ಜನಪದ ಸಾಹಿತ್ಯ ಗ್ರಾಮೀಣ ಜನರ ಬದುಕಿನ ಪ್ರತಿಬಿಂಬ


(ಸಂಜೆವಾಣಿ ವಾರ್ತೆ)
ಹೂವಿನಹಡಗಲಿ, ಫೆ.19: ಜನಪದ ಸಾಹಿತ್ಯ ಗ್ರಾಮೀಣ ಜನರ ಬದುಕಿನ ಪ್ರತಿಬಿಂಬವಾಗಿದ್ದು ಬಾಲ್ಯದಿಂದ ವೃದ್ಧಾಪ್ಯದವರೆಗೆ ಸಮಯ ಸನ್ನಿವೇಶಕ್ಕೆ ತಕ್ಕಂತೆ ಸಾಂದರ್ಭಿಕವಾಗಿ ರೂಪುಗೊಂಡಿದೆ. ಇದು ತಲೆಮಾರಿನಿಂದ ತಲೆಮಾರಿಗೆ ಹರಿದ ಮೌಖಿಕ ಪರಂಪರೆಯಾಗಿದೆ ಎಂದು ಶಿಕ್ಷಕ, ಕಸಾಪ    ಹಿರೇಹಡಗಲಿ ಹೋಬಳಿ ಘಟಕದ ಅಧ್ಯಕ್ಷ     ಜಿ.ಎಸ್.ಸತೀಶ ಅಭಿಪ್ರಾಯಪಟ್ಟರು.
ಅವರು  ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಪಟ್ಟಣದ ಜಿಬಿಆರ್ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಪಾಟೀಲ್ ಅನ್ನದಾನಗೌಡರ, ಪಾಟೀಲ್ ಚನ್ನನಗೌಡರ ಸ್ಮಾರಕ ದತ್ತಿ,          ಟಿ.ಎಸ್.ಮೃತ್ಯುಂಜಯಪ್ಪ ಸ್ಮಾರಕದತ್ತಿ, ನಂದಿಹಳ್ಳಿ ಹಾಲಪ್ಪ ದತ್ತಿ,ಮುದ್ದಿ ನಿಂಗಪ್ಪ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಗ್ರಾಮೀಣ ಜನಪದ, ಜನಪದ ಸಾಹಿತ್ಯ’ ವಿಷಯ ಕುರಿತು ಮಾತನಾಡಿದರು. ಜನರಿಗಾಗಿ, ಜನರಿಂದ ಸೃಷ್ಟಿಯಾದ ಈ ಸಾಹಿತ್ಯವನ್ನು ಮೂರು ವಿಧಗಳಲ್ಲಿ ಅಧ್ಯಯನ ಮಾಡಬಹುದು. ಜನಪದ -ಗೀತೆ,ನೃತ್ಯ,ಅಡುಗೆ,ಗಾದೆ, ಒಗಟು ಇತ್ಯಾದಿ,   ಜಾನಪದ- ಎಲ್ಲಾ ಪ್ರಕಾರಗಳ ಒಟ್ಟುಗೂಡಿಸುವುದು. ಜನಪದ,ಜಾನಪದದ ಶಾಸ್ತ್ರಬದ್ಧ ಅಧ್ಯಯನವೇ ಜನಪದ ವಿಜ್ಞಾನವಾಗಿದೆ. ಧೀರ್ಘ ಕಥನ ಪರಂಪರೆ, ಪುನರಾವರ್ತನೆ,ಕೃತಿಕಾರರ ಹೆಸರಿಲ್ಲದೆ ಇರುವುದು ಈ ಸಾಹಿತ್ಯದ ಪ್ರಮುಖ ಲಕ್ಷಣವಾಗಿದೆ. ಅಡುಗೆ, ಕೃಷಿ ಉಪಕರಣ, ಉಡುಗೆ- ತೊಡಗೆ ವಸ್ತು ಜಾನಪದ.