ಜನನ ಮತ್ತು ಮರಣ ನೊಂದಣಿ: ಸಹಾಯಕ ಆಯುಕ್ತರ ಕಚೇರಿ ವ್ಯಾಪ್ತಿ ವಿರೋಧಿಸಿ ನ್ಯಾಯವಾದಿಗಳಿಂದ ಮಾನವ ಸರಪಳಿ ರಚಿಸಿ ಪ್ರತಿಭಟನೆ

ಕಲಬುರಗಿ,ಜು.30: ಕರ್ನಾಟಕ ಸರ್ಕಾರ ಜನನ ಮತ್ತು ಮರಣದ ನೊಂದಣಿಗೆ ನಿಯಮ 9, ಉಪ ನಿಯಮ 3ರ ತಿದ್ದುಪಡಿಯಿಂದ ಪ್ರಕರಣ ನ್ಯಾಯಾಂಗ ಮ್ಯಾಜಿಸ್ಟ್ರೇಟ್‍ರಿಂದ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಅವರಿಗೆ ವರ್ಗಾಯಿಸುವ ಮೂಲಕ ಕಕ್ಷಿದಾರರಿಗೆ ಮತ್ತು ನ್ಯಾಯವಾದಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿ ಶನಿವಾರ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ನ್ಯಾಯವಾದಿಗಳು ಬೃಹತ್ ಪ್ರಮಾಣದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು.
ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿ, ಜನನ ಹಾಗೂ ಮರಣ ನೊಂದಣಿ ಕಾಯ್ದೆ 1969ಕ್ಕೆ ಕಳೆದ ಜುಲೈ 18ರಂದು ಕರ್ನಾಟಕ ಸರ್ಕಾರವು ಜಾರಿಗೊಳಿಸಿದ ಹೊಸ ತಿದ್ದುಪಡಿ ನಿಯಮಗಳು ಸಾರ್ವಜನಿಕ ಹಿತಾಸಕ್ತಿಗೆ, ಮೂಲ ಕಾನೂನಿಗೆ ವಿರುದ್ಧವಾಗಿದೆ ಎಂದು ಟೀಕಿಸಿದರು.
ಜೆಎಂಎಫ್‍ಸಿ ನ್ಯಾಯಾಧೀಶರ ನ್ಯಾಯಾಲಯಗಳು ಸಾರ್ವಜನಿಕರಿಗೆ ಸಮೀಪದಲ್ಲಿವೆ ಲಭ್ಯವಿವೆ. ಸಾರ್ವಜನಿಕರಿಗೆ ನ್ಯಾಯಾಲಯಗಳ ಮೂಲಕ ಶೀಘ್ರ ಗತಿಯಲ್ಲಿ ಹಾಗೂ ಕಾನೂನಾತ್ಮಕವಾಗಿ ಕಾನೂನಿನ ಅಡಿಯಲ್ಲಿ ನ್ಯಾಯ ಸಿಗುತ್ತಿತ್ತು. ನ್ಯಾಯಾಲಯಗಳು ಸಾರ್ವಜನಿಕರಿಗೆ ಸಮೀಪದಲ್ಲಿಯೇ ಸಿಗುತ್ತವೆ. ಆದಾಗ್ಯೂ, ಸಹಾಯಕ ಆಯುಕ್ತರ ಕಚೇರಿಯು ಎರಡ್ಮೂರು ತಾಲ್ಲೂಕಿಗೆ ಒಂದು ಲಭ್ಯವಿದೆ. ಆದ್ದರಿಂದ ತಿದ್ದುಪಡಿ ನಿಯಮಗಳಿಂದಾಗಿ ನ್ಯಾಯಾಲಯದಿಂದ ಜನಸಾಮಾನ್ಯರಿಗೆ ಸರಳವಾಗಿ ಸಿಗುತ್ತಿದ್ದ ನ್ಯಾಯ ದೂರವಾಗಿದೆ ಎಂದು ಅವರು ಅಸಮಾಧಾನ ಹೊರಹಾಕಿದರು.
