ಜನತಾ ಲಾಕ್‌ಡೌನ್: ಹಳ್ಳಿಗಳತ್ತ ತೆರಳುತ್ತಿರುವ ಜನತೆ

ತುಮಕೂರು, ಏ. ೨೭- ರಾಜ್ಯದಲ್ಲಿ ಕೊರೊನಾ ೨ನೇ ಅಲೆಯ ಸರಪಳಿ ಕಡಿತಗೊಳಿಸಲು ಸರ್ಕಾರ ೧೪ ದಿನಗಳ ಕಾಲ ಜನತಾ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿದ್ದ ಖಾಸಗಿ ಕಂಪೆನಿ ನೌಕರರು, ಕೂಲಿ ಕಾರ್ಮಿಕರು ಕಳೆದ ಬಾರಿಯಂತೆಯೆ ಮರಳಿ ಹಳ್ಳಿಗಳನ್ನು ಸೇರಿಕೊಳ್ಳುವ ಧಾವಂತದಲ್ಲಿ ದ್ವಿಚಕ್ರ ವಾಹನಗಳು, ಬಸ್‌ಗಳಲ್ಲಿ ತೆರಳುತ್ತಿರುವ ದೃಶ್ಯಗಳು ಜಿಲ್ಲೆಯಾದ್ಯಂತ ಕಂಡು ಬರುತ್ತಿವೆ.
ಕೊರೊನಾ ಆರ್ಭಟದಲ್ಲಿ ರಾಜಧಾನಿ ಬೆಂಗಳೂರು ಮೊದಲನೇ ಸ್ಥಾನದಲ್ಲಿದ್ದರೆ ತುಮಕೂರು ೨ನೇ ಸ್ಥಾನದತ್ತ ದಾಪುಗಾಲಿಟ್ಟಿದ್ದು, ಕೊರೊನಾ ಹಾವಳಿ ಹೆಚ್ಚಿದೆ. ಹೀಗಾಗಿ ಇಂದು ರಾತ್ರಿ ೯ ಗಂಟೆಯಿಂದ ೧೪ ದಿನಗಳ ವರೆಗೆ ರಾಜ್ಯ ಸರ್ಕಾರ ಜನತಾ ಲಾಕ್‌ಡೌನ್ ಘೋಷಣೆ ಮಾಡಿರುವುದರಿಂದ ನಗರ, ಪಟ್ಟಣ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿದ್ದ ಜನತೆ, ಕೂಲಿ ಕಾರ್ಮಿಕರು ತಮ್ಮ ತಮ್ಮ ಊರುಗಳ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಈಗ ಒಕ್ಕಲುತನದ ಕೆಲಸವಿಲ್ಲ. ಬೇಸಿಗೆ ಕಾಲವಾಗಿದ್ದು ಕೃಷಿ ಚಟುವಟಿಕೆಯೂ ಇಲ್ಲ. ಸಾಧಾರಣ ಮಳೆ ಬಂದಿದ್ದು, ಮುಂದಿನ ಮಳೆಯ ಸೂಚನೆಯನ್ನು ಕಾಯಲಾಗುತ್ತಿದೆ. ಹೀಗಾಗಿ ಉತ್ತಮ ಮಳೆ ಬಂದು ಕೃಷಿ ಚಟುವಟಿಕೆ ಹೆಚ್ಚಾದರೆ ಬಹಳಷ್ಟು ಮಂದಿ ಯುವಕರು ಕಳೆದ ಬಾರಿಯಂತೆ ಈ ಬಾರಿಯೂ ಹಳ್ಳಿಯಲ್ಲಿಯೆ ಉಳಿಯುವ ಸಾಧ್ಯತೆಗಳು ಹೆಚ್ಚಾಗಿವೆ. ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಸಾವಿನ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವ ಕಾರಣ ಪೋಷಕರಲ್ಲಿಯೂ ಗಾಬರಿ ಉಂಟಾಗಿದ್ದು, ನಗರಕ್ಕೆ ಹೋಗುವುದೇ ಬೇಡ ಎಂದು ಮಕ್ಕಳನ್ನು ಹಳ್ಳಿಗಳಲ್ಲಿಯೇ ಉಳಿಸಿಕೊಳ್ಳುವ ಮಾತುಗಳು ಸಹ ಕೇಳಿ ಬರುತ್ತಿವೆ.
