ಜನಪರ ಮಾದರಿ ಬಜೆಟ್:ವಕೀಲ ಕೆ.ನರೇಂದ್ರಬಾಬು

ಕೋಲಾರ,ಜು,೮- ಭದ್ರತಾ ಘೋಷಣೆಯ ಯೋಜನೆಗಳ ಹಾದಿಯಲ್ಲಿ ನಡೆದಿರುವ ರಾಜ್ಯ ಆಡಳಿತ ಸರ್ಕಾರವು ಜನಪರ ಬಜೆಟ್ ಮಂಡಿಸಿರುವುದು ಸ್ವಾಗತಾರ್ಹ ಎಂದು ಆಲ್ ಇಂಡಿಯಾ ಅಡ್ವೊಕೇಟ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಹಾಗೂ ಖ್ಯಾತ ವಕೀಲ ಕೆ.ನರೇಂದ್ರಬಾಬು ಸ್ವಾಗತಿಸಿದ್ದಾರೆ.
ಬಜೆಟ್ ಮಂಡನೆ ಎಂದರೆ ಆಡಳಿತ ಸರ್ಕಾರದ ಹೆಗ್ಗುರಿತನ್ನು ಸ್ಥಾಪಿಸುವುದು. ಬೃಹತ್ ಯೋಜನೆಗಳನ್ನು ಪ್ರಕಟಿಸುವುದು ಎಂದೇ ಕೆಲವು ವರ್ಷಗಳಿಂದ ಅರ್ಥೈಸಲಾಗುತ್ತಿತ್ತು. ಆದರೆ ರಾಜ್ಯ ಜನತೆಯ ನಿರೀಕ್ಷೆಗಳಿಗೆ, ಅಗತ್ಯಗಳಿಗೆ, ಅನಿವಾರ್ಯತೆಗಳಿಗೆ ಆಧರಿಸುವುದೇ ಬಜೆಟ್ ಮಂಡನೆ ಎಂದು ಈ ಬಾರಿಯ ರಾಜ್ಯ ಆಡಳಿತ ಸರ್ಕಾರ ಮಾದರಿ ಬಜೆಟ್‌ನ್ನು ಮಂಡಿಸಿದೆ.
ಯಾವುದೇ ಪರ-ವಿರೋಧ ಚರ್ಚೆ ನಡೆಸದೇ, ಯಾವುದೇ ಅಗತ್ಯ ಸಿದ್ಧತೆ ಮಾಡಿಕೊಳ್ಳದೇ, ಯಾವುದೇ ತಜ್ಞರ ಅಭಿಪ್ರಾಯಗಳನ್ನೂ ಆಲಿಸದೇ, ಇದೇ ರೀತಿ ಡಿಮಾನೆಟೈಸೇಷನ್ ಆದ ಸಂದರ್ಭದಲ್ಲಿ ನಮ್ಮ ರಾಷ್ಟ್ರದಲ್ಲಿ, ಇತರೆ ರಾಷ್ಟ್ರಗಳಲ್ಲಿ ಎದುರಾದ ಸಮಸ್ಯೆ, ಅನಾನುಕೂಲಗಳನ್ನೂ ಅಧ್ಯಯಿಸದೇ ಏಕಾಏಕಿ ರಾತ್ರೋರಾತ್ರಿ ಡಿಮಾನೆಟೈಸೇಷನ್ ಜಾರಿಗೊಳಿಸಿದ್ದೇ ರಾಷ್ಟ್ರದ ಇಡೀ ಆರ್ಥಿಕ ವ್ಯವಸ್ಥೆಗೆ ಮುಂದಿನ ಐವತ್ತು ವರ್ಷ ಕಾಲದವರೆಗೂ ಸರಿಪಡಿಸಿಕೊಳ್ಳಲಾಗದ ಧಕ್ಕೆಯಾಗಿತ್ತು. ಕೆಳ ಮಾಧ್ಯಮ ವರ್ಗ ಜನತೆ, ತೀರಾ ಕೆಳ ಹಂತದ ವ್ಯಾಪಾರಿಗಳಿಗೆ ಇದು ಬಹುದೊಡ್ಡ ಹೊಡೆತವೇ ಆಗಿತ್ತು. ಇದರಿಂದ ಶೇ.೬೦ಕ್ಕೂ ಹೆಚ್ಚು ರಾಜ್ಯಜನತೆಯ ಆರ್ಥಿಕತೆಯ ಬೆನ್ನು ಮುರಿಯಲಾಗಿತ್ತು !
