ಜನನ-ಮರಣ ನೊಂದಣಿ ಕಾಯ್ದೆ ಅಧಿಸೂಚನೆ ಹಿಂಪಡೆಯಲು ಮನವಿ

ಬ್ಯಾಡಗಿ,ಜು.29: ರಾಜ್ಯ ಸರ್ಕಾರ ಜನನ-ಮರಣ ನೊಂದಣಿ ಕಾಯ್ದೆ ಬಗ್ಗೆ ಹೊರಡಿಸಿದ ಅಧಿಸೂಚನೆಯನ್ನು ಹಿಂಪಡೆದು ಮೊದಲಿನ ಹಾಗೆ ಜೆಎಂಎಫ್’ಸಿ ನ್ಯಾಯಾಲಯಕ್ಕೆ ಅಧಿಕಾರ ನೀಡಬೇಕೆಂದು ತಾಲೂಕಾ ನ್ಯಾಯವಾದಿಗಳ ಸಂಘದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಹಾಗೂ ಕಾನೂನು ಸಚಿವರಿಗೆ ತಹಶೀಲ್ದಾರ ಅವರ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ಅವರು,
ಜನನ ಮತ್ತು ಮರಣ ದಾಖಲೆಗಳ ಬಗ್ಗೆ ವಿವಾದಗಳು ಇದ್ದಲ್ಲಿ ಅಥವಾ ಎಂಟ್ರಿಗಳು ಇಲ್ಲದಂತಹ ಸಂದರ್ಭದಲ್ಲಿ ಇಲ್ಲಿಯವರೆಗೂ ಜೆಎಂಎಫ್’ಸಿ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿ, ನ್ಯಾಯಾಲಯದಿಂದ ಆದೇಶವನ್ನು ಪಡೆದುಕೊಂಡು, ಆದೇಶದ ಪ್ರತಿಯೊಂದಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿಯನ್ನು ಸಲ್ಲಿಸಿ ನ್ಯಾಯಾಲಯದ ಆದೇಶದ ಪ್ರಕಾರ ನೊಂದಣಿ ಮಾಡಿಸುತ್ತಾ ಬಂದಿದ್ದು ಇರುತ್ತದೆ. ಈಗ ಏಕಾಏಕಿ ಜನನ ಮತ್ತು ಮರಣ ನೊಂದಣಿ ಕಾಯ್ದೆ ಅನ್ವಯ ಜೆಎಂಎಫ್’ಸಿ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ತೆಗೆದು ಹಾಕಿ ಉಪವಿಭಾಗಾಧಿಕಾರಿಗಳ ವ್ಯಾಪ್ತಿಗೆ ಹೊಸ ಅಧಿಸೂಚನೆಯ ಮೂಲಕ ನೀಡಿರುವುದು ಸರಿಯಲ್ಲ ಎಂದರು.
ಹಿರಿಯ ನ್ಯಾಯವಾದಿ ಆರ್.ವಿ.ಬೆಳಕೇರಿಮಠ ಮಾತನಾಡಿ, ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಜನನ ಮತ್ತು ಮರಣ ನೊಂದಣಿ ಕಾಯ್ದೆ ಅನ್ವಯ ಅಧಿಕಾರ ವ್ಯಾಪ್ತಿಗೆ ನೀಡುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತದೆ. ಈಗಾಗಲೇ ರೆವಿನ್ಯೂ ನ್ಯಾಯಾಲಯಗಳಲ್ಲಿ ರಾಜಕೀಯ ಪ್ರಭಾವ, ಅನುಚಿತ ಪ್ರಭಾವ, ಒತ್ತಡಗಳಿಂದ ಸಾರ್ವಜನಿಕರಿಗೆ ಸೂಕ್ತ ನ್ಯಾಯ ದೊರೆಯುವ ಸಾಧ್ಯತೆ ಇರುತ್ತದೆ. ಅಲ್ಲದೇ ಜನನ ಮತ್ತು ಮರಣ ನೊಂದಣಿ ಕಾಯ್ದೆ ಅನ್ವಯ ದಾಖಲೆಗಳನ್ನು ಕೊಡಿಸಲು ಬೋಕರ್‍ಗಳ ಹಾವಳಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮೊದಲು ಇದ್ದ ಹಾಗೆ ಆಯಾ ತಾಲೂಕಿನ ಜೆಎಂಎಫ್’ಸಿ ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿಯನ್ನು ಮುಂದುವರೆಸಬೇಕೆಂದು ತಿಳಿಸಿದರು.

ಹಿರಿಯ ನ್ಯಾಯವಾದಿ ವಿ.ಎಸ್.ಕಡಗಿ ಮಾತನಾಡಿ, ರಾಜ್ಯ ಸರ್ಕಾರ ಜನನ-ಮರಣ ನೊಂದಣಿ ಕಾಯ್ದೆ ಬಗ್ಗೆ ಹೊರಡಿಸಿದ ಅಧಿಸೂಚನೆ ನಂ ಪಿ.ಡಿ.ಎಸ್. 66 ಎಸ್.ಎಸ್.ಎಮ್ 2022 ದಿನಾಂಕ : 18-07-2022 ನೇದ್ದನ್ನು ಹಿಂಪಡೆದು, ಈ ಮೊದಲು ಇದ್ದ ಹಾಗೆ ಸಂಬಂಧಿಸಿದ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ಮುಂದುವರೆಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹಿರಿಯ ನ್ಯಾಯವಾದಿಗಳಾದ ಎಫ್.ಎಂ.ಮುಳಗುಂದ, ಎಸ್.ಎನ್.ಚೆನ್ನಗೌಡ್ರ, ಕಾರ್ಯದರ್ಶಿ ಸುರೇಶ ಗುಂಡಪ್ಪನವರ, ಸಹ ಕಾರ್ಯದರ್ಶಿ ಸುರೇಶ ಕಾಟೇನಹಳ್ಳಿ, ಪ್ರಭು ಶೀಗಿಹಳ್ಳಿ, ಹಾಲೇಶ ಜಾಧವ, ರಾಜು ಶಿಡೇನೂರ, ಎಂ.ಎ.ಅಗಸರ, ಎನ್.ಎಸ್.ಬಾರ್ಕಿ, ಮಾಲತೇಶ ಹಾವೇರಿ, ತಿಪ್ಪೇಶಿ ಹಡಗಲಿ, ಕೆ.ಡಿ.ಪಾಟೀಲ, ಎಸ್.ಎಂ.ಮುಚ್ಚಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.