ಜನತೆಯ ಸಹಕಾರ, ಅಧಿಕಾರಿಗಳ ಕರ್ತವ್ಯ ನಿಷ್ಠೆಯಿಂದ ಕೊರೋನಾ ನಿಯಂತ್ರಣ ಸಾಧ್ಯ

ಕೂಡ್ಲಿಗಿ. ಮೇ. 18:- ಕೊರೋನಾ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಧಿಕಾರಿಗಳು, ವೈಧ್ಯಕೀಯ ಸಿಬ್ಬಂಧಿ ಜನರೊಂದೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು, ಅದೇ ರೀತಿ ಜನತೆ ಸಹ ಅಧಿಕಾರಿಗಳ, ವೈಧ್ಯರ ಕಾರ್ಯ ಒತ್ತಡ ಅರಿತು ಸಂಯಮದಿಂದ ವರ್ತಿಸಬೇಕು ಈ ಮೂಲಕ ಮಾನವೀಯತೆಯನ್ನು ತೋರಬೇಕೆಂದು ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಜನತೆ ಮತ್ತು ಅಧಿಕಾರಿವರ್ಗಕ್ಕೆ ಕಿವಿ ಮಾತು ಹೇಳಿದರು.
ಅವರು ಸೋಮವಾರ ಪಟ್ಟಣದ ಹೊರವಲಯದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ನಡೆದ ಕೂಡ್ಲಿಗಿ ತಾಲೂಕು ಮಟ್ಟದ ಕೋವಿಡ್ ೧೯ ನಿಯಂತ್ರಣ ಹಾಗೂ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯ ವೈಧ್ಯಕೀಯ ಸಿಬ್ಬಂಧಿಗಳು ಜನತೆ ಜೊತೆ ಸರಿಯಾಗಿ ವರ್ತಿಸುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದ್ದು ತಾಲೂಕು ವೈಧ್ಯಾಧಿಕಾರಿಗಳು ಹಾಗೂ ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಜನತೆಯ ಕಷ್ಠಗಳಿಗೆ ಸ್ಪಂಧಿಸಬೇಕೆಂದು ತಿಳಿಸಿದರು. ಅಧಿಕಾರಿಗಳು ಕೋವಿಡ್ ಸಂದರ್ಭದಲ್ಲಿ ಕ್ರಿಯಾತ್ಮಕವಾಗಿ ಕೆಲಸ ಮಾಡಿದರೆ ನಮಗೂ ಸಹ ಕೆಲಸ ಮಾಡಲು ಉತ್ಸುಕತೆ ಬರುತ್ತದೆ ಎಂದು ತಿಳಿಸಿದರು. ಗ್ರಾಮೀಣ ಭಾಗಗಳಲ್ಲಿ ಈ ಬಾರಿ ಕೊರೋನಾ ಸದ್ದಿಲ್ಲದೇ ಸೇರಿಕೊಂಡಿದ್ದು ಗ್ರಾಮ ಪಂಚಾಯ್ತಿ ಮಟ್ಟದ ನೋಡಲ್ ಅಧಿಕಾರಿಗಳು ಸ್ಪಂಧಿಸುವ ಮೂಲಕ ಕೊರೋನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯಮಾಡಬೇಕಿದೆ ಎಂದು ಶಾಸಕರು ಕಿವಿಮಾತು ಹೇಳಿದರು.
ಕೂಡ್ಲಿಗಿ ತಹಶೀಲ್ದಾರ್ ಮಹಾಬಲೇಶ್ವರ ಮಾತನಾಡಿ ಕೂಡ್ಲಿಗಿ ಪಟ್ಟಣದಲ್ಲಿ ಈಗಾಗಲೇ ಕೂಡ್ಲಿಗಿ ಗೆಳೆಯರ ಬಳಗ, ಗೋಲ್ಡನ್ ಜೆಸಿಐ ಕೂಡ್ಲಿಗಿ ಇವರ ಸಹಕಾರದ ಮೂಲಕ ಪಟ್ಟಣದಲ್ಲಿ ಮನೆ ಮನೆ ಸರ್ವೇ ಕಾರ್ಯ ಮಾಡಿದ್ದು ಶೇಕಡ 8೦ರಷ್ಟು ಪೂರ್ಣಗೊಂಡಿದೆ, 5೦ ಮನೆಗಳಿಗೆ ಒಂದು ತಂಡವನ್ನು ಮಾಡಿ ಸರ್ವೇ ಕಾರ್ಯ ಮಾಡಲಾಗುತ್ತಿದೆ ಈಗಾಗಿ ಪಟ್ಟಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ತರಲು ಶ್ರಮಿಸಲಾಗಿದೆ ಎಂದರು. ಗ್ರಾಮೀಣ ಭಾಗಗಳಲ್ಲಿಯೂ ಸಹ ಗ್ರಾಮ ಪಂಚಾಯ್ತಿ ಮಟ್ಟದ ನೋಡಲ್ ಅಧಿಕಾರಿಗಳ ತಂಡದ ಮೂಲಕ ಮನೆ ಮನೆ ಸರ್ವೇ ಕಾರ್ಯ ಮಾಡಲಾಗುತ್ತಿದ್ದು ಹಂತ ಹಂತವಾಗಿ ಕೋವಿಡ್ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುವುದೆಂದು ಸಭೆಯಲ್ಲಿ ತಿಳಿಸಿದರು.
