
ವಿಜಯಪುರ:ಮೇ.15: ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲರು ಮಾಡಿರುವ ಜನಪರ ಕೆಲಸಗಳು ಫಲ ನೀಡುತ್ತಿದ್ದು, ಇದನ್ನು ಬೆಂಬಲಿಸಿ ಬಬಲೇಶ್ವರ ಮತಕ್ಷೇತ್ರದ ಮತದಾರರು ಆಶೀರ್ವದಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಮತದಾರರು ವಿರೋಧಿಗಳ ನಾಟಕಗಳಿಗೆ ಗಮನ ನೀಡದೇ ಅಭಿವೃದ್ಧಿಯನ್ನು ಬೆಂಬಲಿಸಿರುವುದು ಎಂ. ಬಿ. ಪಾಟೀಲರು 6ನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವುದಕ್ಕೆ ಸಾಕ್ಷಿಯಾಗಿದೆ.
ಈ ಚುನಾವಣೆಯಲ್ಲಿ ಎಂ. ಬಿ. ಪಾಟೀಲರ ಗೆಲುವಿಗೆ ಹಗಲಿರುಳು ಶ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಯುವಕರು, ಹಿರಿಯರು, ಮಹಿಳೆಯರು ಹಾಗೂ ಕಾಂಗ್ರೆಸ್ ಬೆಂಬಲಿಸಿ ತಮ್ಮ ಹಕ್ಕು ಚಲಾಯಿಸಿದ 93923 ಮತದಾರರಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ನಮ್ಮ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ನಾವು ನೀಡಿರುವ ಭರವಸೆಗಳನ್ನು ಈಡೇರಿಸುತ್ತೇವೆ. ಎಂ. ಬಿ. ಪಾಟೀಲರು ಬಬಲೇಶ್ವರ ಮತಕ್ಷೇತ್ರವನ್ನು ಈಗಾಗಲೇ ನಂದನವನವಾಗಿ ಮಾಡಿದ್ದು, ಮುಂದಿನ ದಿನಗಳಲ್ಲಿ ‘ಬಂಗಾರದ ಬಬಲೇಶ್ವರ’ ಮಾಡಲು ಪಣತೊಟ್ಟಿದ್ದೇವೆ. ಜಲಕ್ರಾಂತಿಯಿಂದಾಗಿ ಅಭಿವೃದ್ಧಿಯಾಗಿರುವ ಮತಕ್ಷೇತ್ರದಲ್ಲಿ ಕ್ಷೀರಕ್ರಾಂತಿ, ಫು???ಪಾರ್ಕ, ರೈತರನ್ನು ಕೃಷಿ ಉದ್ಯಮಿಗಳನ್ನಾಗಿ ಮಾಡಲು ಯೋಜನೆ ರೂಪಿಸಿದ್ದೇವೆ. ಅಲ್ಲದೇ, ರೈತರು, ಮಹಿಳೆಯರು ಮತ್ತು ಯುವಕರು ಸ್ವಾವಲಂಬಿ ಬದುಕು ಸಾಗಿಸಲು ಆರ್ಥಿಕವಾಗಿ ಸಬಲರಾಗಲು ಕ್ರಮ ಕೈಗೊಳ್ಳಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷ ಈಗಾಗಲೇ ಘೋಷಿಸಿರುವ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ಮಹಿಳೆಯರಿಗೆ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಯೋಜನೆಗಳು ಕೆಲವೇ ದಿನಗಳಲ್ಲಿ ಜಾರಿಗೆ ಬರಲಿವೆ. ಇದರಿಂದ ಮಹಿಳಾ ಸಮುದಾಯ ಸೇರಿದಂತೆ ನಮ್ಮ ಬಬಲೇಶ್ವರ ಮತಕ್ಷೇತ್ರದ ಜನರ ಸವಾರ್ಂಗಿಣ ಅಭಿವೃದ್ಧಿಗೆ ನೆರವಾಗಲಿದೆ ಎಂದು ಸುನೀಲಗೌಡ ಪಾಟೀಲ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.