ಜನನ ಮರಣ ನೋಂದಣಿ ಕಾಯ್ದೆ ತಿದ್ದುಪಡಿಗೆ ವಕೀಲರ ವಿರೋಧ

ಅರಸೀಕೆರೆ, ಆ. ೧- ರಾಜ್ಯ ಸರ್ಕಾರ ಜನನ ಮತ್ತು ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ವಕೀಲರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.
ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ರೂಪ ರಾಜ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ಜನನ ಮತ್ತು ಮರಣ ನೊಂದಣಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.
ನಂತರ ವಕೀಲರ ಸಂಘದ ಅಧ್ಯಕ್ಷರಾದ ರೂಪ ರಾಜ್ ಮಾತನಾಡಿ. ರಾಜ್ಯ ಸರ್ಕಾರ ಜನನ ಮತ್ತು ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ತಂದು ವಿಳಂಬ ನೋಂದಣಿ ಅಧಿಕಾರ ವ್ಯಾಪ್ತಿಯನ್ನು ಸಿವಿಲ್ ನ್ಯಾಯಾಲಯದಿಂದ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿರುವುದು ಸಾರ್ವಜನಿಕರಿಗೆ ಹಾಗೂ ಗ್ರಾಮಾಂತರ ನ್ಯಾಯಾಲಯದ ವಕೀಲರಿಗೆ ತುಂಬಾ ಅನ್ಯಾಯ. ಇದು ಕಾನೂನು ಬಾಹಿರವಾಗಿದೆ. ಆದ್ದರಿಂದ ಸರ್ಕಾರ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ತಕ್ಷಣವೇ ಈ ತಿದ್ದುಪಡಿ ಕಾಯಿದೆಯನ್ನು ಹಿಂಪಡೆಯಬೇಕು. ಈಗಿರುವ ಸಿವಿಲ್ ನ್ಯಾಯಾಲಯದ ಅಧಿಕಾರವನ್ನು ಮುಂದುವರಿಸಬೇಕು ಎಂದು ಸಾರ್ವಜನಿಕರ ಪರವಾಗಿ ವಕೀಲರ ಸಂಘ ಸರ್ಕಾರವನ್ನು ಆಗ್ರಹಿಸುತ್ತದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಹಿರಿಯ ವಕೀಲರಾದ ಚಂದ್ರಶೇಖರ್, ಮಲ್ಲೇಶ್, ಹಿರಿಯಣ್ಣ, ವಿಜಯಕುಮಾರ್, ಸುನಿಲ್ ಕುಮಾರ್, ಶರತ್, ನಟರಾಜ್, ತನುಜ, ಉಮಾದೇವಿ ಮತ್ತಿತರರು ಭಾಗವಹಿಸಿದ್ದರು.