ಕೂಡ್ಲಿಗಿ ತಾಲೂಕು ವೈಧ್ಯಾಧಿಕಾರಿ ಡಾ.ಷಣ್ಮುಖನಾಯ್ಕ ಮಾತನಾಡಿ 6೦ ಸಿಲೆಂಡರ್ ಕೂಡ್ಲಿಗಿ ತಾಲೂಕಿಗೆ ನೀಡಬೇಕಿದ್ದು ಇಲ್ಲಿಯವರೆಗೆ 2೦ ಸಿಲೆಂಡರ್ ಅಷ್ಟೇ ಪೂರೈಸಲಾಗಿದ್ದು ಇನ್ನೂ 4೦ ಆಕ್ಸಿಜನ್ ಸಿಲಿಂಡರ್ ಕೊರತೆ ಇದೆ ಅದನ್ನು ಪೂರೈಕೆಯಾಗಬೇಕಿದೆ ಎಂದು ಶಾಸಕರಿಗೆ ವರದಿ ನೀಡಿದರು. 3೦೦ ಆಕ್ಸಿಜನ್ ಮಾಸ್ಕ್ ಗಳು ಕೂಡ್ಲಿಗಿ ತಾಲೂಕು ಆರೋಗ್ಯ ಇಲಾಖೆಗೆ ಅಗತ್ಯತೆ ಇದೆ, 2 ಜಂಬೋ ಸಿಲೆಂಡರ್ ಸಹ ಕೂಡ್ಲಿಗಿ ತಾಲೂಕಿನ ಆಸ್ಪತ್ರೆಗಳಿಗೆ ಅಗತ್ಯತೆ ಇದ್ದು ಈ ಬಗ್ಗೆ ಒದಗಿಸಿಕೊಡುವಂತೆ ಶಾಸಕರಿಗೆ ತಿಳಿಸಿದರು.
ಹೂಡೇಂ ಆಸ್ಪತ್ರೆಯಲ್ಲಿ ವೈಧ್ಯರ ಕೊರತೆಃ ತಾಲೂಕಿನ ಗಡಿಗ್ರಾಮ ಹೂಡೇಂ ಗ್ರಾಮದಲ್ಲಿ ವೈಧ್ಯರು ಬರುತ್ತಿಲ್ಲ , ಸಿಬ್ಬಂಧಿ ಕೊರತೆ ಇದೆ ಈಗಾಗಿ ಹೊರ ರೋಗಿಗಳಿಗೆ, ಕೊರೋನಾ ಸೋಂಕಿತರಿಗೆ, ಚಿಕಿತ್ಸೆಗೆ ದೂರದ ಊರುಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಸಭೆಯಲ್ಲಿ ಹೂಡೇಂ ತಾ.ಪಂ.ಸದಸ್ಯ ಜಿ.ಪಾಪನಾಯಕ ಶಾಸಕರಿಗೆ ತಿಳಿಸಿದರು. ಇದಕ್ಕೆ ಕೂಡ್ಲಿಗಿ ತಾಲೂಕು ವೈಧ್ಯಾಧಿಕಾರಿ ಡಾ.ಷಣ್ಮುಖನಾಯ್ಕ ಪ್ರತಿಕ್ರಿಯಿಸಿ ಅಲ್ಲಿಯ ವೈಧ್ಯರಿಗೆ ಕೊರೋನಾ ಬಂದಿದೆ ಈಗಾಗಿ ಸಮಸ್ಯೆ ಆಗಿದೆ ಬೇರೆ ವೈಧ್ಯರನ್ನು ನೇಮಕ ಮಾಡುವ ಮೂಲಕ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು. ತಾಲೂಕಿನ ಶ್ರೀಕಂಠಾಪುರದಲ್ಲಿ ಮೆಡಿಸಿನ್ ಸರಿಯಾಗಿ ಪೂರೈಕೆಯಾಗುತ್ತಿಲ್ಲ ಈಗಾಗಿ ಜನತೆ ಆತಂಕದಲ್ಲಿದ್ದಾರೆ ಎಂದು ಬಿಜೆಪಿ ಮುಖಂಡ ಸೂರ್ಯಪಾಪಣ್ಣ ಸಭೆಯಲ್ಲಿ ಪ್ರಸ್ತಾಪಿಸಿದರು. ಈ ದಿನ ಸಂಜೆಯಿಂದಲೇ ಮೆಡಿಕಲ್ ಕಿಟ್ ಗಳನ್ನು ಗ್ರಾಮೀಣ ಭಾಗಗಳಲ್ಲಿ ಸೋಂಕಿತರಿಗೆ, ಸೋಂಕಿನ ಲಕ್ಷಣ ಇರುವವರಿಗೆ ವಿತರಿಸಲಾಗುವುದು ಎಂದು ತಾಲೂಕು ವೈಧ್ಯಾಧಿಕಾರಿಗಳು ಉತ್ತರಿಸಿದರು.
