ಜನನ ಮರಣ ನೊಂದಣಿ ಕಾಯ್ದೆ ತಿದ್ದುಪಡಿ ಹಿಂಪಡಿಯಲು ಕೂಡ್ಲಿಗಿ ವಕೀಲರ ಸಂಘ ಒತ್ತಾಯ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜು. 29 :- ಜನನ ಮರಣ ನೊಂದಣಿ ಕಾಯ್ದೆ ತಿದ್ದುಪಡಿಯನ್ನು ಸರ್ಕಾರ ಹಿಂಪಡಿಯಬೇಕು ಎಂದು ಕೂಡ್ಲಿಗಿ ವಕೀಲರ ಸಂಘ ಇಂದು ಬೆಳಿಗ್ಗೆ ಕೂಡ್ಲಿಗಿ ತಹಸೀಲ್ದಾರ್ ಮುಖೇನಾ ರಾಜ್ಯದ ಸಿಎಂ ಗೆ ಮನವಿ ಸಲ್ಲಿಸಿ ಆಗ್ರಹಿಸಿತು.
ಇದೇ ತಿಂಗಳು ಜುಲೈ 18 ರಂದು ಸರ್ಕಾರವು ಹೊರಡಿಸಿದ ಅಧಿಸೂಚನೆಯಂತೆ   ಜನನ ಮರಣ ವಿಳಂಬ ನೊಂದಣಿ ಅಧಿಕಾರ ವ್ಯಾಪ್ತಿಯನ್ನು ಸಿವಿಲ್ ನ್ಯಾಯಾಲಯದಿಂದ ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಹಸ್ತಾಂತರ ಮಾಡಿರುವುದು ಸಾರ್ವಜನಿಕರಿಗೆ ತುಂಬಲಾರದ ನಷ್ಟವಾಗುತ್ತಿದ್ದು ಅಲ್ಲದೆ ಸದರಿ ತಿದ್ದುಪಡಿಯ ಅಧಿಕಾರವು ಅಸಂವಿಧಾನಿಕವಾಗಿದ್ದು ಮತ್ತು ಕಾನೂನುಬಾಹಿರವಾಗಿರುತ್ತದೆ. ಆದ್ದರಿಂದ ಸರ್ಕಾರವು ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತಿದ್ದುಪಡಿ ಆದೇಶವನ್ನು ಹಿಂಪಡೆಯಬೇಕು ಹಾಗೂ ಹೀಗಿರುವ ಸಿವಿಲ್ ನ್ಯಾಯಾಲಯದ ಕಾರ್ಯವ್ಯಾಪ್ತಿಯನ್ನು ಮುಂದುವರೆಸಬೇಕೆಂದು ಸರ್ಕಾರವನ್ನು ಕೂಡ್ಲಿಗಿ ವಕೀಲರ ಸಂಘದ ಸರ್ವ ಸದಸ್ಯರು  ಒತ್ತಾಯಿಸಿದ್ದು ಈ ಒತ್ತಾಯವನ್ನು ಒಂದು ವೇಳೆ ಸರ್ಕಾರ ತಿದ್ದುಪಡಿ ಕಾಯ್ದೆ ಹಿಂಪಡೆಯದಿದ್ದಲ್ಲಿ ವಿವಿಧ ಸ್ವರೂಪದ ಹೋರಾಟಕ್ಕೆ ಕೂಡ್ಲಿಗಿ ವಕೀಲರ ಸಂಘ ಮುಂಚೂಣಿಯಲ್ಲಿರುತ್ತದೆ ಎಂದು  ಕೂಡ್ಲಿಗಿ ವಕೀಲರ ಸಂಘ ಸರ್ಕಾರವನ್ನು ಒತ್ತಾಯಿಸಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕೂಡ್ಲಿಗಿ ವಕೀಲರ ಸಂಘದ ಅಧ್ಯಕ್ಷ ಜಿ ಹೊನ್ನೂರಪ್ಪ, ಉಪಾಧ್ಯಕ್ಷ ಟಿ ಪಾಪಯ್ಯ, ಕಾರ್ಯದರ್ಶಿ ಸಿದ್ದಲಿಂಗಪ್ಪ, ಕಾಟಯ್ಯ, ನಾಗರಾಜ, ಮಲ್ಲಿಕಾರ್ಜುನ, ದುರುಗೇಶ, ಭಾಷಾ, ಪ್ರಕಾಶ, ಹಾರಕಭಾವಿ ರವಿ, ಸಲೀಂ ಹಾಗೂ ಇತರೆ ವಕೀಲರು ಉಪಸ್ಥಿತರಿದ್ದು ಕೂಡ್ಲಿಗಿ ತಹಸೀಲ್ದಾರ್ ಜಗದೀಶ್ ಅವರಿಗೆ ಮನವಿ ಸಲ್ಲಿಸಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Attachments area