
ಟೋಕಿಯೋ, ಮಾ.೭- ಸಾಮಾಜಿಕ ಸುರಕ್ಷತಾ ನಿವ್ವಳ ಮತ್ತು ಆರ್ಥಿಕತೆಯನ್ನು ಹಾಳುಮಾಡುವ ಜನನ ದರದಲ್ಲಿನ ಕುಸಿತವನ್ನು ತಡೆಯಲು ಸಾಧ್ಯವಾಗದಿದ್ದರೆ ಜಪಾನ್ ಮುಂದೊಂದು ದಿನ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಅವರ ಸಲಹೆಗಾರ್ತಿ ಮಸಾಕೊ ಮೊರಿ ಎಚ್ಚರಿಕೆ ನೀಡಿದ್ದಾರೆ.
ಇದೇ ಪರಿಸ್ಥಿತಿ (ಜನನ ಪ್ರಮಾಣ ಕುಸಿತ)ಯಲ್ಲಿ ನಾವು ಮುಂದುವರೆದರೆ ಜಪಾನ್ ಮುಂದೊಂದು ದಿನ ಕಣ್ಮರೆಯಾಗಲಿದೆ. ಕಣ್ಮರೆಯಾಗುವ ಪ್ರಕ್ರಿಯೆಯ ಮೂಲಕ ಜನರು ಬದುಕಬೇಕಾದ ಅನಿವಾರ್ಯತೆ ಒದಗಿದೆ. ಇದೊಂದು ಬಾಧಿಸುವ ಭಯಾನಕ ಕಾಯಿಲೆಯಾಗಿದೆ. ಜನನ ಪ್ರಮಾಣ ಕೇವಲ ನಿಧಾನವಾಗಿ ಇಳಿಯುತ್ತಿಲ್ಲ. ಬದಲಾಗಿ ಆಘಾತಕಾರಿ ರೀತಿ ಎಂಬಂತೆ ಕೆಳಗೆ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಸದ್ಯ ಇದಕ್ಕೆ ಈಗಲೇ ಯಾವ ಕ್ರಮವನ್ನು ತೆಗೆದುಕೊಳ್ಳದಿದ್ದರೆ ಸಾಮಾಜಿಕ ಭದ್ರತಾ ವ್ಯವಸ್ಥೆಯು ಕುಸಿಯಲಿದ್ದು, ಕೈಗಾರಿಕಾ ಮತ್ತು ಆರ್ಥಿಕ ಶಕ್ತಿ ಕುಸಿಯಲಿದೆ. ದೇಶವನ್ನು ರಕ್ಷಿಸಲು ಸ್ವಯಂ-ರಕ್ಷಣಾ ಪಡೆಗಳಿಗೆ ಸಾಕಷ್ಟು ನೇಮಕಾತಿ ನಡೆಸಲು ಕೂಡ ಸಾಧ್ಯವಾಗುವುದಿಲ್ಲ. ಮಗುವನ್ನು ಹೆರುವ ವಯಸ್ಸಿನ ಮಹಿಳೆಯರ ಸಂಖ್ಯೆ ಸದ್ಯ ಕುಸಿತ ಕಾಣುತ್ತಿದೆ. ಆದರೆ ಈ ಪ್ರಕ್ರಿಯೆಯನ್ನು ವೇಗವಾಗಿ ಸರಿಪಡಿಸುವುದು ತುಂಬಾ ಕಠಿಣ ಕಾರ್ಯವಾಗಿದೆ. ಜನನ ಪ್ರಮಾಣ ಕುಸಿತವನ್ನು ನಿಧಾನಗೊಳಿಸಲು ಮತ್ತು ಹಾನಿಯನ್ನು ತಗ್ಗಿಸಲು ಸಹಾಯ ಮಾಡಲು ಸರ್ಕಾರವು ಎಲ್ಲಾ ಕ್ರಮವನ್ನು ಮಾಡಬೇಕಿದೆ ಎಂದು ಮೊರಿ ತಿಳಿಸಿದ್ದಾರೆ. ಜಿಡಿಪಿಯಲ್ಲಿ ಜಪಾನ್ ಸದ್ಯ ವಿಶ್ವದ ಮೂರನೇ ಅತೀ ದೊಡ್ಡ ಆರ್ಥಿಕತೆಯಾಗಿದ್ದು, ಎಲ್ಲಾ ರೀತಿಯ ಸಂಪನ್ಮೂಲಗಳನ್ನು ಹೊಂದಿದೆ. ಆದರೆ ಎಲ್ಲಾ ಸಂಪತ್ತು ಇದ್ದರೂ ಸದ್ಯ ಜಪಾನ್‌ನಲ್ಲಿ ಜನನ ಪ್ರಮಾಣ ಭಾರೀ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ.
ಜನನಕ್ಕಿಂತ ಮರಣ ಅಧಿಕ!
ಕಳೆದ ಫೆಬ್ರವರಿ ೨೮ರಂದು ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ ಕಳೆದ ವರ್ಷ ಜಪಾನ್‌ನಲ್ಲಿ ದಾಖಲೆಯ ಪ್ರಮಾಣದಲ್ಲಿ ಜನನ ಪ್ರಮಾಣ ಕುಸಿತ ಕಂಡಿರುವುದ ಬೆಳಕಿಗೆ ಬಂದಿದೆ. ಒಂದೆಡೆ ಭಾರತದಲ್ಲಿ ಜನನ ಪ್ರಮಾಣದಲ್ಲಿ ಏರಿಕೆ ದಾಖಲಾಗುತ್ತಿದ್ದರೆ ಇದೀಗ ಶ್ರೀಮಂತ ರಾಷ್ಟ್ರ ಜಪಾನ್‌ನಲ್ಲಿ ಮಕ್ಕಳ ಪ್ರಮಾಣ ತೀವ್ರ ರೀತಿಯಲ್ಲಿ ಕುಸಿಯುತ್ತಿದೆ. ಕಳೆದ ವರ್ಷ ಜಪಾನ್‌ನಲ್ಲಿ ೮ ಲಕ್ಷ ಮಕ್ಕಳ ಜನನವಾಗಿದ್ದರೆ ಸುಮಾರು ೧೬ ಲಕ್ಷ ಮಂದಿ ಮೃತಪಟ್ಟಿದ್ದರು. ಜನನ ಹಾಗೂ ಮರಣ ಪ್ರಮಾಣದಲ್ಲಿ ಭಾರೀ ಪ್ರಮಾಣದ ವ್ಯತ್ಯಾಸ ಸದ್ಯ ಜಪಾನ್‌ಗೆ ಕಂಟಕವಾಗುವ ಲಕ್ಷಣ ಗೋಚರಿಸಿದೆ. ೨೦೦೮ರಲ್ಲಿ ಜಪಾನ್‌ನಲ್ಲಿ ದಾಖಲೆಯ ೧೨೬ ಮಿಲಿಯನ್ (೧೨ ಕೋಟಿ)ನಷ್ಟು ಜನಸಂಖ್ಯೆ ಹೊಂದಿದ್ದರೆ ಇದೀಗ ಈ ಪ್ರಮಾಣ ೧೨೪.೬ ಮಿಲಿಯನ್‌ಗೆ ಇಳಿಕೆಯಾಗಿದೆ.