ಮದುವೆ, ಸೀಮಂತ,ಹಬ್ಬ,ಜಾತ್ರೆ, ಪರಿಸೆ ಸಾಮಾಜಿಕ ಜಾನಪದವಾಗಿದೆ. ನೀಲಗಾರರು, ಗೊರವರು,ಗೊಂದಲಿಗರು, ಕಿಂದರಿಜೋಗಿ, ಕೊರವಂಜಿ ಮುಂತಾದವರ ಮೂಲಕ ಸಮೃದ್ಧ ಜನಪದ ಸಾಹಿತ್ಯ ಹರಿದು ಬಂದಿದೆ. ದೊಡ್ಡಾಟ,ಸಣ್ಣಾಟ, ಯಕ್ಷಗಾನ, ತೊಗಲು, ಸೂತ್ರದ ಬೊಂಬೆಯಾಟ ಜನಪದ ಪ್ರದರ್ಶನ ಕಲೆಗಳಾಗಿವೆ. ಜನಪದ ಸಾಹಿತ್ಯವನ್ನು ಸೃಷ್ಟಿಸಿದವರು ಅನಕ್ಷರಸ್ಥರಿರಬಹುದು, ಆದರೆ ಅವರು ಅಜ್ಞಾನಿಗಳಲ್ಲ.ಬಹುದೊಡ್ಡ ಜ್ಞಾನದ ಪರಂಪರೆಯನ್ನು ನಮಗೆ ಬಳುವಳಿಯಾಗಿ ನೀಡಿದ್ದಾರೆಂದರು.
ಕಾಲೇಜು ಪ್ರಾಚಾರ್ಯ       ಪ್ರೊ.ಎಸ್.ಎಸ್.ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದತ್ತಿದಾನಿಗಳು ವಿಭಿನ್ನವಾದ ವಿಷಯಗಳನ್ನು ನೀಡಿರುವುದು, ಅವುಗಳ ಅರ್ಥಪೂರ್ಣ ಚರ್ಚೆ ಸಮಕಾಲೀನ ಪರಿಸ್ಥಿತಿಯಲ್ಲಿ ನಡೆಯುವಂತಾಗಬೇಕಿರುವುದು ಇಂದಿನ ಅಗತ್ಯ.    ಈ ದಿಸೆಯಲ್ಲಿ ಸಾಹಿತ್ಯ ಪರಿಷತ್ತು ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದರು.
ಸಾಹಿತಿ ಎಸ್.ಎಂ. ಕೂಡಯ್ಯ ಜನಪದ ತ್ರಿಪದಿಗಳನ್ನು ವಾಚಿಸಿ ಅರ್ಥೈಸಿದರು. ದತ್ತಿದಾನಿ  ವಿ.ಸಿ.ಪಾಟೀಲ್, ಸಾಹಿತಿ  ಪಿ.ಕರವೀರನಗೌಡ ಕಾಲೇಜು ಉಪನ್ಯಾಸಕ ಸಿಬ್ಬಂದಿ ಉಪಸ್ಥಿತರಿದ್ದರು. ತಾಲೂಕು ಕಸಾಪ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಾದ ಬಿ.ಯುವರಾಜಗೌಡ,ರಕ್ಷಿತಾ ಶಾನುಭೋಗರ ಜಾನಪದ ಗೀತೆಗಳ ಗಾಯನ ಮೆಚ್ಚುಗೆ ಪಡೆಯಿತು. 
ಇದೇ ಸಂದರ್ಭದಲ್ಲಿ ಉಪನ್ಯಾಸಕರನ್ನು, ಅತಿಥಿಗಳನ್ನು,  ದತ್ತಿದಾನಿಗಳನ್ನು, ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ವೈ.ಚಂದ್ರಬಾಬು ಸ್ವಾಗತಿಸಿದರು.ಕಸಾಪ ಗೌರವ ಕಾರ್ಯದರ್ಶಿ      ಎ.ಎಂ.ಚನ್ನವೀರಸ್ವಾಮಿ ವಂದಿಸಿದರು. ಉಪನ್ಯಾಸಕಿ ಕೆ.ಅಶ್ವಿನಿ ಕಾರ್ಯಕ್ರಮ ನಿರ್ವಹಿಸಿದರು.