ಜನಪರ ಯೋಜನೆಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯ

ಧಾರವಾಡ, ಆ.17: ರಾಜ್ಯ ಸರಕಾರವು ಬಡವರ ಉತ್ತಮ ಬದುಕಿಗೆ ಆದ್ಯತೆ ನೀಡಿದ್ದು, ಜನಪರ ಯೋಜನೆಗಳ ಮೂಲಕ ಸಾಮಾಜಿಕ ಬದಲಾವಣೆ ತರಲು ಪ್ರಯತ್ನಿಸುತ್ತಿದೆ. ಶಕ್ತಿ ಯೋಜನೆ, ಅನ್ನ ಭಾಗ್ಯ, ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ, ಯುವನಿಧಿ ಅಂತಹ ನೂತನ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.

ಅವರು ಸೃಜನಾ ರಂಗಮಂದಿರದಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು  ಕಂಪನಿ ಆಯೋಜಿಸಿದ್ದ ರಾಜ್ಯಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಜ್ಯೋತಿಗೆ ಚಾಲನೆ ನೀಡಿ ಮಾತನಾಡಿದರು. 
ರಾಜ್ಯಸರ್ಕಾರವು ಚುನಾವಣಾ ಪೂರ್ವ ನೀಡಿದ್ದ ಭರವಸೆಗಳನ್ನು ಈಡೇರಿಸಲು ಮೊದಲ ಆಧ್ಯತೆ ನೀಡಿದೆ. ಸುಮಾರು 60,000 ರೂ. ಕೋಟಿ ವೆಚ್ಚದಲ್ಲಿ ಪಂಚ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಬಡವರ ಪರ ಅಗತ್ಯವಿರುವ ಎಲ್ಲಾ ರೀತಿಯ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಬದ್ಧತೆ ಇದೆ ಎಂದು ಅವರು ಹೇಳಿದರು. 

ಯುವಕರು ವಿಶೇಷವಾಗಿ ರಾಜಕೀಯಕ್ಕೆ ಬರಬೇಕು. ಯುವಕರಿಂದ ಸಾಮಾಜಿಕ, ಆರ್ಥಿಕ ಬದಲಾವಣೆ ಸಾಧ್ಯ. ಉತ್ತಮ ನಾಯಕತ್ವ ಬೆಳೆಸಲು ರಾಜಕೀಯ ಅವಕಾಶ ನೀಡುತ್ತದೆ. ಯುವಸಮುದಾಯ ಸೇವಾ ಮನೋಭಾವ ಬೆಳೆಸಿಕೊಳ್ಳಲು ರಾಜಕೀಯ ಸೇರಬೇಕೆಂದು ಸಚಿವರು ತಿಳಿಸಿದರು.

ಗೃಹಜ್ಯೋತಿ ಯೋಜನೆಯು ಧಾರವಾಡ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಗಳಿಸಿದ್ದು, ಉಳಿದ ಗ್ರಾಹಕರು ಸಹ ಗೃಹಜ್ಯೋತಿ ಯೋಜನೆಗೆ ನೊಂದಾಯಿಸಿಕೊಳ್ಳಲು ಹೆಸ್ಕಾಂ ಸೂಕ್ತ ಪ್ರಚಾರ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕೆಂದು ಅವರು ತಿಳಿಸಿದರು. ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಳನ್ನು ಜಾರಿಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಶಾಸಕ ಎನ್.ಎಚ್. ಕೋನರಡ್ಡಿ ಅವರು ಮಾತನಾಡಿ, ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯನ್ನು ರಾಜ್ಯ ಸರಕಾರ ಈಡೇರಿಸಿದೆ. ರೈತರಿಗೆ ಮತ್ತು ಗ್ರಾಹಕರಿಗೆ ತೊಂದರೆ ಆಗದಂತೆ ವಿದ್ಯುತ್ ಪೂರೈಕೆ ಮಾಡಬೇಕು ಮತ್ತು ಗೃಹಜ್ಯೋತಿ ಯೋಜನೆ ಯಶಸ್ವಿಗೊಳಿಸಬೇಕು ಎಂದು ಅವರು ಹೇಳಿದರು. ಹೆಸ್ಕಾಂ ಅಧಿಕಾರಿ ಮತ್ತು ಸಿಬ್ಬಂದಿಗಳು ಇನ್ನಷ್ಟು ಕ್ರಿಯಾಶೀಲವಾಗಿ, ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಹೇಳಿದರು.

ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ ರೋಷನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಗೃಹಜ್ಯೋತಿ ಯೋಜನೆಗೆ ಉತ್ತಮ ಸ್ಪಂದನೆ ಸೀಗುತ್ತಿದೆ. ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಈಗಾಗಲೇ ಶೇ.90 ರಷ್ಟು ಮತ್ತು ಧಾರವಾಡ ಜಿಲ್ಲೆಯಲ್ಲಿ ಶೇ.80 ರಷ್ಟು ಗ್ರಾಹಕರು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಧಾರವಾಡ ಜಿಲ್ಲೆಯ ಸುಮಾರು 5.4 ಲಕ್ಷ ಆರ್.ಆರ್ ನಂಬರಗಳ ಪೈಕಿ 4.2 ಲಕ್ಷ ಗ್ರಾಹಕರು ಆಗಸ್ಟ್ ತಿಂಗಳಲ್ಲಿ ಗೃಹಜ್ಯೋತಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.