ಕೂಡ್ಲಿಗಿಯಲ್ಲಿ ವಿದ್ಯುತ್ ಸಮಸ್ಯೆಃ ಕೂಡ್ಲಿಗಿ ಪಟ್ಟಣದಲ್ಲಿ ವಿದ್ಯುತ್ ಸಮಸ್ಯೆ ಇದ್ದು ರಾತ್ರಿಯಾದರೆ ಇತ್ತೀಚೆಗೆ ೪ತಾಸಿಗೂ ಹೆಚ್ಚು ಕಾಲ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ ಪಟ್ಟಣದಲ್ಲಿಯೇ ಕೋವಿಡ್ ಸಂದರ್ಭದಲ್ಲಿ ಈರೀತಿಯಾದರೆ ಹೇಗೆ ಎಂದು ಬಿಜೆಪಿ ಯುವ ಮುಖಂಡ ಪಿ.ಮಂಜುನಾಥ ನಾಯಕ ಆರೋಪಿಸಿದರು. ಇದರಿಂದ ಗರಂ ಆದ ಶಾಸಕರು ಕೂಡ್ಲಿಗಿ ಪಟ್ಟಣದಲ್ಲಿ ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳಬೇಕೆಂದು ಕೂಡ್ಲಿಗಿ ಜೆಸ್ಕಾಂ ಎಇಇ ರಾಜೇಶ್ ಅವರಿಗೆ ಆದೇಶ ಮಾಡಿದರು.
ಕೊರೋನಾ ನಿಯಂತ್ರಣಕ್ಕೆ ಕೂಡ್ಲಿಗಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸಚಿವ ಆನಂದಸಿಂಗ್ ಗೆ ಫೋನ್ ಕರೆಯಲ್ಲಿ ಮನವಿ : ಕೋವಿಡ್ ನಿಯಂತ್ರಣ ಸಭೆಯಲ್ಲಿ ಫೋನ್ ಕರೆ ಮಾಡಿದ ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣ ಸಚಿವ ಆನಂದ ಸಿಂಗ್ ಜೊತೆ ಮಾತನಾಡಿ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಮತ್ತು ಅನಸ್ತೇಷಿಯಾ ವೈದ್ಯರ ಕೊರತೆ ಇದೆ ಒಬ್ಬರನ್ನು ನೇಮಿಸಬೇಕೆಂದು ಕೇಳಿದಾಗ ಇದಕ್ಕೆ ಸಂಬಂಧಿಸಿದಂತೆ ಜಾಹಿರಾತು ನೀಡಿ ಅರ್ಜಿ ಆಹ್ವಾನಿಸಲಾಗಿದ್ದು ಯಾರು ಸಹ ಬಂದಿಲ್ಲ ಎಂದು ಸಚಿವರು ಹೇಳಿದ್ದಕ್ಕೆ ಹೊಸಪೇಟೆಯಲ್ಲಿ ಇಂಜಕ್ಷಲೇಟರ್ಸ್ ಇದ್ದರೆ ಅವರನ್ನಾದರೂ ವಾರಕ್ಕೆರಡು ಬಾರಿ ಕೂಡ್ಲಿಗಿ ಬಂದೊಗುವಂತೆ ಅನುಕೂಲ ಮಾಡಿಕೊಡಿ ಎಂದು ಶಾಸಕರ ಪ್ರಶ್ನೆಗೆ ಅನುಕೂಲ ಮಾಡುವ ಭರವಸೆಯನ್ನು ಸಚಿವ ಆನಂದಸಿಂಗ್ ತಿಳಿಸಿದರು ಮತ್ತು ಪಾಸಿಟಿವ್ ಕೇಸಸ್ ಹೆಚ್ಚಿಗೆ ಬಂದಲ್ಲಿ ತೋರಣಗಲ್ಲು 