ಜನಪದರು ರಂಗಮಂದಿರ ಶೀಘ್ರ ಲೋಕಾರ್ಪಣೆ

ಹೊಸಕೋಟೆ, ಏ. ೩- ರಾಷ್ಟ್ರ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿರುವ ಜನಪದರು ಸಾಂಸ್ಕೃತಿಕ ವೇದಿಕೆ ವತಿಯಿಂದ ನಿರ್ಮಾಣ ಮಾಡುತ್ತಿರುವ ರಂಗಮಂದಿರ ಶೀಘ್ರ ಲೋಕಾರ್ಪಣೆ ಭಾಗ್ಯ ಕಾಣಲಿದೆ ಎಂದು ವೇದಿಕೆ ಅಧ್ಯಕ್ಷ ಕಾಟಂನಲ್ಲೂರು ಪಾಪಣ್ಣ ತಿಳಿಸಿದರು.
ಜನಪದರು ವೇದಿಕೆ ಆವರಣದಲ್ಲಿ ವಿಶ್ವರಂಗಭೂಮಿ ದಿನದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದರು.
ನಿರಂತರವಾಗಿ ಪ್ರತಿ ತಿಂಗಳು ಆಯೋಜನೆ ಮಾಡಲಾಗುತ್ತಿದ್ದ ರಂಗಮಾಲೆ ಕಾರ್ಯಕ್ರಮವನ್ನು ಕರೋನಾ ಇದ್ದ ಕಾರಣ ನಿಲ್ಲಿಸಲಾಗಿತ್ತು. ಈ ವೇಳೆಯಲ್ಲಿ ಪ್ರಗತಿಯಲ್ಲಿದ್ದ ರಂಗಮಂದಿರ ಕಾಮಗಾರಿ ಪೂರ್ಣಗೊಳಿಸಲಾಗಿದೆ. ೬೫೦ ಆಸನಗಳುಳ್ಳ ಹವಾನಿಯಂತ್ರಿತ, ಇಂಡೋ ಪಾರ್ಷಿ ಮಾದರಿಯುಳ್ಳ, ಹೈಡ್ರಾಲಿಕ್ ರಿವಾಲ್ವಿಂಗ್ ರಂಗಮಂಚ ಹೊಂದಿರುವ ರಂಗ ಮಂದಿರ ಇದಾಗಿದ್ದು ಶೀಘ್ರವಾಗಿ ಉದ್ಘಾಟನೆ ಭಾಗ್ಯ ಕಲ್ಪಿಸಿ ಕಲಾವಿದರಿಗೆ ಅರ್ಪಿಸಲಾಗುವುದು ಎಂದರು.
ಹಿರಿಯ ರಂಗ ಕಲಾವಿದ ಜಗದೀಶ್ ಕೆಂಗನಾಳ್ ರಂಗಭೂಮಿ ಕಲೆ ತನ್ನದೇ ಆದ ಛಾಪನ್ನು ಮೂಡಿಸಿದೆ. ಆದರೆ ಆಧುನಿಕತೆಯ ದೃಶ್ಯಮಾಧ್ಯಮಗಳ ನಡುವೆ ರಂಗಭೂಮಿ ಕಲೆ ತನ್ನ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಆದ್ದರಿಂದ ರಂಗಭೂಮಿ ಕಲೆ ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ಯುವ ಸಮುದಾಯದ ಮೇಲಿದ್ದು, ನಾಟಕಗಳ ವೀಕ್ಷಣೆಗೆ ಆಸಕ್ತಿ ತೋರಬೇಕು ಎಂದರು.ಕಲಾವಿದರ ಕುಟುಂಬದವರಿಗೆ ಕುಟುಂಬ ಸಮ್ಮಿಲನ ಕಾರ್ಯಕ್ರಮದ ಮೂಲಕ ವಿವಿಧ ಸ್ಪರ್ಧೆ ಆಯೋಜಿಸಿ ಬಹುಮಾನ ವಿತರಣೆ ಮಾಡಲಾಯಿತು.
ವೇದಿಕೆಯ ಸದಸ್ಯರು, ಕಲಾವಿದರಾದ ದೊಡ್ಡಬನಹಳ್ಳಿ ಸಿದ್ದೇಶ್, ಸುರೇಶ್, ಕೆ.ಸಿ.ಶಿವಕುಮಾರ್, ಚಂದ್ರು, ನಿತಿನ್, ಸಾಗರ್ ಇದ್ದರು.