ಜನತಾ ದರ್ಶನ : ಜನರ ಸಮಸ್ಯೆ, ಕುಂದು ಕೊರತೆಗಳನ್ನು ತ್ವರಿತವಾಗಿ ಪರಿಹರಿಸಲು ಸಚಿವ ಕೆ.ವೆಂಕಟೇಶ್ ಸೂಚನೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.26:- ಜನತಾ ದರ್ಶನದಲ್ಲಿ ಜಿಲ್ಲೆಯ ಜನರಿಂದ ಸ್ವೀಕರಿಸಲಾಗಿರುವ ಅಹವಾಲು, ಕುಂದು ಕೊರತೆ, ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವಂತೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಸೂಚಿಸಿದರು.
ನಗರದ ಜಿಲ್ಲಾಡಳಿತ ಭವನದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಸಾರ್ವಜನಿಕರ ಅಹವಾಲು, ಸಮಸ್ಯೆಗಳ ಆಲಿಸುವ ಸಲುವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ ಜನತಾ ದರ್ಶನದಲ್ಲಿ ಅಹವಾಲು ಆಲಿಸಿ ಬಳಿಕ ಅವರು ಮಾತನಾಡಿದರು.
ಜನರ ಸ್ಥಳೀಯ ಸಮಸ್ಯೆಗಳನ್ನು ಆಲಿಸಿ ಆಯಾ ಭಾಗದಲ್ಲಿಯೇ ಇತ್ಯರ್ಥ ಮಾಡುವ ಉದ್ದೇಶದಿಂದ ಜನತಾ ದರ್ಶನ ಕಾರ್ಯಕ್ರಮವನ್ನು ರಾಜ್ಯದೆಲ್ಲೆಡೆ ಮುಖ್ಯಮಂತ್ರಿಯವರ ಆದೇಶದ ಮೇರೆಗೆ ನಡೆಸಲಾಗುತ್ತಿದೆ. ಪ್ರತಿ ತಿಂಗಳು ಜನತಾ ದರ್ಶನ ನಡೆಯಲಿದೆ. ಇಂದಿನ ಜನತಾ ದರ್ಶನದಲ್ಲಿ ಜನರು ಸಲ್ಲಿಸಿರುವ ಕುಂದು ಕೊರತೆ, ಅಹವಾಲು ಸಮಸ್ಯೆಗಳಿಗೆ ಯಾವ ಪರಿಹಾರ ಕಂಡು ಕೊಳ್ಳಲಾಗಿದೆ ಎಂಬ ಬಗ್ಗೆ ತಿಳಿಸಬೇಕು ಎಂದರು.
ಇದು ಕೇವಲ ಜನರ ಅರ್ಜಿ ಸ್ವೀಕರಿಸಿ ಸುಮ್ಮನೆ ಇರುವ ಕಾರ್ಯಕ್ರಮವಲ್ಲ. ಅಧಿಕಾರಿಗಳು ಜನರಿಂದ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ ಯಾವ ಕ್ರಮ ವಹಿಸಲಾಗಿದೆ ಎಂಬ ಬಗ್ಗೆ ಮುಂದಿನ ಜನತಾ ದರ್ಶನದೊಳಗೆ ತಿಳಿಸಬೇಕು. ಆ ವೇಳೆಗೆ ಸಾರ್ವಜನಿಕರ ಸಮಸ್ಯೆ ಬಗೆಹರಿಸಿರಬೇಕು. ಪ್ರತಿ ಇಲಾಖೆ ಅಧಿಕಾರಿಗಳು ಸಂಬಂಧಪಟ್ಟ ಅರ್ಜಿಗಳನ್ನು ವಿಲೇವಾರಿ ಮಾಡಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸಚಿವರು ತಿಳಿಸಿದರು.
