“ಜನತಾ ದರ್ಶನ”ಕ್ಕೆ ಹರಿದು ಬಂದ ಜನರ ದಂಡು, ಅರ್ಜಿಗಳ ಮಹಾಪೂರ:ಜನರ ಸಮಸ್ಯೆಗಳಿಗೆ ಕಿವಿಯಾದ ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ,ಸೆ.25: ಜನರ ಬಳಿಗೆ ಹೋಗಿ ಜನರ ಸಮಸ್ಯೆಗೆ ಕಿವಿಯಾಗಬೇಕೆಂಬ ಸದುದ್ದೇಶದಿಂದ ಸೋಮವಾರ ಇಡೀ ರಾಜ್ಯದಾದ್ಯಂತ ಜಿಲ್ಲಾ ಉಸ್ತುವಾರಿ ಸಚಿವರು ಜನರ ಅಹವಾಲು ಆಲಿಸಿದರು. ಅದರಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ನಡೆಸಿದ “ಜನತಾ ದರ್ಶನ” ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ತಮ್ಮ ಸಮಸ್ಯೆಗೆ ಪರಿಹಾರಕ್ಕೆ ತಾಲೂಕಾ ಕ್ರೀಡಾಂಗಣಕ್ಕೆ ದೌಡಾಯಿಸಿದ ದೃಶ್ಯ ಕಂಡುಬಂತು.
ಸಚಿವ ಪ್ರಿಯಾಂಕ್ ಖರ್ಗೆ ಅವರು, ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ ಮತ್ತು ಎಂ.ಎಲ್.ಸಿ. ತಿಪ್ಪಣಪ್ಪ ಕಮಕನೂರ ಅವರೊಂದಿಗೆ ತಾಳ್ಮೆಯಿಂದ ಪ್ರತಿಯೊಬ್ಬರ ಅಹವಾಲು ಆಲಿಸಿ ಸಮಸ್ಯೆ ಬಹೆಹರಿಸುವುದಾಗಿ ಭರವಸೆ ನೀಡಿದರು. ಸ್ಥಳದಲ್ಲಿ ಇತ್ಯರ್ಥವಾಗುವ ಸಮಸ್ಯೆಯನ್ನು ಇಂದೇ ಬಗೆಹರಿಸಬೇಕುಮ ಕೆಲ ಪ್ರಕರಣದಲ್ಲಿ ಒಂದು ದಿನ, ವಾರದಲ್ಲಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಪತಿ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರಿಂದ ವಿಚ್ಚೇದನ ಪಡೆದಿರುವೆ. ಮನೆ ನಿರ್ವಹಣೆಗೆ ತನಗೆ ತಿಂಗಳ ವೇತನದಲ್ಲಿ ಹಣ ನೀಡಲು ನ್ಯಾಯಾಲಯ ಆದೇಶಿಸಿದ್ದರೂ, ಶಿಕ್ಷಣ ಇಲಾಖೆ ಪಾವತಿಸುತ್ತಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಎದುರು ಚಿಂಚೋಳಿ ಮೂಲದ ಸುವರ್ಣ ತನ್ನ ಸಮಸ್ಯೆ ಇಟ್ಟರು. ನ್ಯಾಯಾಲಯ ಆದೇಶವಿದ್ದರು ಏಕೆ ಪಾಲನೆ ಮಾಡುತ್ತಿಲ್ಲ ಎಂದು ಬಿ.ಇ.ಓ ಅವರನ್ನು ಪ್ರಶ್ನಿಸಿದ ಸಚಿವರು, ನ್ಯಾಯಾಲಯದ ಆದೇಶದಂತೆ ಕ್ರಮವಹಿಸಿ ಎಂದು ಸೂಚಿಸಿದರು.
12-15 ವರ್ಷ ಗ್ರಾಮ ಪಂಚಾಯತಿಯಲ್ಲಿ ಸ್ವಚ್ಚತಾ ಕಾರ್ಮಿಕನಾಗಿ ಕೆಲಸ ನಿರ್ವಹಿಸಿರುವೆ. ಇದೂವರೆಗೆ ವೇತನ ಕೊಟ್ಟಿಲ್ಲ ಎಂದು ಕೋಡ್ಲಿಯ 60 ವರ್ಷದ ನಾಗಪ್ಪ ಕಟ್ಟಿಮನಿ ಅರ್ಜಿ ಹಿಡಿದುಕೊಂಡು ಬಂದರು. ಕೂಡಲೆ ಇದನ್ನು ಬಗೆಹರಿಸಿ ಎಂದು ಸೂಚನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು ಅರ್ಜಿಯನ್ನು ತಾ.ಪಂ.ಇ.ಓಗೆ ನೀಡಿದರು.
