ಜನತೆಗೆ ಸಮಸ್ಯೆಯಾದರೆ ಸಹಿಸುವುದಿಲ್ಲ: ಸಚಿವ ಪ್ರಭು.ಬಿ ಚವ್ಹಾಣ ಎಚ್ಚರಿಕೆ

ಬೀದರ:ಸೆ.3:ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಅವರು ಸೆ.2ರಂದು ಕಮಲನಗರ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಗ್ರಾಮ ಸಂಚಾರ ನಡೆಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.

ಸಚಿವರು ಹೋದ ಕಡೆಗಳಲ್ಲಿ ಗ್ರಾಮಸ್ಥರು ಒಬ್ಬೊಬ್ಬರಾಗಿ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು. ಅಲ್ಲದೇ ಗ್ರಾಮಗಳಲ್ಲಿ ಈವರೆಗೆ ನಡೆದ ಅಭಿವೃದ್ಧಿ ಕೆಲಸಗಳನ್ನು ಮೆಲುಕು ಹಾಕಿದರಲ್ಲದೆ ಮುಂದೆ ಆಗಬೇಕಾದ ಕೆಲಸಗಳ ಬಗ್ಗೆ ಸಚಿವರಲ್ಲಿ ಬೇಡಿಕೆ ಇಟ್ಟರು. ಈ ವೇಳೆ ಮಾತನಾಡಿದ ಸಚಿವರು, ಜನರಿಗೆ ತುರ್ತು ಅಗತ್ಯವಿರುವ ಕೆಲಸಗಳನ್ನು ಶೀಘ್ರ ಕೈಗೆತ್ತಿಕೊಂಡು ಕೆಲಸ ಆರಂಭಿಸಲಾಗುತ್ತದೆ. ಉಳಿದ ಕೆಲಸಗಳನ್ನು ಮುಂದಿನ ಆರ್ಥಿಕ ವರ್ಷದ ಲ್ಲಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಕೆಲವೆಡೆ ಅಧಿಕಾರಿ ಮತ್ತು ಸಿಬ್ಬಂದಿಗಳ ಕುರಿತ ದೂರುಗಳಿಗೆ ಪ್ರತಿಕ್ರಿಯಿಸಿ, ಜನರಿಗೆ ಸಮಸ್ಯೆಯಾದರೆ ಸಹಿಸುವುದಿಲ್ಲ. ಎಲ್ಲ ಕಛೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾಗಿ ಕೆಲಸ ಮಾಡಬೇಕು. ಕಛೇರಿಗೆ ಬರುವ ಜನರಿಗೆ ಸೂಕ್ತವಾಗಿ ಸ್ಪಂದಿಸಬೇಕು. ಸಣ್ಣ-ಸಣ್ಣ ವಿಷಯಗಳಿಗೆ ವಿನಾಕಾರಣ ಸತಾಯಿಸುವುದು, ಜನರ ಮೊಬೈಲ್ ಕರೆಗೆ ಸ್ಪಂದಿಸದೇ ಇರುವುದು ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಸಚಿವರು ಕಮಲನಗರ ತಾಲ್ಲೂಕಿನ ಚುಂಬುಲೆವಾಡಿ, ಢೋಣಗಾಂವ, ರಂಡ್ಯಾಳ, ಹಕ್ಯಾಳ, ಖತಗಾಂವ, ಮದನೂರ, ಕಮಲನಗರ, ಮುರುಗ(ಕೆ), ಬಾಳೂರ, ಹೊರಂಡಿ ಹಾಗೂ ಚಾಂಡೇಶ್ವರ ಗ್ರಾಮದಲ್ಲಿ ಸಂಚರಿಸಿ ಕುಡಿಯುವ ನೀರು, ಸಿಸಿ ರಸ್ತೆ, ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಔರಾದ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಪಡಿಸಲು ಸುಮಾರು 182 ಕೋಟಿ ಮೊತ್ತದ ಜೆಜೆಎಂ ಹಾಗೂ ಇನ್ನಿತರ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾಮಗಾರಿಗಳು ಗುಣಮಟ್ಟದಿಂದ ಆಗಬೇಕು. ಎಲ್ಲಿಯಾದರೂ ಕಾಮಗಾರಿ ಕಳಪೆಯಾಗಿರುವುದು ಗಮನಕ್ಕೆ ಬಂದಲ್ಲಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕಮಲನಗರ ತಹಸೀಲ್ದಾರರಾದ ರಮೇಶ ಪೆದ್ದೆ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಆಧಿಕಾರಿ ಸೈಯ್ಯದ ಫಜಲ್ ಮಹಮೂದ್, ಲೋಕೋಪಯೋಗಿ ಇಲಾಖೆಯ ಎಇಇ ವೀರಶೆಟ್ಟಿ ರಾಠೋಡ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸುಭಾಷ ದಾಳಗುಂಡೆ, ಮುಖಂಡರಾದ ಸುರೇಶ ಭೋಸ್ಲೆ, ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ರಂಗರಾವ್ ಜಾಧವ, ನರಸಿಂಗ್ ಬುದ್ರೆ, ಖಂಡೋಬಾ ಕಂಗಟೆ, ಶಿವರಾಜ ಅಲ್ಮಾಜೆ, ಗಿರೀಶ ಒಡೆಯರ್, ಬಂಟಿ ರಾಂಪೂರೆ, ಸಂಜು ಒಡೆಯರ್, ದೇವಾನಂದ ಪಾಟೀಲ್, ಶಕುಂತಲಾ ಮುತ್ತಂಗೆ, ಸಂಗಮೇಶ ಬೋರ್ಗೆ, ಪ್ರಕಾಶ ಖಾನಾಪೂರ ಹಾಗೂ ಇತರರು ಉಪಸ್ಥಿತರಿದ್ದರು.