ಜನನ- ಮರಣಗಳ ನೋಂದಣಿ ಕಾಯ್ದೆ ಮಂಡನೆ; ರಾಜ್ಯದ ಹೆಸರು ಉಲ್ಲೇಖಿಸದ ಸಂಸತ್ತು

ಸಂಜೆವಾಣಿ ವಾರ್ತೆ

ದಾವಣಗೆರೆ.ಆ.೮: ಜನನ ಪ್ರಮಾಣ ಪತ್ರ ಎಲ್ಲದಕ್ಕೂ ಆಧಾರವಾಗಿಸಿ ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ ೧೯೬೯ ಕ್ಕೆ ತಿದ್ದುಪಡಿ ತರುವ ಉದ್ದೇಶದ ಮಸೂದೆಯನ್ನು ಜುಲೈ ೨೬ ಬುಧವಾರ ಲೋಕಸಭೆಯಲ್ಲಿ ರಾಜ್ಯದ ಹೆಸರನ್ನು ಉಲ್ಲೇಖಿಸದೇ ಮಂಡಿಸಿರುವುದು ವಿಷಾಧನೀಯ ಎಂದು ಹೆಣ್ಣು ಭ್ರೂಣಹತ್ಯೆಯ ನಿಯಂತ್ರಣ ಹಾಗೂ ಮಕ್ಕಳ ಹಕ್ಕುಗಳ ಆರುಷಿ ಯೋಜನೆಯ ರೂವಾರಿ   ಹೊನ್ನಾಳಿಯ ಸಿ.ಎಂ. ಜಕ್ಕಾಳಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ತು ವರ್ಷಗಳ ಹಿಂದೆಯೇ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ  ೨೦೧೪ ರಿಂದ ೨೦೨೩ ವರೆಗೆ ನಿರಂತರವಾಗಿ ೧೦ ನೇ ಬಾರಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಜಿಲ್ಲೆಯಿಂದ ಸಲ್ಲಿಕೆಯಾಗಿರುವುದು ಜಿಲ್ಲೆ ಮತ್ತು ರಾಜ್ಯದ ಜನತೆಗೆ ಹೆಮ್ಮೆಯನ್ನು ತರುವ ವಿಷಯವಾಗಿದೆ. ಆದರೆ ನಮ್ಮ ರಾಜ್ಯದ  ಸಂಸದರು ಹಾಗೂ  ಹಿಂದಿನ ಸರ್ಕಾರ ಕೇಂದ್ರದ ಗಮನಕ್ಕೆ ತರುವಲ್ಲಿ ವಿಫಲವಾಗಿರುವುದರಿಂದ ದೇಶದ ಮಟ್ಟದಲ್ಲಿ ನಮ್ಮ ರಾಜ್ಯಕ್ಕೆ ದೊರಕಬೇಕಾದ ಗೌರವ ದೊರಕಿದಂತಾಗಿದೆ ಎಂದರು.೧೯೬೯ ರ ಕಾಯ್ದೆ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಲು ರಾಜ್ಯದ ಸಂಸದರು, ರಾಜ್ಯ ಹಾಗೂ ಕೇಂದ್ರ ಸಚಿವರು ಚರ್ಚಿಸಿ, ಸಂಬಂಧಿಸಿದವರಿಗೆ ತಲುಪುವಂತೆ ಮಾಡಿ, ರಾಜ್ಯಕ್ಕೆ ಸಲ್ಲಬೇಕಾಗಿರುವ ಗೌರವವನ್ನು ತಂದು ಕೊಡಬೇಕೆಂದು ಸಂಸದ ಜಿ.ಎಂ. ಸಿದ್ದೇಶ್ವರ್ ಅವರನ್ನು ಒತ್ತಾಯಿಸುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಮಂಜುನಾಥ್ ಉಪಸ್ಥಿತರಿದ್ದರು.