ಜನತೆ ಆಶಯಕ್ಕೆ ಸ್ಪಂದನೆ ವೈಫಲ್ಯ ಕ್ಷಮೆ ಕೋರಿದ ಮುನಿಶಾಮಣ್ಣ

ವಿಜಯಪುರ.ಏ೬:ಕಳೆದ ೨೦೧೩ ರ ಪುರಸಭಾ ಚುನಾವಣೆಯಲ್ಲಿ ಪಟ್ಟಣದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಅಭೂತ ಪೂರ್ವ ಯಶಸ್ಸನ್ನು ನೀಡಿಯೂ ಜನತೆಯ ಆಶೋತ್ತರಗಳಿಗೆ ಸ್ಪಂದಿಸಲಾಗದ ಕಾರಣ ಪಟ್ಟಣದ ಜನತೆಯ ಕ್ಷಮೆ ಕೋರುವುದಾಗಿ ಬೆಂ.ಗ್ರಾ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಶಾಮಣ್ಣ ತಿಳಿಸಿದರು.
ಅವರು ಇಲ್ಲಿನ ಸುಬ್ಬಮ್ಮ ಚನ್ನಪ್ಪ ಸಮುದಾಯ ಭವನದಲ್ಲಿ ಸೋಮವಾರದಂದು ಏ.೨೭ ರಂದು ನಡೆಯುವ ಪುರಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಿದ್ದರು.
ಪಕ್ಷದ ವತಿಯಿಂದ ಟಿಕೆಟ್ ತೆಗೆದುಕೊಂಡು, ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳು ಪಕ್ಷಕ್ಕೆ ನಿಷ್ಟರಾಗಿರಬೇಕಲ್ಲದೇ, ಪಕ್ಷದ ವರಿಷ್ಟರ ಮಾತುಗಳಿಗೂ ಬೆಲೆ ನೀಡದೇ, ನ್ಯಾಯಾಲಯಗಳ ಮೊರೆ ಹೋಗಿ, ಪ್ರಜಾಪ್ರಭುತ್ವದ ಅಣಕು ಮಾಡುವುದು ಸರಿಯಲ್ಲವೆಂದು, ತಿಳಿಸಿದರು.
ಬೇಸರ;-ಚುನಾವಣೆಗಳಲ್ಲಿ ಟಿಕೆಟ್ ಪಡೆದು, ಗೆಲ್ಲುವವರೆಗೆ ಜಿಲ್ಲಾಧ್ಯಕ್ಷರು, ರಾಜ್ಯಾಧ್ಯಕ್ಷರುಗಳನ್ನು ಓಲೈಸುತ್ತಾರೆ. ಗೆದ್ದ ನಂತರ ಹತ್ತು-ಹಲವೆಡೆ ಪಕ್ಷದ ಅಧ್ಯಕ್ಷರು ಹಾಗೂ ಮುಖಂಡರುಗಳು ಗಮನಕ್ಕೆ ಬಾರದಂತೆ ಇತರೆ ಪಕ್ಷಗಳೊಡನೆ ಹೊಂದಾಣಿಕೆ ಮಾಡಿಕೊಂಡು, ಪಂಚಾಯ್ತಿಗಳ ಅಧ್ಯಕ್ಷ/ಉಪಾಧ್ಯಕ್ಷ ಸ್ಥಾನಗಳನ್ನು ಬಿಟ್ಟುಕೊಡುವುದರ ಬಗ್ಗೆಯೂ ಬೇಸರ ವ್ಯಕ್ತ ಪಡಿಸಿದರು.
ಆದರೆ ಇದೀಗ ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ರವರುಗಳು ಜೋಡೆತ್ತುಗಳಂತೆ ಪಕ್ಷದ ಅಭಿವೃದ್ದಿಗೆ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತವೆಂದು, ತಿಳಿಸಿದರು.
ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಮಾತನಾಡಿ, ಕಳೆದ ಬಾರಿ ೨೩ ಸ್ಥಾನಕ್ಕೆ ೧೮ ಸ್ಥಾನಗಳನ್ನು ಪಡೆದು, ಬಹುಮತದಿಂದ ಗೆದ್ದರೂ ಅಧಿಕಾರ ನಡೆಸಲಾಗದಿದ್ದುದಂತಹ ದುಸ್ಥಿತಿಗೆ ಬಂದಿರುವ ಬಗ್ಗೆ ಎಲ್ಲರೂ ಜವಾಬ್ದಾರಿ ಹೊರಬೇಕಾಗಿದ್ದು, ವಿಜಯಪುರ ಟೌನ್ ಕಾಂಗ್ರೆಸ್‌ನ ಭದ್ರ ಕೋಟೆಯಾಗಿದ್ದು, ಒಗ್ಗಟ್ಟಾಗಿ ಕಾರ್ಯನಿರ್ವಹಿಸಿ, ಮುಂಬರುವ ಎಲ್ಲಾ ಚುನಾವಣೆಯಲ್ಲಿ ಜಯಭೇರಿ ಬಾರಿಸಬೇಕೆಂದು, ತಿಳಿಸಿದರು.
ಮಾಜಿ ಶಾಸಕ ಮುನಿನರಸಿಂಹಯ್ಯ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರದ ಅವಧಿಯಲ್ಲಿದ್ದ ಸಂದರ್ಭದಲ್ಲಿ ಅತ್ಯುತ್ತಮ ಪುರಸಭೆಯೆಂದು ಪ್ರಶಸ್ತಿ ಗಳಿಸಿದುದಲ್ಲದೇ, ಅಲ್ಪಸಂಖ್ಯಾತರ ಸ್ಮಶಾನಕ್ಕೆ ೬ ಎಕರೆ ಜಾಗ ನೀಡಿದ್ದು, ಕಿರಿದಾಗಿದ್ದ ದೇವನಹಳ್ಳಿ ರಸ್ತೆಯನ್ನು ಅಗಲೀಕರಣಗೊಳಿಸಿದ್ದು, ನಿವೇಶನವಿಲ್ಲದಿರುವವರಿಗೆ ಉಚಿತ ನಿವೇಶನಗಳನ್ನು ನೀಡಿದ್ದು, ಕೊಳವೆ ಬಾವಿಗಳನ್ನು ಕೊರೆಯುವುದರೊಂದಿಗೆ ಎತ್ತಿನ ಹೊಳೆ, ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ, ಮೂಲಗಳಿಂದ ಕೆರೆಗಳಿಗೆ ನೀರು ಪೂರೈಕೆ ಮುಂತಾದ ಕಾಂಗ್ರೆಸ್ ಪಕ್ಷದ ಅಭಿವೃದ್ದಿ ಕೆಲಸಗಳನ್ನು ತೋರಿಸಿ, ಮತ ಪಡೆಯುವಂತಾಗಬೇಕೆಂದು, ತಿಳಿಸಿದರು.
ಮಾಜಿ ಶಾಸಕ ವೆಂಕಟಸ್ವಾಮಿ ಮಾತನಾಡಿ, ಕೇವಲ ಒಬ್ಬಿಬ್ಬರು ಸದಸ್ಯರುಗಳಿಂದ ಕಳೆದ ಪುರಸಭೆಯ ಅವಧಿಯಲ್ಲಿ ಪಕ್ಷಕ್ಕೆ ಡ್ಯಾಮೇಜಾಗಿದ್ದು, ಇದೀಗ ಎಲ್ಲರೂ ಅದನ್ನು ಅರಿತಿದ್ದು, ಈ ಚುನಾವಣೆಯಲ್ಲಿ ಹೆಚ್ಚಿನ ಬಹುಮತದಿಂದ ಗೆಲುವು ಸಾಧಿಸಿ, ತೋರಿಸಿದಲ್ಲಿ ಮಾತ್ರ ಮುಂದಿನ ಜಿಲ್ಲಾ ಪಂಚಾಯತ್ ಮತ್ತಿತರ ಚುನಾವಣೆಗಳಲ್ಲಿ ಸಾಧನೆ ಮಾಡಲು ಸಾಧ್ಯವೆಂದು ತಿಳಿಸಿದರು.
