಾಪುರದ ಮಗ. ಚಿತ್ತಾಪುರ ಮಗನಿಗೆ ಮತ ಹಾಕ್ತೀರಾ ಅಥವಾ ಚಿಂಚೋಳಿ ಎಂಪಿ ಮತ ಹಾಕುತ್ತೀರಾ ? ಎಂದು ಕೇಳಿದರು.
ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ಅವರಿಗೆ ಗೆಲ್ಲಿಸಿದಂತೆ ನನಗೂ ಮತ ಹಾಕಿ ಗೆಲ್ಲಿಸಿ ನಿಮ್ಮ ಸೇವೆ ಮಾಡುವ ಅವಕಾಶ ನೀಡಿ ಎಂದು ಮನವಿ ಮಾಡಿದರು.
ಮಾಜಿ ಸಚಿವ ಬಾಬುರಾವ ಚಿಂಚನಸೂರು ಮಾತನಾಡಿ ಉಮೇಶ ಜಾಧವ ಸುಳ್ಳುಗಾರ. ಅವನು ಕೋಲಿ ಸಮಾಜವನ್ನು ಎಸ್ ಟಿ ಸೇರಿಸುವುದಾಗಿ ಹೇಳಿದ್ದರಿಂದ ನಾನು ಬಿಜೆಪಿಗೆ ಹೋದೆ. ಆದರೆ, ಮೋಸ ಮಾಡಿದ. ಅವನ ಮಾತನ್ನು ನಂಬಬೇಡಿ ಊರಿಗೆ ಬಂದರೆ ಆಚೆಗೆ ಕಳಿಸಿ ಎಂದರು.
ವೇದಿಕೆಯ ಮೇಲೆ ಎಂ ಎಲ್ ತಿಪ್ಪಣ್ಣಪ್ಪ ಕಮಕನೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೆಮೂದ್ ಸಾಹೇಬ್, ಭಾಗನಗೌಡ ಸಂಕನೂರು, ಶಿವಾನಂದ ಪಾಟೀಲ ಮರತೂರು, ಡಾ ರಸೀದ್, ಚಂದ್ರಿಕಾ ಪರಮೇಶ್ವರಿ, ರಮೇಶ ಮರಗೋಳ, ಶಂಭುಲಿಂಗ ಗುಂಡಗುರ್ತಿ, ಮಲ್ಲಿಕಾರ್ಜುನ ಪೂಜಾರಿ, ಸುರೇಶ ಮೆಂಗನ್, ದೇವಿಂದ್ರಪ್ಪ ಮರತೂರು, ರಾಜಗೋಪಾಲರೆಡ್ಡಿ ಸೇರಿದಂತೆ ಹಲವರಿದ್ದರು.