1000ಬೆಡ್ ನ ಆಸ್ಪತ್ರೆಗೆ ಕಳಿಹಿಸಬಹುದೇ ಎಂದಿದ್ದಕ್ಕೆ ಅವಶ್ಯಕವಾಗಿ ಕಳುಹಿಸಿ ಇನ್ನೆರಡು ದಿನದಲ್ಲಿ ತೋರಣಗಲ್ಲು 1000ಬೆಡ್ ನ ಕೋವಿಡ್ ವಾರ್ಡ್ ಪ್ರಾರಂಭವಾಗಲಿದೆ ಎಂದು ಸಚಿವರು ದೂರವಾಣಿಯಲ್ಲಿ ಕೂಡ್ಲಿಗಿ ಶಾಸಕರೊಂದಿಗೆ ಮಾತನಾಡಿದರು ಕೂಡ್ಲಿಗಿ ಕ್ಷೇತ್ರಕ್ಕೆ ಎಲ್ಲಾ ರೀತಿಯಲ್ಲಿ ಹೆಚ್ಚಿನ ಆದ್ಯತೆ ನೀಡುವ ಭರವಸೆ ನೀಡಿದರು.
ಸಭೆಯಲ್ಲಿ ಕೂಡ್ಲಿಗಿ ತಾ.ಪಂ.ಇಓ ಬಸಣ್ಣ, ಪ್ರೋಬೆಷನರಿ ಸಹಾಯಕ ಆಯುಕ್ತರಾದ ವಿವೇಕ್, ಕೂಡ್ಲಿಗಿ ಡಿ.ವೈ.ಎಸ್.ಪಿ.ಹರೀಶ್ ರೆಡ್ಡಿ, ಕೂಡ್ಲಿಗಿ ತಹಶೀಲ್ದಾರ್ ಮಹಾಬಲೇಶ್ವರ, ಕೊಟ್ಟೂರು ತಹಶೀಲ್ದಾರ್ ಜಿ.ಅನಿಲ್ ಕುಮಾರ್, ಕೂಡ್ಲಿಗಿ ತಾಲೂಕು ವೈಧ್ಯಾಧಿಕಾರಿ ಡಾ.ಷಣ್ಮುಖನಾಯ್ಕ, ಕೂಡ್ಲಿಗಿ ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿ ಡಾ.ವಿನಯ್, ಜಿ.ಪಂ.ಸದಸ್ಯ ಹೆಚ್.ರೇವಣ್ಣ, ತಾ.ಪಂ.ಸದಸ್ಯ ಜಿ.ಪಾಪನಾಯಕ, ಬಿಜೆಪಿ ಮುಖಂಡರಾದ ಗುಂಡುಮಣಗು ತಿಪ್ಪೇಸ್ವಾಮಿ, ಕೆ.ಎಚ್.ವೀರನಗೌಡ್ರು, ಕೆ.ಎಂ.ತಿಪ್ಪೇಸ್ವಾಮಿ, ಬಿ.ಭೀಮೇಶ್, ಸೂರ್ಯಪಾಪಣ್ಣ , ಎಸ್.ದುರುಗೇಶ್, ಕೆ.ಎಚ್.ಸುನೀಲ್ ಗೌಡ, ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಸದಸ್ಯರಾದ ಸಚಿನ್ ಕುಮಾರ, ಚಂದ್ರು,ಹಾಗೂ ಇತರರು, ತಾಲೂಕು ಮಟ್ಟದ ಅಧಿಕಾರಿಗಳು,ಜನಪ್ರತಿನಿಧಿಗಳು ಮುಂತಾದವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕಿನಲ್ಲಿ ವಿವಿಧ ಭಾಗಗಳಿಂದ ಸಿಡಿಲಿನಿಂದ ಸಾವನ್ನಪ್ಪಿದ ಕುಟುಂಬಗಳಿಗೆ ಪ್ರಕೃತಿ ವಿಕೋಪದಡಿಯಲ್ಲಿ ತಲಾ 5 ಲಕ್ಷ ಪರಿಹಾರದ ಆರ್ ಟಿ ಜಿ ಎಸ್ ಮಾಡಿದ ಆದೇಶ ಪ್ರತಿಯನ್ನು ವಿತರಿಸಲಾಯಿತು.