ಪಂಜಾಬ್, ಜಮ್ಮು ಕಾಶ್ಮೀರದಲ್ಲಿ ಆರ್ಮಿ ಟ್ಯಾಂಕರ ನಲ್ಲಿ ಆಮ್ರ್ಡ್ ಗನ್ನರ್ ಅಪರೇಟರ್ ಆಗಿ ಕಾರ್ಯನಿರ್ವಹಿಸಿದ್ದು, ನಿಯಮದಂತೆ ಜಮೀನು ಮಂಜೂರಾತಿಗೆ ಕಳೆದ 23 ವರ್ಷದಿಂದ ತಹಶೀಲ್,ಎ.ಸಿ, ಡಿ.ಸಿ. ಕಚೇರಿ ಅಲೆದಾಡಿದರು ಯಾರು ಸ್ಪಂದಿಸುತ್ತಿಲ್ಲ. ನಿಗದಿತ ಶುಲ್ಕ ಸಹ ಭರಿಸಿರುವೆ ಎಂದು ಮಾಜಿ ಸೈನಿಕ ಮೊಹಮ್ಮದ್ ಸಿಕಂದರ್ ಸಚಿವರ ಬಳಿ ತಮ್ಮ ಅಳಲು ತೋಡಿಕೊಂಡರು. ಕೂಡಲೆ ಸಮಸ್ಯೆ ಪರಿಹಾರಕ್ಕೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಣವಾರ ಗ್ರಾಮ ಪಂಚಾಯತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. 8 ತಿಂಗಳಿಂದ ಸಂಬಳ ಇಲ್ಲ. ಸಂಬಳ ಕೇಳಿದ್ದರೆ, ಜನರ ಬಳಿ ಕರ ವಸೂಲಿ ಮಾಡಿ ತೊಗೋರಿ ಎಂದು ಪಿ.ಡಿ.ಓ ಹೇಳುತ್ತಿದ್ದಾರೆ. ನಮಗೆ ಸಂಬಳ ಕೊಡಿ ಎಂದು ಕಲಾವತಿ ಸೇರಿ ಮೂರ್ನಾಲ್ಕು ಮಹಿಳೆಯರು ಸಚಿವರಲ್ಲಿ ಬೇಡಿಕೊಂಡರು. ಕರ ವಸೂಲಿ ಜವಾಬ್ದಾರಿ ಪಿ.ಡಿ.ಓ. ಅವರದ್ದಾಗಿದೆ. ಇಂತಹ ವರ್ತನೆ ಸಹಿಸುವುದಿಲ್ಲ ಎಂದು ಗರಂ ಆದ ಸಚಿವರು, ಒಂದು ವಾರದಲ್ಲಿ ಕಾರ್ಮಿಕರಿಗೆ ಸಂಬಳ ಕೊಡಬೇಕು. ಇಲ್ಲದಿದ್ದಲ್ಲಿ ಪಿ.ಡಿ.ಓ ಸಸ್ಪೆಂಡ್ ಮಾಡುವಂತೆ ಇ.ಓ.ಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.