ಪ್ರತಿ ಸರಕು, ಸೇವೆಯ ಮೇಲೆಯೂ ಅವೈಜ್ಞಾನಿಕ, ಅತಿಯೆನಿಸಿದ ಜಿಎಸ್‌ಟಿ ವಿಧಿಸುತ್ತಿರುವುದು ಇಡೀ ರಾಜ್ಯದ ಪ್ರತಿಯೊಬ್ಬರಿಗೂ ಹೊರಲಾರದ ಅತಿ ದೊಡ್ಡ ಬಾರವೇ ಆಗಿದೆ. ಆರ್ಥಿಕವಾಗಿ ಚೆನ್ನಾಗಿರುವವರು ಈ ಹೊರೆಯ ಬಾರವನ್ನು ಹೊತ್ತರೂ ಕೆಳ ಮಾಧ್ಯಮ ವರ್ಗದ ಜನತೆಗೆ ಇದು ನಿಜಕ್ಕೂ ಹೊರಲಾರದ ಹೊರೆಯೇ ಆಗಿದೆ. ಆದಾಯಕ್ಕೂ ಮೀರಿ ಖರ್ಚು ಆಗುತ್ತಿದೆ. ಉಳಿತಾಯವು ಕನ್ನಡಿಯ ಗಂಟೆನಿಸಿದೆ. ದುಡಿಮೆಯನ್ನು ಉಂಡು ಕುಳಿತರೆ ಮಕ್ಕಳ ಶಾಲಾ-ಕಾಲೇಜು ಫೀಸನ್ನು ಪಾವತಿಸುವುದು ಹೇಗೆ, ಅಕಸ್ಮತ್ತಾಗಿ ಬಂದ ಆಸ್ಪತ್ರೆ ಖರ್ಚು ನಿಭಾಯಿಸುವುದು ಹೇಗೆ, ಮಕ್ಕಳ ಮದುವೆ ಮಾಡುವುದು ಹೇಗೆ, ಅಕಸ್ಮಾತ್ತಾಗಿ ಖಾಯಿಲೆ ಬಂದು ಮಲಗಿದರೆ, ಅಪಘಾತದಲ್ಲಿ ಅಂಗವಿಕಲತೆಯಾದರೆ ಜೀವನ ನಡೆಸುವುದು ಹೇಗೆ ಎಂಬ ಪ್ರಶ್ನೆ ರಾಜ್ಯದ ಶೇ.೮೦ಕ್ಕೂ ಹೆಚ್ಚು ಜನಕ್ಕೆ ಬಂದಿದೆ.
ರಾಜ್ಯ ಜನತೆಗೆ ದುಡಿಯುವ ಕೈಗಳಿಗೆ ಕೆಲಸ, ಹೊಟ್ಟೆ ತುಂಬಾ ಊಟ, ಅನಾರೋಗ್ಯವಾದಾಗ ಉಚಿತ ಚಿಕಿತ್ಸೆ, ಉಚಿತ ಹಾಗೂ ಉತ್ತಮ ಶಿಕ್ಷಣ ಬೇಕಿದೆ. ಪ್ರಸಕ್ತ ಬಜೆಟ್ ಈ ಎಲ್ಲಾ ಜನಪರ ಬೇಡಿಕೆಗಳಿಗೆ ನೀಡಿದ ಉತ್ತರ ಖಂಡಿತಾ ಆಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