ಜನಪರ ಕಾಳಜಿ ಇರುವ ವ್ಯಕ್ತಿ ಸಮಾಜಮುಖಿ ಕಾರ್ಯ ಮಾಡಬಲ್ಲ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ. 11 :- ಸಮಾಜದಲ್ಲಿ ಎಲ್ಲಾ ಸಮುದಾಯಗಳ ಜನರನ್ನು ಪ್ರೀತಿಸುವ ಹಾಗೂ ಗೌರವಿಸುವಂತಾಗಬೇಕು. ಅಲ್ಲದೆ, ಬಡವರ ಬಗ್ಗೆ ಕಾಳಜಿ ಉಳ್ಳ ವ್ಯಕ್ತಿ ಸಮಾಜಮುಖಿ ಕೆಲಸಗಳು ಮಾಡಲು  ಸಾಧ್ಯವಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಪ್ರಸನ್ನಾನಂದಪುರಿ ಸ್ವಾಮೀಜಿ ತಿಳಿಸಿದರು.
ಪಟ್ಟಣದಲ್ಲಿ ಬಂಗಾರು ನಿಲಯ ಗೃಹ ಪ್ರವೇಶ ನಿಮಿತ್ತ ಆಯೋಜಿಸಿದ್ದ ಸಾಮೂಹಿಕ ವಿವಾಹ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡುತ್ತಾ ಸಮಾಜದ ಒಳಿತಿಗಾಗಿ ಮಿಡಿಯುವಂಥ ಹೃದಯ, ಮನಸ್ಸುಳ್ಳವರು ಬೇಕಿದೆ. ಅಂಥವರ ಸಾಲಿನಲ್ಲಿ ಕೂಡ್ಲಿಗಿಯ ಯುವ ನಾಯಕ ಬಂಗಾರು ಹನುಮಂತು ಸೇರಲಿದ್ದಾರೆ ಎಂದು ತಿಳಿಸಿದರು.
ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಹಾಗೂ ಚಿತ್ರದುರ್ಗ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಸರಳ ವಿವಾಹಗಳಿಂದ ದುಂದುವೆಚ್ಚ ತಗ್ಗುವುದರ ಜತೆಗೆ ಬಡವರಿಗೆ ಆರ್ಥಿಕ ಹೊರೆ ತಗ್ಗಲಿದೆ. ಸತಿ, ಪತಿ ಅರಿತು ನಡೆಯುವುದೇ ಜೀವನ ಎಂದು ನವ ದಂಪತಿಗಳಿಗೆ ಆಶೀರ್ವಚನ ನೀಡಿದರು.
ಸಚಿವ ಡಾ.ಅಶ್ವತ್ಥನಾರಾಯಣ, ಕೂಡ್ಲಿಗಿ ಹಿರೇಮಠದ ಪ್ರಶಾಂತಸಾಗರ ಸ್ವಾಮೀಜಿ, ಕಾನಮಡುಗು ದಾಸೋಹಮಠದ ಧರ್ಮಾಧಿಕಾರಿ ದಾ.ಮ.ಐಮಡಿ ಶರಣಾರ್ಯರು ಹಾಗೂ ಹಡಗಲಿಯ ಹಾಲಪ್ಪಜ್ಜ ಸ್ವಾಮೀಜಿಯವರು ಮಾತನಾಡಿದರು. 12 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಲ್ಲದೆ, ತಾಲೂಕಿನ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸುವುದರ ಜತೆ 5 ಸಾವಿರ ಮುತ್ತೈದೆಯರಿಗೆ ಉಡಿ ತುಂಬಿಸಲಾಯಿತು. ಕಾರ್ಯಕ್ರಮದಲ್ಲಿ ಸರಿಗಮಪ ಹಾಗೂ ಎದೆತುಂಬಿ ಹಾಡುವೆನು ಖ್ಯಾತಿಯ ಗಾಯಕರಿಂದ ಗಾಯನ ಜನಮನ ಸೂರೆಗೊಂಡಿತು.
ಈ ಸಂದರ್ಭದಲ್ಲಿ ಮಡಿವಾಳ ಮಾಚಿದೇವ ಸ್ವಾಮೀಜಿ, ಬಂಜಾರ ಸ್ವಾಮೀಜಿ, ಸಿರಗುಪ್ಪ ಬಸವಭೂಷಣ ಸ್ವಾಮೀಜಿ, ಬಿಜೆಪಿ ಜಿಲ್ಲಾಧ್ಯಕ್ಷ ಪಿ.ಚನ್ನಬಸವನಗೌಡ, ಬಿಜೆಪಿ ಎಸ್ಟಿಮೋರ್ಚಾ ರಾಜ್ಯ ಕೋಶಾಧ್ಯಕ್ಷ ಬಂಗಾರು ಹನುಮಂತು, ಬಂಗಾರು ಸೋಮಣ್ಣ, ಹುಲಿಗೆಮ್ಮ, ಮುಖಂಡರಾದ ಗುಳಿಗಿ ವೀರೇಂದ್ರ, ಅಯ್ಯಾಳಿ ತಿಮ್ಮಪ್ಪ, ಹೊಸಪೇಟೆ ರಾಘವೇಂದ್ರ, ಶಬ್ಬೀರ್ ಸೇರಿ ಇತರರಿದ್ದರು.
ಬಂಗಾರು ಜತೆ ನಾನಿದ್ದೇನೆ
ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ರಾಜ್ಯದಲ್ಲಿ ಗುರುತಿಸಿಕೊಂಡಿರುವ ಕೂಡ್ಲಿಗಿಯ ಬಂಗಾರು ಹನುಮಂತು ಜತೆ ನಾನಿದ್ದೇನೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು. ಕಾಂತಾರಾ ಚಿತ್ರ ವರಾಹ ಹಾಡಿನ ನೃತ್ಯಕ್ಕೆ ಸಚಿವ ಅಶ್ವತ್ಥನಾರಾಯಣ ಫಿದಾ ಆಗಿದ್ದು, ಸಚಿವ ಅಶ್ವತ್ಥನಾರಾಯಣ ಅವರು  ಬಂಗಾರು ಹನುಮಂತು ಕೈಗಳನ್ನು ಹಿಡಿದು ಆಕಾಂಕ್ಷಿ ಬಂಗಾರುಗೆ ಟಿಕೆಟ್ ಕೊಡಿಸುವ ಭರವಸೆ ನೀಡುವಂತಹ ಭಾಸವಾಗುವ ಚಿತ್ರಣ ಕಂಡುಬಂದಿತು.