ಜನಪದದಲ್ಲಿ ನಕಲಿ ಸಾಹಿತ್ಯ ಹುಟ್ಟಿಕೊಳ್ಳುತ್ತಿರುವುದು ವಿಷಾದಕರ

ಹುಬ್ಬಳ್ಳಿ, ಮಾ14: ಪರಂಪರೆಯಿಂದ ಬಂದಿರುವ, ಹಿರಿಯರಿಂದ ಬಳುವಳಿಯಾಗಿ ಬಂದಿರುವ, ಮೌಖಿಕವಾಗಿ ಇರುವ, ನೈತಿಕ ಮೌಲ್ಯಗಳುಳ್ಳ ಶುದ್ಧ ಸಾಹಿತ್ಯ, ಕಲೆ ಹಾಗೂ ಕ್ರೀಡೆಗಳೇ ಜಾನಪದವಾಗಿವೆ ಎಂದು ಜಾನಪದ ತಜ್ಞರಾದ ಡಾ.ರಾಮು ಮೂಲಗಿ ಹೇಳಿದರು.
ನಗರದಲ್ಲಿ ಕನ್ನಡ ಕಲಾ ಕೃಷಿ ಬಳಗ ಹಾಗೂ ಬಸವ ಸೇವಾ ಸಮಿತಿ ವತಿಯಿಂದ ಕಾಳಿದಾಸ ನಗರದ ಬಸವಣ್ಣ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಮೂಲ ಜನಪದದ ಅರಿವು ವಿಷಯ ಕುರಿತು ಅವರು ಮಾತನಾಡಿದರು.
ಜನಪದಕ್ಕೆ ಮೂಲ ಮಾಲಿಕರಿಲ್ಲ. ಜನಪದದಲ್ಲಿ ಮೂರು ಪ್ರಕಾರಗಳಿವೆ. ಗ್ರಾಮೀಣ ಪ್ರದೇಶದಲ್ಲಿ ಬಳಕೆಯಲ್ಲಿರುವ ಪದಗಳನ್ನು ತಮ್ಮ ಸಾಹಿತ್ಯದಲ್ಲಿ ಸಾಹಿತಿಗಳು ಬಳಸಿಕೊಂಡು ಜನಪ್ರಿಯ ಸಾಹಿತ್ಯ ರಚಿಸಿದರು. ಇಂದು ಮೊಬೈಲ್, ಟಿವಿ ಹಾವಳಿಯಿಂದ ಜನಪದದಲ್ಲಿ ನಕಲಿ ಸಾಹಿತ್ಯ ಹುಟ್ಟಿಕೊಳ್ಳುತ್ತಿರುವುದು ವಿಷಾದಕರ ಸಂಗತಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜನಪದ ಹಾಡುಗಳನ್ನು ಹಾಡಿ ರಂಜಿಸಿದರು.
ಈ ಸಂದರ್ಭದಲ್ಲಿ ರಂಗಕರ್ಮಿಯಾದ ಜಿ.ವಿ. ಹಿರೇಮಠ, ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಆರ್.ಎಂ. ಗೋಗೇರಿ, ರಾಮಚಂದ್ರ ಪತ್ತಾರ, ಎಸ್.ಕೆ. ಮಾಲಿಪಾಟೀಲ ಮತ್ತಿತರರು ಉಪಸ್ಥಿತರಿದ್ದರು.