ಜನಪದ, ಭರತನಾಟ್ಯ ಬದುಕಿನ ಕಲೆಯಾಗಿವೆ


ಧಾರವಾಡ,ನ.11: ಭರತನಾಟ್ಯವು ದಕ್ಷಿಣ ಭಾರತದ ಪ್ರಮುಖ ಕಲೆಯಾಗಿದೆ. ಈ ಕಲೆಯನ್ನು ಅವರ ಮುಖದ ಹಾವಭಾವ ವಿವಿಧ ಭಂಗಿಗಳ ಮೂಲಕ ಅಭಿವ್ಯಕ್ತಿಗೊಳಿಸುವ ಕಲೆಯಾಗಿದೆ ಹಾಗೂ ಜಾನಪದವು ಅನಕ್ಷರಸ್ಥರು ಬಾಯಿಂದ ಬಾಯಿಗೆ ಹಾಡುತ್ತಾ ತಮ್ಮ ಮನರಂಜನೆಗಾಗಿ ವಿವಿಧ ಪ್ರಕಾರದ ಕಲೆಗಳನ್ನು ಪ್ರದರ್ಶಿಸುವಂತಹ ಕಲೆಯಾಗಿದೆ ಎಂದು ಕ.ವಿ.ವ.ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ವಿಶ್ರಾಂತ ಪ್ರಾಧ್ಯಾಪಕ ಡಾ. ಧನವಂತ ಹಾಜವಗೋಳ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವದ ಅಂಗವಾಗಿ ಇಡೀ ತಿಂಗಳು ಆಯೋಜಿಸಿರುವ ಕಾರ್ಯಕ್ರಮದ ಅಂಗವಾಗಿ 10 ನೇ ದಿನ ಭರತನಾಟ್ಯ' ಹಾಗೂಜಾನಪದ ನೃತ್ಯ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ನ್ಯಾಯವಾದಿ ಹಾಗೂ ಸುವರ್ಣ ಮಹಿಳಾ ಮಂಡಳದ ಪ್ರಧಾನ ಕಾರ್ಯದರ್ಶಿ ಹೇಮಾಕ್ಷಿ ಕಿರೇಸೂರ ಮಾತನಾಡಿ, ಮಹಿಳೆಯರು ಮದುವೆಯ ನಂತರ ತಮ್ಮಲ್ಲಿರುವ ಪ್ರತಿಭೆಯನ್ನು ಮೊಟಕುಗೊಳಿಸದೇ ಸಂಸಾರದ ಜೊತೆಗೆ ಕಲೆಯನ್ನು ಉಳಿಸಿ ಬೆಳೆಸಬೇಕು. ಜನಪದ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಜನರ ಭಾವನೆಗಳನ್ನು ಅರಳಿಸುವಂತಹ ಭವ್ಯವಾದ ಕಲೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭರತನಾಟ್ಯ ಮತ್ತು ಜನಪದ ಕಲೆಯು ಬದುಕಿನ ಕಲೆಯಾಗಿವೆ. ಹೀಗಾಗಿ ವಿದ್ಯಾವರ್ಧಕ ಸಂಘವು ಮಕ್ಕಳಾದಿಯಾಗಿ, ಯುವಕರು, ಮಹಿಳೆಯರು, ಹಿರಿಯರು ಹೀಗೆ ಎಲ್ಲ ವಯೋಮಾನದ ಕಲಾವಿದರಿಗೆ ತಮ್ಮ ಕಲಾ ಪ್ರದರ್ಶನಕ್ಕೆ ವೇದಿಕೆ ಒದಗಿಸಿಕೊಡುತ್ತಿದೆ ಎಂದರು.
ಆರಂಭದಲ್ಲಿ ಸಹಕಾರ್ಯದರ್ಶಿ ಶಂಕರ ಕುಂಬಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಧ. ಹೊರಕೇರಿ ನಿರೂಪಿಸಿದರು. ವಿಶ್ವೇಶ್ವರಿ ಹಿರೇಮಠ ವಂದಿಸಿದರು.
ನಯನತಾರಾ ಮತ್ತು ಸರ್ವೇಶ, ಪದ್ಮ ಭಾಸ್ಕರ ನೃತ್ಯ ಕಲಾ ಕೇಂದ್ರ, ಧಾರವಾಡ ಅವರಿಂದ ಭರತನಾಟ್ಯ ಹಾಗೂ ಸಂಜೀವ ಧುಮಕನಾಳ, ಮಕ್ಕಳ ಸಾಹಿತ್ಯ ಪರಿಷತ್, ಧಾರವಾಡ ಅವರಿಂದ ಜಾನಪದ ಸಮೂಹ ನೃತ್ಯ ಕಾರ್ಯಕ್ರಮಗಳು ಸೊಗಸಾಗಿ ಜರುಗಿದವು.