ಜನತಾ ದರ್ಶನ ಕಾರ್ಯಕ್ರಮ ಸ್ವಾಗತಾರ್ಹ,೧೫ ದಿನದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಅಣಕು ಶವಯಾತ್ರೆ

ರಾಯಚೂರು, ಸೆ.೨೪ – ನಾಳೆ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣುಪ್ರಕಾಶ ಪಾಟೀಲ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹವಾಗಿದೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ೧೫ ದಿನಗಳಲ್ಲಿ ಪರಿಹಾರ ಕಲ್ಪಿಸದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ ಶರಣಪ್ರಕಾಶ ಪಾಟೀಲ್ ಸೇರಿದಂತೆ ಕಾಂಗ್ರೆಸ್ ನಾಯಕ ಅಣಕು ಶವಯಾತ್ರೆ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ವಿರೂಪಾಕ್ಷಿ ಎಚ್ಚರಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಜನತಾ ದರ್ಶನ ಕಾರ್ಯಕ್ರಮವು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕನಸಿನ ಕೂಸು. ಅವರು ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದಾ ಆ ಗ್ರಾಮವು ಹೊಸ ರೂಪವನ್ನು ಪಡೆದುಕೊಳ್ಳುತ್ತಿತ್ತು. ಅಂತಹ ಸ್ವರೂಪವನ್ನು ನಾವು ಬಯಸುತ್ತೇವೆ ಎಂದು ಹೇಳಿದ ಅವರು ಜನತಾ ದರ್ಶನ ನಡೆಸುತ್ತಿರುವ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ನಗರದಲ್ಲಿ ೨೪*೭ ಹಳ್ಳ ಹಿಡಿದಿದೆ. ರಸ್ತೆಗಳು ಹದಗೆಟ್ಟಿವೆ.ಇದಲ್ಲದೆ ಜಿಲ್ಲೆ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು ಅಕ್ರಮ ಚಟುಟಿಕೆಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ಸೂಚಿಸುವ ಎದೆಗಾರಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಪ್ರದರ್ಶಿಸಬೇಕೆಂದರು.
ಜಿಲ್ಲೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೂ ಅಧಿಕಾರಿಗಳು ಕೈಕಟ್ಟಿ ಕುಳಿತಿರುವುದರ ಹಿಂದೆ ಪ್ರಭಾವಿಗಳ ಕೈವಾಡ ಇರುವುದು ಸ್ಪಷ್ಟ. ಜೂಜು, ಇಸ್ಪೀಟು, ಗಾಂಜಾ, ಅಫೀಮು ಮಾರಾಟ, ಹಾಗೂ ಇನ್ನಿತರ ಅಕ್ರಮ ದಂಧೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಅಧಿಕಾರಿಗಳ ಸಭೆ ನಡೆಸಿ ಇವುಗಳನ್ನು ನಿಲ್ಲಿಸುವಂತೆ ಖಡಕ್ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಕುರಿತು ಮಾತನಾಡಿದ ಅವರು, ವರಿಷ್ಠರ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಅನಿವಾರ್ಯವಾಗಿದೆ.ಪಕ್ಷದ ಉಳಿವಿಗಾಗಿ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿದ್ದು ಕೊಪ್ಪಳದಲ್ಲಿ ಸೆ.೨೭ ರಂದು ನಡೆಯುವ ಕಾರ್ಯಕಾರಣಿಯಲ್ಲಿ ಈ ನಿರ್ಧಾರವನ್ನು ತಿಳಿಸಲಾಗುವುದೆಂದು ಹೇಳಿದರು.
ಕಾಲಾನುಕಾಲಕ್ಕೆ ಆಗದಿರುವ ಸಮಸ್ಯೆಗಳಿಗೆ ಕೇವಲ ೧೫ ದಿನಗಳ ಗಡುವು ನೀಡುವುದು ಎಷ್ಟು ಸೂಕ್ತ. ಈಗಿರುವ ಜ್ವಲಂತ ಸಮಸ್ಯೆಗಳ ಉಲ್ಬಣದಲ್ಲಿ ಜೆಡಿಎಸ್ ಪಾತ್ರವು ಇದೆಯಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿ ಸಮಾಜಾಯಿಷಿ ನೀಡಲು ಸಮಯ ತೆಗೆದುಕೊಂಡ ಎಂ. ವಿರೂಪಾಕ್ಷಿ ಸರಕಾರ ಸ್ಪೀಡ್ ಅಪ್ ತೆಗೆದುಕೊಳ್ಳಲಿ ಎನ್ನುವುದು ನಮ್ಮ ಆಶಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾಂತೇಶ ಪಾಟೀಲ ಅತ್ತನೂರು ಯೂಸುಫ್ ಖಾನ್, ಸಣ್ಣ ನರಸಿಂಹನಾಯಕ,ಎನ್. ಶಿವಶಂಕರ್, ರಾಮಕೃಷ್ಣ ಇದ್ದರು.