ಜನತೆ ತೀರ್ಪಿಗೆ ತಲೆ ಬಾಗುತ್ತೇವೆ:ಎಸ್.ಆರ್.ವಿಶ್ವನಾಥ್

ಯಲಹಂಕ,ಮೇ.೧೪-ಯಲಹಂಕ ಕ್ಷೇತ್ರದಲ್ಲಿ ಸತತ ನಾಲ್ಕನೇ ಬಾರಿಗೆ ಶಾಸಕರಾಗಿ ಚುನಾಯಿತರಾಗಿರುವ ಎಸ್.ಆರ್.ವಿಶ್ವನಾಥ್ ಸಂತಸ ವ್ಯಕ್ತಪಡಿಸಿದ್ದಾರೆ.
ಭಾನುವಾರ ಕ್ಷೇತ್ರದ ಸಾವಿರಾರು ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಮತ್ತು ಮತದಾರರು ವಿಶ್ವನಾಥ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರಲ್ಲದೇ, ವಿಶ್ವನಾಥ್ ಅವರನ್ನು ಹೆಗಲ ಮೇಲೆ ಹೊತ್ತು ಕುಣಿದು ಕುಪ್ಪಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವನಾಥ್, ಕಳೆದ ಮೂರು ಬಾರಿ ಚುನಾವಣೆಯಲ್ಲಿ ತೋರಿಸಿದ್ದಕ್ಕಿಂತ ಹೆಚ್ಚು ಪ್ರೀತಿಯನ್ನು ಕ್ಷೇತ್ರದ ಮತದಾರರು ನನ್ನ ಮೇಲೆ ತೋರಿಸಿದ್ದಾರೆ. ಈ ಕಾರಣದಿಂದಲೇ ಕಳೆದ ಚುನಾವಣೆಗಿಂತ ಈ ಬಾರಿ ಹೆಚ್ಚು ಮತಗಳ ಅಂತರದಿಂದ ಅಂದರೆ ಸುಮಾರು ೬೪ ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲು ಸಾಧ್ಯವಾಗಿದೆ. ಇದಕ್ಕಾಗಿ ನಾನು ನನ್ನ ಕ್ಷೇತ್ರದ ಮತಬಾಂಧವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತಿರುವುದಾಗಿ ತಿಳಿಸಿದರು.
ಇಡೀ ರಾಜ್ಯದಲ್ಲಿ ಫಲಿತಾಂಶ ಏರುಪೇರಾಗಿದ್ದರೂ ನನ್ನ ನೆಚ್ಚಿನ ಯಲಹಂಕ ಕ್ಷೇತ್ರದ ಮತದಾರರು ನನ್ನ ಕೈ ಹಿಡಿದಿದ್ದಾರೆ. ಈ ಅಭೂತಪೂರ್ವವಾದ ಗೆಲುವು ನನಗೆ ಮತ್ತಷ್ಟು ಜವಾಬ್ದಾರಿಯನ್ನು ಕೊಟ್ಟಿದೆ. ನನ್ನ ಕ್ಷೇತ್ರದ ಜನತೆ ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ಯಾವುದೇ ಚ್ಯುತಿಯಾಗದ ರೀತಿಯಲ್ಲಿ ಇನ್ನು ಮುಂದೆಯೂ ಹೆಚ್ಚಿನ ಶಕ್ತಿ ಮೀರಿ ಕೆಲಸ ಮಾಡಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನಿರಂತರವಾಗಿ ಜನರ ಸಂಪರ್ಕವನ್ನು ಮುಂದುವರಿಸುವ ಮೂಲಕ ಅವರ ಸುಖ-ದುಃಖಗಳಲ್ಲಿ ಭಾಗಿಯಾಗುತ್ತೇನೆ. ಏನೇ ಸಮಸ್ಯೆಗಳಿದ್ದರೂ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಿರತನಾಗಲಿದ್ದೇನೆ. ರಾಜ್ಯದ ಜನತೆ ನೀಡಿರುವ ತೀರ್ಪಿಗೆ ತಲೆ ಬಾಗುತ್ತೇವೆ. ಜನಪರ ಕಾಳಜಿಯನ್ನು ಇಟ್ಟುಕೊಂಡು ಪ್ರಬಲ ಮತ್ತು ಜವಾಬ್ದಾರಿಯುತವಾದ ವಿರೋಧ ಪಕ್ಷವಾಗಿ ಕೆಲಸ ಮಾಡಲಿದ್ದೇವೆ. ಚುನಾವಣೆ ವೇಳೆ ಹಲವು ಆಶ್ವಾಸನೆಗಳನ್ನು ನೀಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಆ ಆಶ್ವಾಸನೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಲಿದ್ದೇವೆ. ರಾಜ್ಯದ ಜನತೆಗೆ ಅನ್ಯಾಯವಾದಾಗ ಅವರ ಪರ ನಿಂತು ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.
ನಮ್ಮ ಪಕ್ಷಕ್ಕೆ ತಾತ್ಕಾಲಿಕವಾಗಿ ಹಿನ್ನಡೆಯಾಗಿರುವುದು ಸತ್ಯ. ಆದರೆ, ನಮ್ಮ ತತ್ತ್ವ ಸಿದ್ಧಾಂತಗಳಿಗೆ ಯಾವುದೇ ಚ್ಯುತಿ ಬಂದಿಲ್ಲ. ನಾವು ಸರಿಯಾದ ರೀತಿಯಲ್ಲಿ ರೂಪುರೇಶೆಗಳನ್ನು ಸಿದ್ಧಪಡಿಸಿಕೊಂಡು ಜನತೆ ಮುಂದೆ ಹೋದರೆ ನಮ್ಮನ್ನು ಆಶೀರ್ವದಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಶ್ವನಾಥ್ ತಿಳಿಸಿದರು.