ಜನತಾ ಕರ್ಫ್ಯೂ 2ನೇ ದಿನ ರಾಜ್ಯ ನಿಶ್ಶಬ್ಧ

ಬೆಂಗಳೂರು, ಏ. ೨೯- ರಾಜ್ಯದಲ್ಲಿ ಕೊರೊನಾ ತಡೆಗೆ ಜಾರಿ ಮಾಡಲಾಗಿರುವ ಲಾಕ್‌ಡೌನ್‌ನ ೨ ದಿನವಾದ ಇಂದು ರಾಜ್ಯದಲ್ಲಿ ಎಲ್ಲ ಚಟುವಟಿಕೆಗಳು ಬಂದ್ ಆಗಿದ್ದು, ಕರುನಾಡು ಸಂಪೂರ್ಣ ಸ್ತಬ್ಧವಾಗಿದೆ.
ಮಹಾಮಾರಿ ಕೊರೊನಾ ಹರಡುವಿಕೆಗೆ ತಡೆ ಹಾಕಲು ಸರ್ಕಾರ ಮಂಗಳವಾರ ರಾತ್ರಿ ೯ ಗಂಟೆಯಿಂದಲೇ ರಾಜ್ಯಾದ್ಯಂತ ಕರ್ಫ್ಯೂವನ್ನು ಜಾರಿ ಮಾಡಿದ್ದು, ನಿನ್ನೆಯಂತೆ ಇಂದೂ ಸಹ ರಾಜ್ಯದ ಎಲ್ಲೆಡೆ ಅಂಗಡಿ ಮುಂಗಟ್ಟುಗಳು ಬಂದ್ ಆಗಿ ಜನಜೀವನ ಸಂಪೂರ್ಣ ಸ್ತಬ್ಧಗೊಂಡಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಬಸ್, ಖಾಸಗಿ ವಾಹನಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿದೆ. ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿವೆ. ಕರ್ಫ್ಯೂ ನಿಯಮದಂತೆ ೧೦ರವರೆಗೂ ಅವಶ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದ್ದು, ಅದರಂತೆ ಜನ ಬೆಳಗ್ಗೆಯೇ ಹಾಲು, ತರಕಾರಿ ಸೇರಿದಂತೆ ಅವಶ್ಯ ವಸ್ತುಗಳ ಖರೀದಿಗೆ ಮುಗಿ ಬಿದ್ದಿದ್ದರು.
ಬೆಳಗ್ಗೆ ೧೦ ಗಂಟೆಯ ನಂತರ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗಿದೆ. ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳಿಗೆ ಬೀಗ ಬಿದ್ದಿದೆ.
ಸರ್ಕಾರಿ ಬಸ್ ಸೇರಿದಂತೆ ಯಾವುದೇ ರೀತಿಯ ಸಾರ್ವಜನಿಕ ಸಾರಿಗೆ ಹಾಗೂ ಖಾಸಗಿ ವಾಹನಗಳ ಓಡಾಟಕ್ಕೂ ನಿರ್ಬಂಧ ಹೇರಲಾಗಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ. ಅಲ್ಲೊಂದು ಇಲ್ಲೊಂದು ತುರ್ತು ಸೇವೆ ವಾಹನಗಳು ಸರಕು ಸಾಗಾಣೆ ವಾಹನಗಳು ಓಡಾಡುತ್ತಿವೆ.
ಪೊಲೀಸರಿಂದ ಬಿಸಿ
ಬೆಳಗ್ಗೆ ೧೦ರ ನಂತರವೂ ರಸ್ತೆಗಳಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ಹಲವರಿಗೆ ಪೊಲೀಸರು ಲಾಠಿಯ ಬಿಸಿ ಮುಟ್ಟಿಸಿದ್ದು ಕೆಲವೆಡೆ ಪೊಲೀಸರ ಜತೆ ವಾಗ್ವಾದಕ್ಕಿಳಿದವರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಜನತಾ ಕರ್ಫ್ಯೂ ಸಂಪೂರ್ಣ ಪಾಲನೆ ಬಗ್ಗೆ ಪೊಲೀಸರು ನಿಗಾವಹಿಸಿದ್ದು, ಬೆಂಗಳೂರಿನಲ್ಲಿ ಪೊಲೀಸ್ ವಾಹನಗಳು ಎಲ್ಲೆಡೆ ಗಸ್ತು ತಿರುಗುತ್ತಿವೆ. ಜತೆಗೆ ಪ್ರಮುಖ ರಸ್ತೆ, ವೃತ್ತಗಳಲ್ಲಿ ಪೊಲೀಸರನ್ನು ನಿಯೋಜಿಸಿ ಜನರು ಅನಗತ್ಯವಾಗಿ ಓಡಾಡದಂತೆ ಎಚ್ಚರ ವಹಿಸಲಾಗಿದೆ.
ಬೆಳಗ್ಗೆ ೧೦ರ ನಂತರವೂ ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಬಂದ್ ಮಾಡಿಸಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಕರ್ಫ್ಯೂ ತೀವ್ರ ಪ್ರಮಾಣದಲ್ಲಿ ಪಾಲನೆಯಾಗಿದೆ. ಜನ ಸಹ ಕಾನೂನಿಗೆ ಹೆದರಿ ಮನೆಯಲ್ಲೇ ಇದ್ದಾರೆ.
ತುರ್ತು ಕೆಲಸ ಇರುವವರು ಮಾತ್ರ ತಮ್ಮ ಗುರುತಿನ ಚೀಟಿ ತೋರಿಸಿ ಓಡಾಡುತ್ತಿದ್ದಾರೆ. ಪೊಲೀಸರು ರಸ್ತೆಗಿಳಿಯುವ ಪ್ರತಿಯೊಬ್ಬರನ್ನು ತಪಾಸಣೆ ಮಾಡುತ್ತಿದ್ದು, ಏನೂ ಕೆಲಸ ಇಲ್ಲದೆ ರಸ್ತೆಗೆ ಬಂದವರನ್ನು ಮನೆಗೆ ವಾಪಸ್ ಕಳುಹಿಸಿದ್ದಾರೆ.