ಜನತಾ ದರ್ಶನದಲ್ಲಿ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ಸಮಸ್ಯೆ ಇತ್ಯರ್ಥವಾಗಲು ಕ್ಲಿಷ್ಟಕರವಾಗಿದ್ದಲ್ಲಿ ಅಥವಾ ಅರ್ಜಿದಾರರಿಗೆ ಸಮಾಧಾನವಾಗುವ ರೀತಿಯಲ್ಲಿ ಬಗೆ ಹರಿಯದಿದ್ದಲ್ಲಿ ಮತ್ತೆ ಗಮನಕ್ಕೆ ತಂದು ಸೂಕ್ತ ರೀತಿಯಲ್ಲಿ ಪರಿಹರಿಸುವ ಕೆಲಸವಾಗಬೇಕು. ಇದು ಅಧಿಕಾರಿಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಆರಂಭದಲ್ಲಿಯೇ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನಾಗರಿಕರು ಅರ್ಜಿ ಅಹವಾಲುಗಳನ್ನು ಉಸ್ತುವಾರಿ ಸಚಿವರ ಸಮ್ಮುಖದಲ್ಲಿಯೇ ಸಲ್ಲಿಸಿದರು.
ರೈತ ಮುಖಂಡರು ಮಾತನಾಡಿ ದಿನಕ್ಕೆ 7 ಗಂಟೆಗಳ ಕಾಲ ವಿದ್ಯುತ್ ನೀಡಬೇಕು. ಜಿಲ್ಲೆಯನ್ನು ತೀವ್ರ ಬರಗಾಲ ಪಟ್ಟಿಗೆ ಸೇರ್ಪಡೆ ಮಾಡಬೇಕು. ಸೋಲಿಗರು, ಬುಡಕಟ್ಟು ಜನರಿಗೆ ವಿದ್ಯುತ್ ಕುಡಿಯುವ ನೀರು ಇತರೆ ಮೂಲ ಸೌಲಭ್ಯಗಳನ್ನು ಶೀಘ್ರ ಕಲ್ಪಿಸಬೇಕು. ಗ್ರಾಮಾಂತರ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಎಲ್ಲ ಕೆರೆಗಳಿಗೂ ನೀರು ತುಂಬಿಸಬೇಕು. ತೆಂಗು ಬೆಲೆ ಕುಸಿತವಾಗಿರುವ ಹಿನ್ನೆಲೆಯಲ್ಲಿ ಬೆಳೆಗಾರರಿಗೆ ನೆರವಾಗಬೇಕು ಎಂಬುದು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಸಚಿವರ ಮುಂದಿಟ್ಟರು.
ಮನೆ ಮಂಜೂರಾತಿ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ, ಆರ್.ಟಿಸಿ, ಕೆರೆಗಳ ಒತ್ತುವರಿ ತೆರವು, ಬೆಳೆವಿಮೆ, ಚಂಗಡಿ ಪುನರ್ವಸತಿ ಸೇರಿದಂತೆ ವೈಯಕ್ತಿಕ ಹಾಗೂ ಮೂಲ ಸೌಕರ್ಯಗಳು ಸೇರಿದಂತೆ ವಿವಿಧ ಸಮಸ್ಯೆಗಳ ಸಂಬಂಧ ಅರ್ಜಿಗಳನ್ನು ಜನರು ಸಚಿವರ ಮುಂದೆ ನೀಡಿ ವಿವರಿಸಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ, ಹೆಚ್.ಎಂ. ಗಣೇಶ್ ಪ್ರಸಾದ್, ಸಹಕಾರ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಾದ ಎನ್. ಮಂಜುನಾಥ್ ಪ್ರಸಾದ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ಬಿ.ಆರ್.ಟಿ. ಹುಲಿ ಸಂರಕ್ಷಿತ ಅರಣ್ಯ ಸಂರಕ್ಷಣಾಧಿಕಾರಿ ದೀಪಾ ಕಂಟ್ರಾಕ್ಟರ್, ಬಂಡೀಪುರ ಹುಲಿ ಸಂರಕ್ಷಿತಾ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಕುಮಾರ್, ಮಲೈ ಮಹದೇಶ್ವರ ವನ್ಯ ಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.