ಜನಪರ ಯೋಜನೆಗಳನ್ನು ಪ್ರತಿ ಮನೆಗೆ ತಲುಪಿಸಿ

ನವಲಗುಂದ,ಜ22: ಅಮೃತ ಗ್ರಾಮ ಪಂಚಾಯತಿ, ಅಮೃತ ಗ್ರಾಮೀಣ ವಸತಿ, ಅಮೃತ ಆರೋಗ್ಯದಂತಹ ಅನೇಕ ಬಡವರಿಗಾಗಿ ಇದ್ದ ಯೋಜನೆಗಳು ತಲುಪಿಸುವ ಕಾರ್ಯ ವಿಜಯ ಸಂಕಲ್ಪ ಅಭಿಯಾನದಲ್ಲಿ ಸಾಕಾರಗೊಳ್ಳಬೇಕೆಂದು ಜವಳಿ ಹಾಗೂ ಕೈಮಗ್ಗ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಹೇಳಿದರು.
ಅವರು ಪಟ್ಟಣದ ವಿನಾಯಕ ಪೇಟೆಯಲ್ಲಿರುವ ಗಣಪತಿ ದೇವಸ್ಥಾನದಲ್ಲಿ ವಿಜಯ ಸಂಕಲ್ಪ ಅಭಿಯಾನವನ್ನು ಉದ್ಟಾಟಿಸಿ ಮಾತನಾಡಿದರು.
ಬೂತ್ ಮಟ್ಟದ ಅಧ್ಯಕ್ಷರು ಕಾರ್ಯಕರ್ತರು ಪ್ರತಿ ಮನೆಗೆ ಭೇಟಿ ನೀಡಿ ಯೋಜನೆಗಳ ಬಗ್ಗೆ ತಿಳಿಸಬೇಕು ಮನವರಿಕೆ ಆಗುವವರೆಗೂ ಬಿಜೆಪಿ ಸರಕಾರದ ಯೋಜನೆಗಳು ತಿಳಿಸುವ ಜವಾಬ್ದಾರಿ ತಮ್ಮ ಮೇಲಿದೆ ಎಂದು ಹೇಳಿದರು.
ಬಿಜೆಪಿ ಸರಕಾರದಲ್ಲಿ ಮಹಾದಾಯಿ ಕಳಸಾ ಬಂಡೂರಿ ಯೋಜನೆಗೆ ಡಿ.ಪಿ.ಆರ್. ಅನುಮೋದನೆಯನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಭೂಮಿ ಪೂಜೆ ಮಾಡಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ವಿಜಯ ಸಂಕಲ್ಪ ಉದ್ಟಾಟಿಸಿ ಮಾತನಾಡಿ ಅರವತ್ತು ವರ್ಷ ಕಾಂಗ್ರೆಸ್‍ನವರಿಗೆ ಮಾಡಲಾಗದ ಕೆಲಸ ಕಾರ್ಯಗಳನ್ನು ಕೇವಲ ಎಂಟು ವರ್ಷಗಳಲ್ಲಿ ಪ್ರದಾನಮಂತ್ರಿ ನರೇಂದ್ರ ಮೋದಿಜಿಯವರು ಮಾಡಿ ತೋರಿಸಿದ್ದಾರೆ. ಅವರ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಬೂತ್ ಮಟ್ಟದ ಕಾರ್ಯಕರ್ತರು ಮಾಡಬೇಕಾಗಿದೆ ಎಂದು ಹೇಳಿದರು.
ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನಪರ ಯೋಜನೆಗಳನ್ನು ನೀಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರದಲ್ಲಿರುವ ಬಿಜೆಪಿ ಪಕ್ಷದ ಯೋಜನೆಗಳನ್ನು ಬೂತ್ ಮಟ್ಟದಲ್ಲಿ ಸೈನಿಕರಂತೆ ಕಾರ್ಯವನ್ನು ಮಾಡಬೇಕೆಂದು ಹೇಳಿದರು.
ಪ್ರಾಸ್ತಾವಿಕವಾಗಿ ರಾಯನಗೌಡ ಪಾಟೀಲ ಮಾತನಾಡಿ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ 105 ನವಲಗುಂದ, 63 ಅಣ್ಣಿಗೇರಿ, 66 ಹುಬ್ಬಳ್ಳಿ ತಾಲೂಕ ಸೇರಿ 234 ಬೂತ್‍ಗಳಿರುತ್ತವೆ. ಒಟ್ಟು 18,500 ಮತದಾರರು ಪಟ್ಟಣದಲ್ಲಿ ಇದ್ದು ಬೂತ್ ಅಧ್ಯಕ್ಷರು ಕಾರ್ಯಕರ್ತರು ಚುನಾವಣೆಯಲ್ಲಿ ಉತ್ತಮ ಕೆಲಸವನ್ನು ಮಾಡಬೇಕೆಂದು ಕರೆ ನೀಡಿದರು.
ವಿಜಯ ಸಂಕಲ್ಪ ಅಭಿಯಾನವನ್ನು ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಉದ್ಟಾಟಿಸಿ ಮತದಾರ ಮನೆಗೆ ತೆರಳಿ ಕರಪತ್ರವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಂಡಳದ ಅಧ್ಯಕ್ಷ ಎಸ್.ಬಿ.ದಾನಪ್ಪಗೌಡರ, ಎ.ಬಿ.ಹಿರೇಮಠ, ವಿಸ್ತಾರಕ ಬಸವರಾಜ ಮಠಪತಿ, ಎನ್.ಪಿ.ಕುಲಕರ್ಣಿ, ಶಾಂತಾ ನಿಡವಣೆ, ಸಿದ್ದನಗೌಡ ಪಾಟೀಲ(ಅಡ್ನೂರ), ಮಹಾಂತೇಶ ಕಲಾಲ, ಶಂಕರಗೌಡ ರಾಯನಗೌಡ್ರ. ಬಸವರಾಜ ಕಾತರಕಿ, ವೀರಣ್ಣ ಚವಡಿ, ಸಿದ್ದಪ್ಪ ಜನ್ನರ, ಎಮ್.ಬಿ.ತೋಟಿ, ಶರಣಪ್ಪ ಹಕ್ಕರಕಿ, ಗೀತಾ ಜನ್ನರ, ಜ್ಯೋತಿ ಗೊಲ್ಲರ, ವಿಜಯಾ ಕಲಾಲ ಇತರರು ಇದ್ದರು.