ಜನಪರ ಕೆಲಸಗಳಿಗೆ ಮೊದಲ ಆದ್ಯತೆ: ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್

ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ. 10:- ರಾಜ್ಯ ಸರ್ಕಾರದಲ್ಲಿ ಜನಪರ ಕೆಲಸಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು ಕಂದಾಯ ಇಲಾಖೆಯ ದಾಖಲೆಗಳ ಡಿಜಿಟಲೀಕರಣವೂ ಇದರ ಒಂದು ಭಾಗವಾಗಿದೆ ಎಂದು ಪಶು ಸಂಗೋಪನೆ, ರೇμÉ್ಮ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ತಿಳಿಸಿದರು.
ಯಳಂದೂರು ತಾಲೂಕು ಕಚೇರಿಯಲ್ಲಿ ಇಂದು ತಾಲೂಕು ಕಚೇರಿ, ಸರ್ವೇ ಮತ್ತು ನೋಂದಣಿ ಇಲಾಖೆಯ ಎಲ್ಲಾ ದಾಖಲೆಗಳ ಡಿಜಿಟಲೀಕರಣಗೊಳಿಸುವ ಭೂ ಸುರಕ್ಷಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಇಡೀ ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲೂ ಒಂದೊಂದು ತಾಲೂಕನ್ನು ಈ ಯೋಜನೆಯ ವ್ಯಾಪ್ತಿಗೆ ಪ್ರಾಯೋಗಿಕವಾಗಿ ಒಳಪಡಿಸಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಯಳಂದೂರು ತಾಲೂಕು ಮೊದಲಿಗೆ ಆಯ್ಕೆಯಾಗಿದೆ. ಈ ಯೋಜನೆಯಿಂದ ಸಾರ್ವಜನಿಕರಿಗೆ ಸುಲಭವಾಗಿ ಹಳೆಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಶೇಖರಿಸಿ ಇಡುವುದರಿಂದ ಇದು ಹಾಳಾಗುವ ಭೀತಿ ಇರುವುದಿಲ್ಲ. ಅಲ್ಲದೆ ಇದನ್ನು ಸುಲಭವಾಗಿ ಪಡೆದುಕೊಳ್ಳಬಹುದು. ವಿನಾಕಾರಣ ಕಚೇರಿಗೆ ಅಲೆಯುವ ಧಾವಂತವೂ ತಪ್ಪುತ್ತದೆ. ಇದಕ್ಕಾಗಿ 8 ಕಂಪ್ಯೂಟರ್, 3 ಸ್ಕ್ಯಾನರ್ ಹಾಗೂ 10 ಮಂದಿ ನುರಿತ ಸಿಬ್ಬಂಧಿಯನ್ನು ನೇಮಿಸಲಾಗಿದ್ದು ಇನ್ನು 100 ದಿನದೊಳಗೆ ಈ ತಾಲೂಕಿನ ಎಲ್ಲಾ ದಾಖಲೆಗಳು ಡಿಜಿಟಲೀಕರಣಗೊಳ್ಳಲಿದೆ ಎಂದರು.
ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಯಾವಾಗಲೂ ಕ್ಷೇತ್ರದ ಸಮಸ್ಯೆಗಳ ನಿವಾರಣೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಕ್ಷೇತ್ರದ ಕೆಲಸಗಳನ್ನು ಮಾಡಿಸಿಕೊಳ್ಳಲು ಆಸಕ್ತಿ ತೋರುತ್ತಿದ್ದು ಅವರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ ಎಂದು ಸಚಿವರಾದ ಕೆ. ವೆಂಕಟೇಶ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಮಾತನಾಡಿ, ರೆಕಾರ್ಡ್ ರೂಂನಲ್ಲಿರುವ ಹಳೆ ದಾಖಲೆಗಳು ಪೇಪರ್‍ನಲ್ಲಿದ್ದು ಇದು ನಶಿಸಿ ಹೋಗುವ ಅಪಾಯವಿತ್ತು. ನೂರಾರು ವರ್ಷಗಳ ದಾಖಲೆಗಳನ್ನು ಸುರಕ್ಷಿತವಾಗಿಡುವುದು ಸವಾಲಿನ ಕೆಲಸವಾಗಿತ್ತು. ಹಾಗಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡರ ದೂರದೃಷ್ಟಿಯ ಫಲದಿಂದ ಇಂದು ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ತೀರ್ಮಾನಿಸಲಾಗಿರುವುದು ಉತ್ತಮ ನಿರ್ಧಾರವಾಗಿದೆ. ಇದಕ್ಕೆ ನಮ್ಮ ಜಿಲ್ಲೆಯಲ್ಲಿ ನನ್ನ ಕ್ಷೇತ್ರ ವ್ಯಾಪ್ತಿಯ ಯಳಂದೂರು ತಾಲೂಕು ಆಯ್ಕೆಯಾಗಿರುವುದು ನನಗೆ ಸಂತಸ ತಂದಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ತಮ್ಮ ಭೂಮಿಯ ಎಲ್ಲಾ ದಾಖಲೆಗಳು ಲಭ್ಯವಾಗಲಿದೆ ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ಜಿಲ್ಲೆಯಲ್ಲಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವಲ್ಲಿ ಯಳಂದೂರು ತಾಲೂಕಿನ ಸಿಬ್ಬಂದಿ ಉತ್ತಮ ಸಾಧನೆಗೆ ಸಹಕರಿಸಿದ್ದಾರೆ. ಹಾಗಾಗಿ ಈ ತಾಲೂಕನ್ನು ಪೈಲಟ್ ತಾಲೂಕಾಗಿ ಆಯ್ಕೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಜಿಲ್ಲೆಯ ಇತರೆ ತಾಲೂಕುಗಳಿಗೂ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ತಹಶೀಲ್ದಾರ್ ಜಯಪ್ರಕಾಶ್, ಮಂಜುಳಾ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್, ಪಟ್ಟಣ ಪಂಚಾಯಿತಿ ಸದಸ್ಯರಾದ ಮಹೇಶ್, ಮುಖ್ಯಾಧಿಕಾರಿ ಮಹೇಶ್‍ಕುಮಾರ್, ರಾಜಸ್ವ ನಿರೀಕ್ಷಕರಾದ ಯದುಗಿರಿ, ಪ್ರವೀಣ್, ನಂಜುಂಡ ಸೇರಿದಂತೆ ಇತರರು ಉಪಸ್ಥಿತರಿದ್ದರು.