ಜನತಾ ಬಜಾರ ಚುನಾವಣೆ ಮುಂದೂಡಿಕೆ ಬಿಜೆಪಿ ಕುತಂತ್ರ

ಕಲಬುರಗಿ,ಜ.10- ಇಲ್ಲಿನ ಜನತಾ ಬಜಾರದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆಯಬೇಕಿದ್ದ ಚುನಾವಣೆಯನ್ನು ಕೇವಲ ಕುಂಟುನೇಪ ನೀಡಿ ಚುನಾವಣೆ ಮುಂದುಡಿರುವ ಬಿಜೆಪಿ ಸರಕಾರದ ಜನವಿರೋಧಿ ಹಾಗೂ ಸಂವಿಧಾನ ವಿರೋಧಿ ನಡೆಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಬಲವಾಗಿ ಖಂಡಿಸಿದೆ.
ನಗರದ ಜನತಾ ಬಜಾರದಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಕಡಿಮೆ ಸಂಖ್ಯೆಯಲ್ಲಿದ್ದು, ಬಹುಮತವಿರದ ಕಾರಣ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ ಆಗಿರುವದರಿಂದ ಚುನಾವಣೆಯನ್ನು ಮುಂದೂಡಲು ಕುತಂತ್ರ ರೂಪಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಅವರು ಆರೋಪಿಸಿದ್ದಾರೆ.
ಈ ಮೊದಲು ಡಿಸಿಸಿ ಬ್ಯಾಂಕ್ ಕಲಬುರಗಿ ಇದಕ್ಕೆ ಚುನಾವಣೆ ನಡಿಸಿದಂತೆ ವಾಮ ಮಾರ್ಗದ ಮೂಲಕ ಕಾನೂನು ನಿಮಮವಳಿಗಳನ್ನು ಗಾಳಿಗೆ ತೂರಿ ಅಧಿಕಾರ ದುರುಪಯೋಗಪಡಿಸಿಕೊಂಡು ಡಿಸಿಸಿ ಬ್ಯಾಂಕಿನಲ್ಲಿ ಅಧಿಕಾರಕ್ಕೆ ಬಂದಿರುವ ಹಾಗೆ ಇಲ್ಲಿನ ಜನತಾ ಬಜಾರದಲ್ಲಿಯೂ ಕೂಡಾ ಅಧಿಕಾರ ದುರುಪಯೋಗ ನಡೆಸಿ ಅಧಿಕಾರಕ್ಕೆ ಬರುವ ಉದ್ದೇಶದಿಂದ ಚುನಾವಣೆ ಮುಂದುಡಿದ್ದು ಕಂಡುಬರುತ್ತದೆ.
ಜನತಾ ಬಜಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಶ್ಚಳ ಬಹುಮತವಿದ್ದು, ಬಿಜೆಪಿಗೆ ಅಧಿಕಾರ ತಪ್ಪುತ್ತದೆ ಎಂಬ ಉದ್ದೇಶದಿಂದ ಚುನಾವಣೆಯನ್ನು ಮುಂದುಡಿರುತ್ತಾರೆ. ಬಿಜೆಪಿ ಯವರು ಜಿಲ್ಲೆಯ ಅಭಿವೃದ್ಧಿ ಕಡೆ ಕಿಂಚಿತ್ತೂ ಕಾಳಜಿ ವಹಿಸದೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ ಜನರ ತಿರ್ಪಿನ ವಿರುದ್ದ ನಡೆದುಕೊಂಡು ಕಾನೂನು ಗಾಳಿಗೆ ತೂರಿ ಅಧಿಕಾರ ದುರುಪಯೋಗಪಡಿಸಿಕೊಂಡು ವಾಮ ಮಾರ್ಗದ ಮೂಲಕ ಅಧಿಕಾರ ಪಡೆದುಕೊಳ್ಳುತ್ತಿರುವ ನೀತಿಯನ್ನು ನೋಡಿದರೆ ಬಿಜೆಪಿ ಸರಕಾರ ಕೆವಲ ಅಧಿಕಾರದ ದುರಾಸೆಗಾಗಿ ಕೀಳು ಮಟ್ಟಕ್ಕಾದರೂ ಇಳಿಯುತ್ತಿರುವದನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದ್ದಾರೆ.