ಜನಪರ ಬಜೆಟ್ ಮಂಡನೆಗೆ ಸಿಎಂ ತಯಾರಿ

ಬೆಂಗಳೂರು,ಜ,೧೪-ರಾಜ್ಯದ ಈ ಸಾಲಿನ ಬಜೆಟ್ ಫೆ. ೧೭ಕ್ಕೆ ಮಂಡಿಸುವ ಸುಳಿವು ನೀಡಿರುವ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಈ ಬಾರಿಯ ಬಜೆಟ್ ಜನಪರ ಬಜೆಟ್ ಆಗಲಿದೆ. ಜನ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಹೊಸ ಯೋಜನೆಗಳನ್ನು ಪ್ರಕಟಿಸುವುದಾಗಿ ಹೇಳಿದ್ದಾರೆ.
ಬೆಂಗಳೂರಿನ ರೇಸ್‌ಕೋರ್ಸ್‌ನ ಅಧಿಕೃತ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು, ಮಹಿಳೆಯರು ಹಾಗೂ ಯುವ ಸಮುದಾಯದವರಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದರು.
ಬಜೆಟ್ ಮಂಡನೆ ಹಾಗೂ ಅಧಿವೇಶನದ ದಿನಾಂಕವನ್ನು ಈ ತಿಂಗಳ ೧೭ ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮಗೊಳಿಸಲಾಗುವುದು, ಫೆ. ೧೭ ಕ್ಕೆ ಬಜೆಟ್ ಮಂಡನೆ ಸಾಧ್ಯತೆ ಇದೆ ಎಂದರು.
ಚುನಾವಣೆ ಹತ್ತಿರದಲ್ಲಿರುವುದದಿಂದ ಈ ಬಜೆಜ್ ಚುನಾವಣೆ ಬಜೆಟ್ ಆಗಲಿದೆ. ಚುನಾವಣಾ ಬಜೆಟ್ ನಿಜ, ಆದರೆ, ಅನುಷ್ಠಾನಕ್ಕೆ ಯೋಗ್ಯವಾದ ಕಾರ್ಯಕ್ರಮಗಳನ್ನು ಪ್ರಕಟಿಸುತ್ತೇವೆ. ಕಾಂಗ್ರೆಸ್‌ನವರು ಹೇಳಿರುವಂತೆ ಅನುಷ್ಠಾನ ಮಾಡಲು ಸಾಧ್ಯವಾಗದ ಉಚಿತ ೨೦೦ ಯುನಿಟ್ ವಿದ್ಯುತ್ ನೀಡಿಕೆಯ ಘೋಷಣೆಗಳನ್ನು ಮಾಡುವುದಿಲ್ಲ ಎಂದರು.
ಈ ಬಜೆಟ್‌ನಲ್ಲಿ ಸ್ತ್ರೀ ಶಕ್ತಿ, ಸ್ತ್ರೀ ಸಾಮರ್ಥ್ಯ ಸಬಲೀಕರಣಕ್ಕೆ ವಿಶೇಷ ಯೋಜನೆಯನ್ನು ಮಾಡುತ್ತೇವೆ. ಕುಟುಂಬ ನಿರ್ವಹಣೆಗೆ ಪ್ರತಿಯೊಂದು ಕುಟುಂಬದ ಹೆಣ್ಣು ಮಗಳಿಗೆ ಇಂತಿಷ್ಟು ಸಾವಿರ ಹಣ ನೀಡುವ ಯೋಜನೆಯನ್ನೂ ಜಾರಿ ಮಾಡಲಾಗುವುದು ಎಂದು ಅವರು ಹೇಳಿದರು.
ಕೇಂದ್ರ ವಿತ್ತ ಸಚಿವರ ಜತೆ ಈಗಾಗಲೇ ಸಭೆ ನಡೆಸಲಾಗಿದೆ. ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹೆಚ್ಚಿನ ನೆರವು ಸಿಗಲಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡುವಂತೆ ಕೋರಿದ್ದೇವೆ ಎಂದರು.