ಕೆ.ಪಿ.ಸಿ.ಸಿ ಕಾರ್ಯದರ್ಶಿ ವಿ.ಮಂಜುನಾಥ್, ಮಾತನಾಡಿ, ಪುರಸಭಾ ಚುನಾವಣಾ ಕಾಂಗ್ರೆಸ್ ಟಿಕೆಟ್‌ಗಾಗಿ ಹೆಚ್ಚಿನ ಪೈಪೋಟಿ ಇದ್ದರೂ ಸಹ ಎಲ್ಲಾ ಕಾರ್ಯಕರ್ತರು ನಿಸ್ಪೃಹ ಭಾವದಿಂದ ಟಿಕೆಟ್ ನೀಡುವವರ ಗೆಲುವಿಗಾಗಿ ಹೋರಾಟ ನಡೆಸುವುದರೊಂದಿಗೆ ಹೆಚ್ಚಿನ ಬಹುಮತ ಪಡೆದು, ಮತದಾರರ ಆಶಯಗಳನ್ನು ಪೂರೈಸುವಂತಹ ಕೆಲಸ ಮಾಡಬೇಕೆಂದು ತಿಳಿಸಿದರು.
ಕೆ.ಪಿ.ಸಿ.ಸಿ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಈ ಭಾಗದಲ್ಲಿ ಶಾಸಕರು ಹಾಗೂ ಸಂಸದರು ನಮ್ಮರಿಲ್ಲದ ಕಾರಣ ಪುರಸಭೆಯಲ್ಲಿ ಅಧಿಕಾರ ಪಡೆಯುವ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವಂತಹ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಜೆ.ಡಿ.ಎಸ್, ಬಿ.ಜೆ.ಪಿಯ ಬಿ.ಟೀಮ್;-ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಚೇತನ್ ಗೌಡ ಮಾತನಾಡಿ, ಈಗಾಗಲೇ ದೇವೇಗೌಡ ಹಾಗೂ ಕುಮಾರಸ್ವಾಮಿರವರು ರಾಜ್ಯದ ಆಗು-ಹೋಗುಗಳ ಬಗ್ಗೆ ತುಟಿಪಿಟಕ್ಕೆನ್ನದೇ ಜೆ.ಡಿ.ಎಸ್, ಬಿ.ಜೆ.ಪಿ ಯ ಬಿ.ಟೀಮ್ ಎನ್ನುವುದನ್ನು ಸಾಬೀತು ಪಡಿಸಿದ್ದು, ಯಾರೇ ಆದರೂ ಜೆ.ಡಿ.ಎಸ್ ಗೆ ಮತ ನೀಡಿದಲ್ಲಿ ಬಿ.ಜೆ.ಪಿ ಗೆ ಮತ ನೀಡಿದಂತೆ ಆಗುತ್ತದೆ ಎಂದು ತಿಳಿಸಿದರು.
ಕೆ.ಪಿ.ಸಿ.ಸಿ.ಸದಸ್ಯರಾದ ಚಿನ್ನಪ್ಪ, ಮಾಜಿ ಜಿಲ್ಲಾಪಂಚಾಯತ್ ಅಧ್ಯಕ್ಷ ಬಿ.ರಾಜಣ್ಣ, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ, ಮಾಜಿ ಅಧ್ಯಕ್ಷ ಜಗನ್ನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಾರ್ಯದರ್ಶಿ ನರಸಿಂಹನಾಯಕ್, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ, ಪುರಸಭಾ ಮಾಜಿ ಅಧ್ಯಕ್ಷ ಎಂ.ಸತೀಶ್ ಕುಮಾರ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಬಾರಕ್, ಮಾಜಿ ಅಧ್ಯಕ್ಷ ಖಾದರ್ ಪಾಷ, ಟೌನ್ ಅಧ್ಯಕ್ಷ ಮಹಬೂಬ್ ಪಾಷ, ಟೌನ್ ಕಾಂಗ್ರೆಸ್ ಅಧ್ಯಕ್ಷ ವಿ.ಎಂ.ನಾಗರಾಜ್, ವೀರಣ್ಣ, ಮತ್ತಿತರರು ಉಪಸ್ಥಿತರಿದ್ದರು.