ಜನತೆಯ ಆಶೋತ್ತರಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಶ್ರಮಿಸಲಿದೆ

ಮಂಡ್ಯ: ಮೇ.16:- 24 ವರ್ಷಗಳ ನಂತರ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆತಿದೆ. 2018ರ ಆಘಾತಕಾರಿ ಸೋಲಿನ ನಂತರ ಪಕ್ಷಕ್ಕೆ ಜಯ ದೊರತಿದ್ದು, ಜನತೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ, ಜನತೆಯ ಆಶೀರ್ವಾದ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾವು ಸೋತಾಗ ಡೆಡ್ ಹಾರ್ಸ್ ಎಂದು ಗೇಲಿ ಮಾಡಿದವರ ರೀತಿ ನಾವು ಮಾತನಾಡಲು ಹೋಗುವುದಿಲ್ಲ.ಕಾರ್ಯಕರ್ತರು ಸಹ ವೈಯಕ್ತಿಕ ಅವಹೇಳನ ಮಾಡುವ ರೀತಿ ವರ್ತಿಸಬಾರದು. ಅಭಿವೃದ್ಧಿ ಕಾರ್ಯ ಮಾಡುವುದರ ಮೂಲಕ ಜನರ ವಿಶ್ವಾಸ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುವುದು.ಈಗ ಸೋತಿರುವ ನಾಯಕರು ರಚನಾತ್ಮಕ ಸಹಕಾರ ನೀಡಲಿ ಎಂದು ಆಶಿಸಿದರು.
ಈ ಚುನಾವಣೆಗಳು ಅಭಿವೃದ್ಧಿ ಕಾರ್ಯಕ್ರಮಗಳ ಆಧಾರದ ಮೇಲೆ ಮತಯಾಚನೆ ಮಾಡುವುದರ ಬದಲಾಗಿ ನಿಂದನೆ ಮತ್ತು ಸೇಡಿನ ಪ್ರವೃತ್ತಿಯ ರಾಜಕಾರಣಿಗಳಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರೊಡಗೂಡಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ವಾಗ್ದಾನ ನೀಡಿದರು.
ಮನ್ಮುಲ್‍ನಲ್ಲಿ ನಡೆದಿರುವ ಹಾಲು ನೀರಿನ ಹಗರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಿ ಪುನಶ್ಚೇತನ ನೀಡಲಾಗುವುದು. ಮೈಷುಗರ್ ಗೆ ಕಾಯಕಲ್ಪ ನೀಡಲಾಗುವುದು.ರೈತರು ನೂರಾರು ದಿನ ಚಳುವಳಿ ನಡೆಸಿದರೂ ಸರ್ಕಾರ ಅವರಿಗೆ ಸ್ಪಂದಿಸಲಿಲ್ಲ.ನಾವು ಜನತೆ ಬೀದಿಗಿಳಿಯದಂತೆ ಆಡಳಿತ ನಡೆಸುತ್ತೇವೆ.ಜಿಲ್ಲೆಯ ಜನರ ಆತ್ಮಗೌರವ ಎತ್ತಿಹಿಡಿಯುವ ಕೆಲಸವನ್ನು ಮಾಡುತ್ತೇವೆ.ಪತ್ರಕರ್ತರ ಸಂಕಷ್ಟಗಳಿಗೂ ಸ್ಪಂದಿಸುತ್ತೇವೆ. ಜಿಲ್ಲೆಯ ಜನರ ಋಣ ನಮ್ಮ ಮೇಲಿದೆ ಎಂದರು.
ಬಿಜೆಪಿ-ಜೆಡಿಎಸ್ ಪಕ್ಷಗಳು ಕೊಟ್ಟ ಭರವಸೆಗಳನ್ನು ಈಡೇರಿಸಲಿಲ್ಲ. ಆದರೆ ಕಾಂಗ್ರೆಸ್ ಕೊಟ್ಟಿರುವ ಭರವಸೆಗಳ ಮೇಲೆ ಜನತೆ ನಂಬಿಕೆ ಇಟ್ಟಿದ್ದಾರೆ. ಚಲುವರಾಯಸ್ವಾಮಿ ಮತ್ತು ಪಿ.ಎಂ.ನರೇಂದ್ರಸ್ವಾಮಿ ಅವರ ಪ್ರಬಲ ನಾಯಕತ್ವದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ವಾದ್ರಾ ಮುಂತಾದವರು ಜಿಲ್ಲೆಗೆ ಬಂದು ಪ್ರಚಾರ ಮಾಡಿರುವುದು ನಮಗೆ ಬಲ ತಂದುಕೊಟ್ಟಿದೆ ಎಂದರು.
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಕೆಲವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಮಾತುಗಳು ಕೇಳಿಬರುತ್ತಿವೆ.ಅದು ನಿಜವಾಗಿದ್ದರೆ ಅಭ್ಯರ್ಥಿಯ ಅಭಿಪ್ರಾಯ ಪಡೆದು ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಚುನಾವಣಾ ಫಲಿತಾಂಶದ ನಂತರ ಚಿನಕುರುಳಿ ಗ್ರಾಮ ಸೇರಿದಂತೆ ಕೆಲವು ಕಡೆ ಪಟ್ಟಭದ್ರರು ಅಶಾಂತಿ ಉಂಟುಮಾಡಲು ಪ್ರಯತ್ನಿಸಿರುವುದನ್ನು ಖಂಡಿಸಿದರು.ಇಂತಹ ಕುಕೃತ್ಯಗಳನ್ನು ಕೈಬಿಡಬೇಕು ಎಂದು ಎಚ್ಚರಿಸಿದರು.ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವಂತೆ ಪೋಲಿಸ್ ಇಲಾಖೆಗೆ ಮನವಿ ಸಲ್ಲಿಸಲಾಗುವುದು ಎಂದರು.
ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣರಾದ ಮತದಾರರಿಗೆ, ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಧನ್ಯವಾದಗಳನ್ನು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಯುವ ಘಟಕದ ಅಧ್ಯಕ್ಷ ವಿಜಯಕುಮಾರ್, ನಗರಸಭಾ ಸದಸ್ಯರಾದ ಶ್ರೀಧರ್, ನಯೀಂ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಜಾಹಿದ್, ಚಿನಕುರಳಿ ರಮೇಶ್ ಹಾಜರಿದ್ದರು.