ಜನಪರ ಕಾರ್ಯನಿರ್ವಹಣೆ ಮುಂದಾಗುವಂತೆ ಡಿ.ಸಿ ಸೂಚನೆ

ಚಾಮರಾಜನಗರ, ನ.17:- ಜಿಲ್ಲೆಯ ವಿವಿಧ ಇಲಾಖೆಗಳು ಜನಪರ ಕಾರ್ಯನಿರ್ವಹಣೆಗೆ ಮುಂದಾಗಬೇಕೆಂದು ನೂತನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಗೆ ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಕಚೇರಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಸಾರ್ವಜನಿಕರ ಕೆಲಸ ಕಾರ್ಯಗಳು ನಿಗಧಿತ ಅವಧಿಯಲ್ಲಿಯೇ ಆಗುವ ಮೂಲಕ ಅನಗತ್ಯವಾಗಿ ಕಚೇರಿಗೆ ಅಲೆದಾಡುವುದನ್ನು ತಪ್ಪಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಸ್ತುತ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣೆ ನಮ್ಮ ಮುಂದಿದೆ. ಚುನಾವಣೆ ಸಂಬಂಧ ನಿಯೋಜಿತರಾಗಿರುವ ನೋಡಲ್ ಅಧಿಕಾರಿಗಳು ಚುನಾವಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಅಲ್ಲದೇ ಕೋವಿಡ್ ಇನ್ನೂ ಮುಂದುವರೆದಿದೆ. ಮುಂದಿನ ದಿನಗಳಲ್ಲಿ ಚುನಾವಣೆ, ಕೋವಿಡ್ ನಿರ್ವಹಣೆ ಸೇರಿದಂತೆ ಎಲ್ಲಾ ಕಾರ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಚುನಾವಣಾ ಮಾರ್ಗಸೂಚಿ ಆದೇಶ ಪಾಲನೆ ಮಾಡಬೇಕು. ಎಲ್ಲಾ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಮತಗಟ್ಟೆಗಳಿಗೆ ಒದಗಿಸಬೇಕಿರುವ ಮೂಲಸೌಲಭ್ಯಗಳನ್ನು ಪಟ್ಟಿಮಾಡಿ ವರದಿ ಸಲ್ಲಿಸಬೇಕು. ಜಿಲ್ಲಾ ಹಾಗೂ ತಾಲೂಕು ನೋಡಲ್ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಿರುವ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಚುನಾವಣಾ ಆಯೋಗದ ಮಾರ್ಗಸೂಚಿಗಳು ಉಲ್ಲಂಘನೆಯಾಗಬಾರದು.
ಮಾದರಿ ನೀತಿಸಂಹಿತೆ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಚುನಾವಣಾ ಕರ್ತವ್ಯದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ನೋಡಿಕೊಳ್ಳಬೇಕು ಎಂದರು.
ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ, ಮಸ್ಟರಿಂಗ್, ಡಿ-ಮಸ್ಟರಿಂಗ್, ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆ, ಅಬಕಾರಿ ಚೆಕ್‍ಪೋಸ್ಟ್‍ಗಳ ಸ್ಥಾಪನೆ, ಮಾದರಿ ನೀತಿ ಸಂಹಿತೆ ಸಂಬಂಧ ಸ್ವೀಕೃತವಾಗುವ ದೂರುಗಳ ಪರಿಶೀಲನೆ, ಇನ್ನಿತರ ಕೆಲಸ ಕಾರ್ಯಗಳನ್ನು ಪರಿಪೂರ್ಣವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ವಹಿಸಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಪ್ರತಿದಿನ ನಿಗಧಿಪಡಿಸಿರುವ ಗುರಿ ಅನುಸಾರ ಕೋವಿಡ್ ಪರೀಕ್ಷೆ ನಡೆಸಬೇಕು. ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಅನುಸರಿಸಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದರು.
ಕೋವಿಡ್ ಲಸಿಕೆ ನೀಡಿಕೆಯಲ್ಲಿ ಇನ್ನೂ ಸಾಧಿಸಬೇಕಿರುವ ಪ್ರಗತಿ ಬಗ್ಗೆ ಹೆಚ್ಚು ಗಮನಹರಿಸಬೇಕು. ಕೋವಿಡ್ ತಡೆಗಾಗಿ ಜಿಲ್ಲೆಯ ನಗರಪ್ರದೇಶ, ಕಾಡಂಚಿನ ಗ್ರಾಮಗಳು, ಗಿರಿಜನ ಹಾಡಿಗಳು ಸೇರಿದಂತೆ ಜಿಲ್ಲೆಯ ಯಾವುದೇ ಭಾಗಗಳಲ್ಲಿ ಜನರು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಕೋವಿಡ್ ಲಸಿಕಾಕರಣ ಕಾರ್ಯದಲ್ಲಿ ಅಗತ್ಯ ಕಾರ್ಯಯೋಜನೆ ರೂಪಿಸಿಕೊಂಡು ನಿಗದಿತ ಗುರಿ ಸಾಧನೆಗೆ ಸಕ್ರಿಯರಾಗುವಂತೆ ಜಿಲ್ಲಾಧಿಕಾರಿ ಚಾರುಲತಾಸೋಮಲ್ ಅವರು ಅಧಿಕಾರಿಗಳಿಗೆ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ಅಬಕಾರಿ ಆಯುಕ್ತರಾದ ಮುರಳಿ, ತಹಶೀಲ್ದಾರರಾದ ಚಿದಾನಂದ ಗುರುಸ್ವಾಮಿ, ಕೆ. ಕುನಾಲ್, ನಾಗರಾಜು, ಜಯಪ್ರಕಾಶ್, ರವಿಶಂಕರ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.