ಈಗ ಸರ್ಕಾರವು ಮುಂದಾಲೋಚನೆಯಿಲ್ಲದೇ ಮೂರ್ಖತನದಿಂದ ಇಂತಹ ನಿರ್ಧಾರ ಕೈಗೊಂಡಿದೆ ಎಂದು ಕಿಡಿಕಾರಿದ ಅವರು, ಸಾರ್ವಜನಿಕ ಹತಿದ ವಿರುದ್ಧವಿದ್ದು ಅನಾವಶ್ಯಕವಾದ ತಿದ್ದುಪಡಿಯನ್ನು ಮಾಡಿದೆ. ಸಹಾಯಕ ಆಯುಕ್ತರ ಹುದ್ದೆಗೆ ಈಗಾಗಲೇ ವಿವಿಧ ಕಾನೂನುಗಳಿಂದಾಗಿ ಸಾಕಷ್ಟು ಹೊಣೆಗಾರಿಕೆಗಳಿಂದ ಹಾಗೂ ಅತಿಯಾದ ಕಂದಾಯ ಇಲಾಖೆಯ ಕೆಲಸಗಳ ಒತ್ತಡದಿಂದಾಗಿ ಬಾಕಿ ಇರುವ ಕೆಲಸಗಳ ಕಡತಗಳ ವಿಲೇವಾರಿ ಆಗುತ್ತಿಲ್ಲ ಎಂದು ತಿಳಿಸಿದರು.
ಮೇಲಾಗಿ ಸಹಾಯಕ ಆಯುಕ್ತರು ಕಾರ್ಯಾಂಗದ ಹಾಗೂ ಶಾಸಕಾಂಗದ ವ್ಯಕ್ತಿಗಳ ನೇರ ಹಾಗೂ ಪರೋಕ್ಷ ನಿಯಂತ್ರಣದಲ್ಲಿ ಕೆಲಸ ಮಾಡುತ್ತಾರೆ. ನ್ಯಾಯಾಧೀಶರಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಸ್ವತಂತ್ರರಾಗಿ ಕೆಲಸ ಮಾಡುವ ವಾತಾವರಣವಿಲ್ಲ. ತನ್ನ ಅಧೀನಕ್ಕೆ ಬರುವ ಜನನ, ಮರಣ ನೊಂದಣಾಧಿಕಾರಿಗಳ ವಿರುದ್ಧ ಅಧಿಕಾರಿಗಳು ಆದೇಶ ಮಾಡದೇ ಇರಬಹುದು. ಇದರಿಂದಾಗಿ ನ್ಯಾಯಾಲಯಗಳ ಮೂಲಕ ಸರಳವಾಗಿ ಜನಸಾಮಾನ್ಯರಿಗೆ ಸಿಗುತ್ತಿದ್ದ ನ್ಯಾಯವನ್ನು ಸರ್ಕಾರವು ಕಸಿದುಕೊಂಡಿದೆ ಎಂದು ಅವರು ದೂರಿದರು.
ಹೊಸ ಕಾನೂನು ಕಂದಾಯ ಇಲಾಖೆಯ ಲಂಚಗುಳಿತಕನ್ಕೆ ಹೊಸ ದಾರಿ ಮಾಡಿದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಆದ್ದರಿಂದ ಸಾಧಕ, ಬಾಧಕಗಳನ್ನು ಸಾರ್ವಜನಿಕರ ತಕರಾರುಗಳನ್ನು ಪರಿಗಣಿಸಿ ಸರ್ಕಾರವು ಕೂಡಲೇ ತಿದ್ದುಪಡಿ ನಿಯಮಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು.
ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜಕುಮಾರ್ ಎಸ್. ಕಡಗಂಚಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶ್ರೀಮತಿ ಫತ್ರುಬಿ ಎ. ಕಾಶ್ಮಿಶಾ, ಪಿ.ಎನ್. ಕಪನೂರ್, ವಿಶ್ವಾರಾಧ್ಯ ಕೆ. ಇಜೇರಿ, ದೇವಂತ್ ಎಸ್. ಮಾಳಗಿ ಮುಂತಾದವರು ಪಾಲ್ಗೊಂಡಿದ್ದರು.