ಜನಪರವಾಗಿರುವುದೇ ಜಾನಪದ

ಕಲಬುರಗಿ:ಡಿ.9: ಜಾನಪದ‌ ತುಂಬಾ ವಿಶಾಲವಾದ ಕ್ಷೇತ್ರ. ಅದು ಕಲೆ, ಸಾಹಿತ್ಯ, ಸಂಸ್ಕೃತಿಯ ಮೂಲ ಸೆಲೆ ಎಂದು ಪತ್ರಕರ್ತ- ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ಪರಿಷತ್ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ನಗರದ ವಿಶ್ವನಾಥರೆಡ್ಡಿ ಮುದ್ನಾಳ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಸಿಂಪಿ ಲಿಂಗಣ್ಣನವರ ಬದುಕು ಬರಹ ಕುರಿತ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಮಾತನಾಡಿದ ಅವರು,ಜನಪರವಾಗಿರುವುದು ಜನಪದ ಸಾಹಿತ್ಯ ಎಂದು ಹೇಳಿದರು.

ಸಂಸ್ಕೃತಿ ಜೀವನ ವಿಧಾನ ಎಂದು ಹೇಳುವಂತೆ ಜನಪದ ನಮ್ಮ ಬದುಕಿನ ವಿಧಾನ ಹೇಳಿಕೊಟ್ಟಿದೆ. ಜನಪದ ಕಲೆ, ಸಾಹಿತ್ಯ, ಸಂಗೀತ, ನೃತ್ಯ ಇವೆಲ್ಲ ಉಳಿಯಬೇಕಾದರೆ ಜನಪದರ ಬದುಕು ಉಳಿಯುವುದು ಮುಖ್ಯ ಎಂದು ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕಿ, ಜನಪದ ಸಾಹಿತ್ಯದ ಉಳಿವಿಗಾಗಿ ಜಾನಪದ ವಿದ್ವಾಂಸ ಸಿಂಪಿ ಲಿಂಗಣ್ಣನವರನ್ನೊಳಗೊಂಡ ಹಲಸಂಗಿ ಗೆಳೆಯರ ಗುಂಪು ಮಾಡಿದ ಸಂಗ್ರಹ ಹಾಗೂ ಪ್ರಕಟಣೆ ಕಾರ್ಯವನ್ನು ಶ್ಲಾಘಿಸಿದರು.

ಜಾನಪದಕ್ಕೆ ನೆಲೆ ಹಾಗೂ ಬೆಲೆ ತಂದುಕೊಟ್ಟ ಸಿಂಪಿ ಲಿಂಗಣ್ಣನವರು ಹಾಗೂ ಅವರ ಗೆಳೆಯರ ಗುಂಪು ಮಾಡಿದ ಕಾರ್ಯ ಜಾಗತೀಕರಣದ ಈ ದಿನಮಾನಗಳಲ್ಲಿ ಬಹಳ ಮಹತ್ವಪೂರ್ಣವಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಹಿರಿಯ ಸಾಹಿತಿ ಎ.ಕೆ. ರಾಮೇಶ್ವರ ಮಾತನಾಡಿ ಜಾನಪದ ಸಂರಕ್ಷಣೆಯಿಂದ ಬದುಕು ಸಂರಕ್ಷಣೆಯಾಗಲಿದೆ. ಬಾಯಿಯಿಂದ ಬಾಯಿಗೆ, ನಾಲಿಗೆಯಿಂದ ನಾಲಿಗೆಗೆ ಹರಿದು ಬಂದಿರುವ ನೆಲಮೂಲ
ಜನಪದ ಸಾಹಿತ್ಯ ಅಳಿವಿನಂಚಿನಲ್ಲಿದ್ದು, ಇದನ್ನು ಸಂರಕ್ಷಿಸುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಾನಪದ‌ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ.ಎಸ್. ನಾಯಕ ಅವರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಚಾರ್ಯೆ ಡಾ. ಪ್ರೇಮಾ ಅಪಚಂದ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಜಿಲ್ಲಾಧ್ಯಕ್ಷ ಸಿ.ಎಸ್. ಮಾಲಿಪಾಟೀಲ ಪ್ರಾಸ್ತಾವಿಕ ಮಾತನಾಡಿದರು.
ಡಿ.ಪಿ.‌ ಸಜ್ಜನ್ ನಿರೂಪಿಸಿದರು. ನಾಗೇಶ ಮಡಿವಾಳ ಸ್ವಾಗತಿಸಿದರು. ಕಾವ್ಯಶ್ರೀ ಪ್ರಾರ್ಥನೆಗೀತೆ ಹಾಡಿದರು.