ಸಿದ್ಧಶ್ರೀ ಕಾರ್ಖಾನೆ ಜಮೀನು ಅತಿಕ್ರಮಣ, ಕೂಡಲೆ ವಶಕ್ಕೆ ಪಡೆಯಿರಿ: ಚಿಂಚೋಳಿ ಪಟ್ಟಣದ ಹೊರಲಯದಲ್ಲಿರುವ ಸಿದ್ಧಶ್ರೀ ಎಥಿನಾಲ್ ಕಾರ್ಖಾನೆ 97 ಎಕರೆ 13 ಗುಂಟೆ ಜಮೀನು ಮಾಲೀಕತ್ವ ಹೊಂದಿದೆ. ಆದರೆ ಅದು ಒಟ್ಟಾರೆ 213 ಎಕರೆ ಜಮೀನು ಅತಿಕ್ರಮಿಸಿದೆ. ಚಿಂಚೋಳಿ ಪುರಸಭೆಯಿಂದ 3 ಸಲ ನೋಟಿಸ್ ನೀಡಿದರು, ಕಾರ್ಖಾನೆಯವರು ಕ್ಯಾರೆ ಎನ್ನುತ್ತಿಲ್ಲ ಎಂದು ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಟೈಗರ್ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಾಗ, ನಾಳೆನೆ ಅತಿಕ್ರಮಣ ಜಮೀನು ವಶಕ್ಕೆ ಪಡೆಯಿರಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಎಸ್.ಪಿ ಮತ್ತು ಚಿಂಚೋಳಿ ಮುಖ್ಯಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಕುಂಚಾವರಂ ಪಿ.ಯು. ಕಾಲೇಜು ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ: ಚಿಂಚೋಳಿ ತಾಲೂಕಿನ ಕುಂಚಾವರಂ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ 3 ಪ್ರೌಢ ಶಾಲೆಗಳಿದ್ದು, ಪ್ರತಿ ವರ್ಷ ಸುಮಾರು 150ಕ್ಕೂ ಹೆಚ್ಚು ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿ ಹೊರಬರುತ್ತಿದ್ದಾರೆ. ಆದರೆ ಪಿ.ಯು. ಕಾಲೇಜು ಇಲ್ಲದ ಕಾರಣ ಉನ್ನತ ಶಿಕ್ಷಣ ಮರೀಚಿಕೆಯಾಗಿದೆ. ತೆಲಾಂಗಾಣ ಗಡಿಯಲ್ಲಿರುವುದರಿಂದ ಇಲ್ಲಿ ಪಿ.ಯು. ಕಾಲೇಜು ಮಂಜೂರು ಮಾಡಬೇಕೆಂದು ಕಸ್ತೂರಿ ಗೋಪಾಲ ರೆಡ್ಡಿ ಮತ್ತು ಸಾವರಿ ನರಸಿಂಹಲು ಸಚಿವರಿಗೆ ಮನಿವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಪ್ರಿಯಾಂಕ್ ಖರ್ಗೆ ಕೂಡಲೆ ಪ್ರಸ್ತಾವನೆ ಸಲ್ಲಿಸುವಂತೆ ಸ್ಥಳದಲ್ಲಿದ್ದ ಡಿ.ಡಿ.ಪಿ.ಯು ಶಿವಶರಣಪ್ಪ ಮೂಳೆಗಾಂವ ಅವರಿಗೆ ಸೂಚಿಸಿದರು.
ಕಾಳಗಿಯಲ್ಲಿ ನ್ಯಾಯಾಲಯ ಸ್ಥಾಪನೆ, ಸಿದ್ಧಶ್ರೀ ಅಕ್ರಮ ಜಮೀನು ಒತ್ತುವರಿ ತೆರವು, ಗ್ರಾಮ ಪಂಚಾಯತ್ ಸ್ವಚ್ಚತಾ ಸಿಬ್ಬಂದಿಗೆ ವೇತನ ಬಾಕಿ ಪಾವತಿ, ಪಹಣಿ ತಿದ್ದುಪಡಿ, ಪತ್ರಕರ್ತರ ಭವನ, ಕುಂಬಾರ ಭವನ ನಿರ್ಮಾಣ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಮಸ್ಯೆ ಹೊತ್ತಿಕೊಂಡು ಜನರು, ಸಂಘ-ಸಂಸ್ಥೆಗಳು ಜಿಲ್ಲಾ ಉಸ್ತುವಾರಿ ಸಚಿವರ ಬಳಿ ತಮ್ಮ ಬೇಡಿಕೆ ಇಟ್ಟರು. ಜನತಾ ದರ್ಶನದಲ್ಲಿ ಅರ್ಜಿಗಳ ಮಹಾಪೂರವೇ ಹರಿದು ಬಂದಿತ್ತು.
ಮಕ್ಕಳೊಂದಿಗೆ ಊಟ ಸವಿದ ಸಚಿವ ಪ್ರಿಯಾಂಕ್ ಖರ್ಗೆ: ಜನತಾ ದರ್ಶನ ಅಹವಾಲು ಸ್ವೀಕರಿಸಿದ ನಂತರ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಧ್ಯಾಹ್ನ ಪೆÇೀಲಕಪಲ್ಲಿಯ ಆದರ್ಶ ವಿದ್ಯಾಲಯದ ಮಕ್ಕಳೊಂದಿಗೆ ಮಧ್ಯಾಹ್ನ ಬಿಸಿ ಊಟ ಸವಿದರು. ಎಂ.ಎಲ್.ಸಿ ತಿಪ್ಪಣಪ್ಪ ಕಮಕನೂರ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಎಸ್.ಪಿ. ಅಡ್ಡೂರು ಶ್ರೀನಿವಾಸಲು ಸಚಿವರಿಗೆ ಸಾಥ್ ನೀಡಿದರು.