ಕಲಬುರಗಿ,ಸೆ.26: ಜೋಕುಮಾರಸ್ವಾಮಿಯು ಶಿವನ ಗಣದಲ್ಲಿದ್ದು, ಆತನ ಮೂರ್ತಿಯನ್ನು ಮಾಡಿ ಮನೆಗಳಿಗೆ ತೆರಳಿ, ಗಾಯನದ ರೂಪದಲ್ಲಿ ಮೌಲ್ಯಗಳನ್ನು ಪರಿಚಯಿಸುವದು ಸಂಪ್ರದಾಯವಾಗಿದೆ. ಸೂಕ್ತ ಕಾಲಕ್ಕೆ ಮಳೆ-ಬೆಳೆಯಾಗಿ ರೈತನ ಬದುಕು ಸದಾ ಹಸನಾಗಿರಬೇಕೆಂದು ಶಿವನಲ್ಲಿ ಪ್ರಾರ್ಥಿಸಿ, ವರವನ್ನು ಪಡೆದು ಇತನು ರೈತಬಂಧುನಾಗಿದ್ದಾನೆ ಎಂದು ಕಜಾಪ ಜಿಲ್ಲಾ ಅಧ್ಯಕ್ಷ ಎಂ.ಬಿ.ನಿಂಗಪ್ಪ ಹೇಳಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ವತಿಯಿಂದ ನಗರದ ಹೊರವಲಯದಲ್ಲಿರುವ ಕುಸನೂರ ಗ್ರಾಮದ ದ್ಯಾವಮ್ಮ ತಾಯಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ‘ರೈತಬಂಧು ಜೋಕುಮಾರಸ್ವಾಮಿ ಸಂಭ್ರಮ, ಜಾನಪದ ಗೀತ ಗಾಯನ ಮತ್ತು ಕಲಾವಿದರಿಗೆ ಸತ್ಕಾರ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ನಿವೃತ್ತ ಶಿಕ್ಷಕ ಹಿರಗಪ್ಪ ಎಸ್.ಬರಗಾಲಿ ಮಾತನಾಡಿ, ಜನಪದ ನಮ್ಮ ದಿನನಿತ್ಯದ ಆಚರಣೆಯಲ್ಲಿ ಹಾಸುಹೊಕ್ಕಾಗಿದೆ. ಇದನ್ನು ಮರೆತರೆ ಹೆತ್ತ ತಾಯಿಯನ್ನು ಮರೆತಂತೆ. ಬದುಕಿನ ಸುಂದರತೆಯ ಬಗೆಯನ್ನು ಚಿತ್ರಿಸಲಾಗಿದೆ. ಅನುಭಾವದ ಸತ್ವವನ್ನು ಹೊಂದಿರುವ ಜಾನಪದ ಕಲೆ, ಸಾಹಿತ್ಯ, ಸಂಸ್ಕøತಿ, ಪರಂಪರೆಯನ್ನು ಉಳಿಸಿ, ಬೆಳೆಸುವ ಕಾರ್ಯ ನಿರಂತರವಾಗಿ ಜರುಗಬೇಕಾಗಿದೆ ಎಂದರು.
ಜಾನಪದ ಕಲಾವಿದರಾದ ಪುತಳಾಬಾಯಿ ಬಿ.ತಳವಾರ, ಶುಶೀಲಾಬಾಯಿ ಎನ್.ಮೂಲಿಮನಿ, ಗೌರಮ್ಮ ಎಂ.ತಳವಾರ, ರತ್ನಮ್ಮ ಎಸ್.ತಳವಾರ ಅವರನ್ನು ಸತ್ಕರಿಸಿ ಗೌರವಿಸಲಾಯಿತು. ನಂತರ ಇದೇ ಕಲಾವಿದರಿಂದ ಜಾನಪದ ಗೀತಗಾಯನ ಜರುಗಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನಳಿಕುಮಾರ ಎಚ್.ವಂಟಿ, ಕಜಾಪ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಪ್ರಮುಖರಾದ ಅಂಬಿಕಾ, ಮಲ್ಲಮ್ಮ, ಸಂತೋಷ ಅನಸೂಬಾಯಿ, ಶರಣಪ್ಪ, ಯಶವಂತ, ಹಣಮಂತ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.