ಜನದಟ್ಟಣೆಗೆ ಕಡಿವಾಣ ಹಾಕಲು ಚಿಂತನೆ

ಮೈಸೂರು:ಮಾ:26: ಅರಮನೆ ನಗರಿ ಮೈಸೂರಿನಲ್ಲೂ ಕೊರೊನಾ ಮಹಾಮಾರಿಯ ಆರ್ಭಟ ಜೋರಾಗಿದ್ದು, ಪ್ರತಿನಿತ್ಯ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಜಾತ್ರೆ, ಸಭೆ, ಸಮಾರಂಭಗಳಿಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ನಿರ್ಧರಿಸಿದೆ.
ಮೈಸೂರಿನಲ್ಲಿ ಕಂಟ್ರೋಲ್‍ನಲ್ಲಿದ್ದ ಕೊರೊನಾ, ಮತ್ತೆ ತನ್ನ ಕಬಂಧಬಾಹುವಿನೊಳಗೆ ಅರಮನೆ ನಗರಿಯನ್ನ ಬಂಧಿಯನ್ನಾಗಿ ಮಾಡಿಕೊಳುತ್ತಿದೆ. ಮಾ.24ರಂದು 74 ಪಾಸಿಟಿವ್ ಕೇಸ್ ಕಂಡು ಬಂದಿದ್ದರೆ, ನಿನ್ನೆ ಅದು 89ಕ್ಕೆ ಏರಿಕೆಯಾಗಿದೆ. ಹೀಗೆ ದಿನದಿಂದ ದಿನಕ್ಕೆ ಪಾಸಿಟಿವ್ ಕೇಸ್‍ಗಳ ಸಂಖ್ಯೆ ಹೆಚ್ಚಾಗ್ತಿದ್ದು, ಜಿಲ್ಲಾಡಳಿತದ ಅತಂಕಕ್ಕೆ ಕಾರಣವಾಗಿದೆ.
ಕೊರೊನಾ ಕೇಸ್ ಹೆಚ್ಚಳ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಖಡಕ್ ರೂಲ್ಸ್‍ಗಳನ್ನು ಜಾರಿಗೆ ತರಲು ಮುಂದಾಗಿದ್ದು, ಸಮಾರಂಭ ಮತ್ತು ಜಾತ್ರೆಗಳಿಗೆ ನಿರ್ಬಂಧ ಹಾಕುವ ಚಿಂತನೆಯಲ್ಲಿದೆ. ಮೈಸೂರು ಪ್ರವಾಸಿ ತಾಣವಾಗಿರೋದ್ರಿಂದ ಜನಸಂದಣಿಯಾಗುವುದು ಸಾಮಾನ್ಯ. ಪ್ರವಾಸಿಗರು ಕೊರೊನಾ ನಿಯಮ ಗಾಳಿಗೆ ತೂರುತ್ತಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಸೇರುವ ಜನಸಂದಣಿಯಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲಿಸದಿರುವುದನ್ನು ಗಮನಿಸಿದ ಜಿಲ್ಲಾಡಳಿತ ಟಫ್‍ರೂಲ್ಸ್ ಜಾರಿಗೆ ಮುಂದಾಗಿದೆ.
ಕೊರೊನಾ ಕಂಟ್ರೋಲ್‍ಗೆ ಮೊದಲಿನಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಆದೇಶ ನೀಡಲಾಗಿದೆ.
ಜ್ವರ, ಕೆಮ್ಮಿನಿಂದ ಬಳಲುತ್ತಿರುವ ಮಕ್ಕಳಿಗೆ ಶಾಲೆಗೆ ಬಾರದಂತೆ ಸೂಚನೆ ನೀಡಲಾಗಿದೆ. ಪ್ರವಾಸಿ ತಾಣಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಜಾತ್ರೆ, ಹಬ್ಬಹರಿದಿನಗಳ ಮೇಲೂ ಹದ್ದಿನ ಕಣ್ಣಿಡಲಾಗಿದೆ.