ಕಳೆದ ಬಾರಿ ಈ ಅವಧಿಗಾಗಲೆ ನಗರಗಳಲ್ಲಿರುವ ಯುವ ಜನತೆ ಹಳ್ಳಿ ಸೇರಿಕೊಂಡಿದ್ದರು. ಅಳಿದುಳಿದ ಕೆಲವರು ಕಳ್ಳ ಮಾರ್ಗಗಳಲ್ಲಿ ಬಂದು ಊರು ಸೇರುತ್ತಿದ್ದರು. ದ್ವಿಚಕ್ರ ವಾಹನಗಳ ಮೂಲಕ ಪೊಲೀಸರ ಕಣ್ತಪ್ಪಿಸಿ ಬರುವ ಹಾಗೂ ಮಾರ್ಗಮಧ್ಯೆ ಲಾಠಿ ರುಚಿ ನೋಡಿ ಬಂದಿದ್ದ ಬಹಳಷ್ಟು ಜನರಿದ್ದಾರೆ. ಅವರಿಗೆಲ್ಲ ಕಳೆದ ಬಾರಿಯ ಪರಿಸ್ಥಿತಿ ಚೆನ್ನಾಗಿ ಗೊತ್ತು. ನಗರಗಳಲ್ಲಿ ನಿರ್ಬಂಧಗಳು ಹೆಚ್ಚಾದರೆ ಏನೆಲ್ಲಾ ಸಂಕಷ್ಟಗಳು ಇರಲಿವೆ ಎಂಬ ಚಿತ್ರಣದ ಅರಿವಿದೆ. ಹೀಗಾಗಿ ಕೆಲವು ತಿಂಗಳು ಇಲ್ಲಿರುವುದೇ ವಾಸಿ ಎಂಬ ನಿರ್ಧಾರಕ್ಕೂ ಬಂದಿದ್ದಾರೆ.
ಕಳ್ಳ ದಾರಿಯಲ್ಲಿ ಬಂದು ಹಳ್ಳಿ ಸೇರಿರುವ ನಗರ ಪ್ರದೇಶದವರನ್ನು ತಡೆಯಲು ಹಳ್ಳಿ ಹಳ್ಳಿಗಳಲ್ಲಿ ಬೇಲಿಗಳು ನಿರ್ಮಾಣವಾಗಿದ್ದವು. ಆ ಊರಿನವರು ಮಾತ್ರವಲ್ಲ, ಯಾರೇ ಬಂದರೂ ಪ್ರವೇಶ ನಿರ್ಬಂಧಿಸಿ ರಸ್ತೆಗೆ ಕಲ್ಲು, ಮುಳ್ಳು ಹಾಕಿದ್ದರು. ನಂತರದ ದಿನಗಳಲ್ಲಿ ಇದು ವ್ಯಾಪಕ ಅಸಮಾಧಾನಕ್ಕೂ ಕಾರಣವಾಗಿತ್ತು. ಜಿಲ್ಲಾಡಳಿತ ಈ ಬಗ್ಗೆ ಎಚ್ಚೆತ್ತುಕೊಂಡು ಮುಳ್ಳು ಬೇಲಿಗಳನ್ನು ತೆರವುಗೊಳಿಸಿತ್ತು. ಕ್ರಮೇಣ ಅಲ್ಲಿನ ಜನರೆ ಅದನ್ನು ತೆರವು ಮಾಡಲು ಮುಂದಾದರು. ನಗರ ಪ್ರದೇಶಗಳವರು ಹೊರಗಿನಿಂದ ಸೋಂಕು ತಂದು ಇಲ್ಲಿ ಹರಡುತ್ತಾರೆ ಎಂಬ ಭಯ ಗ್ರಾಮೀಣ ಜನರಲ್ಲಿ ಮನೆ ಮಾಡಿತ್ತು.
ಸೋಮವಾರ ಮಧ್ಯಾಹ್ನದಿಂದಲೇ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ೧೪ ದಿನಗಳ ಕಾಲ ನಮ್ಮ ಊರುಗಳಲ್ಲಿ ಕಾಲ ಕಳೆದು ಬಂದರಾಯಿತು ಎಂದು ಕೂಲಿ ಕಾರ್ಮಿಕರು ತಮ್ಮ ಹಳ್ಳಿಗಳಿಗೆ ತೆರಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.