ಜನತಾ ಬಜಾರ ಸ್ಥಳಾಂತರ-ತಾತ್ಕಾಲಿಕ ಮಾರುಕಟ್ಟೆ ಪರಿಶೀಲನೆ

ಹುಬ್ಬಳ್ಳಿ, ನ 19- ಸ್ಮಾರ್ಟಸಿಟಿ ಯೋಜನೆಯಡಿ 18.35 ಕೋ.ರೂ. ಅನುದಾನದಲ್ಲಿ ಹೈಟೆಕ್ ಮಾರುಕಟ್ಟೆ ಪ್ರಾಂಗಣವಾಗಿ ಜನತಾ ಬಜಾರ್ ಮಾರುಕಟ್ಟೆ ಅಭಿವೃದ್ಧಿಗೊಳ್ಳಲಿದ್ದು, ತಾತ್ಕಾಲಿಕವಾಗಿ ಸ್ಥಳಾಂತರವಾಗಲಿರುವ ಹೊಸೂರು ಬಳಿಯ ಮಾರುಕಟ್ಟೆಯ ಪ್ರದೇಶವನ್ನು ಬುಧವಾರ ಶಾಸಕ ಪ್ರಸಾದ ಅಬ್ಬಯ್ಯ ಅವರು ಸ್ಮಾರ್ಟಸಿಟಿ ಲಿ. ಅಧಿಕಾರಿಗಳ ಜೊತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಲ್ಲಿನ ಕ್ಲರ್ಕ ಇನ್ ಹೋಟೆಲ್ ಪಕ್ಕದ ಪಾಲಿಕೆ ಜಾಗೆಯಲ್ಲಿ ನಿರ್ಮಿಸಿರುವ ಶೆಡ್ ಹಾಗೂ ಹೊಸೂರು ಕ್ರಾಸ್ ಬಳಿಯ ಪಾಲಿಕೆಯ ಹಳೇ ಕಟ್ಟಡದ ಆವರಣದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ 51 ಮಳಿಗೆಗಳನ್ನು ಶಾಸಕರು ವೀಕ್ಷಿಸಿದರು.
ತಾತ್ಕಾಲಿಕ ಮಾರುಕಟ್ಟೆ ಪ್ರದೇಶದಲ್ಲಿ ನಿರ್ಮಿಸಿರುವ ಶೌಚಾಲಯ, ಶುದ್ಧ ಕುಡಿಯುವ ನೀರು, ಬೆಳಕಿನ ವ್ಯವಸ್ಥೆಯನ್ನು ಪರಿಶೀಲಿಸಿ, ಅಲ್ಲಿನ ಅಚ್ಚುಕಟ್ಟು ನಿರ್ವಹಣೆಗಾಗಿ ಅಧಿಕಾರಿಗಳನ್ನು ಪ್ರಶಂಶಿಸಿದರು. ವ್ಯಾಪಾರಸ್ಥರಿಗೆ ಹಾಗೂ ಮಾರುಕಟ್ಟೆಗೆ ಬರುವ ಗ್ರಾಹಕರಿಗೆ ಪಾರ್ಕಿಂಗ್ ಸೇರಿದಂತೆ ಇನ್ನಿತರೆ ಕೆಲ ಸಮಸ್ಯೆಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪಾಲಿಕೆ ಮಾಜಿ ಸದಸ್ಯ ವಿಜುನಗೌಡ ಪಾಟೀಲ, ಸ್ಮಾರ್ಟಸಿಟಿ ಲಿ.ನ ಮುಖ್ಯ ಅಭಿಯಂತರ ಎಂ. ನಾರಾಯಣ, ಶ್ರೀನಿವಾಸ ಪಾಟೀಲ, ಇತರರು ಇದ್ದರು.