ಜನತಾ ಕರ್ಫ್ಯೂ ೨ನೇ ದಿನ ‘ಜನಸ್ಪಂದನೆ’

ಪುತ್ತೂರು, ಎ.೩೦- ಕೊರೊನಾ ಕರ್ಫ್ಯೂ ಜಾರಿಗೊಂಡ ಬಳಿಕ ಎರಡನೇ ದಿನವಾದ ಗುರುವಾರ ಸಾರ್ವಜನಿಕರು ಸರ್ಕಾರದ ನಿಯಮಾವಳಿಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿರುವುದು ಕಂಡು ಬಂದಿದೆ.
ಪುತ್ತೂರು ನಗರದಲ್ಲಿ ಬುಧವಾರ ಕಂಡ ಸನ್ನಿವೇಶಕ್ಕೂ ಗುರುವಾರದ ದೃಶ್ಯಾವಳಿಗೂ ಸಾಕಷ್ಟು ವ್ಯತ್ಯಾಸ ಕಂಡು ಬಂತು. ಮೊದಲ ದಿನ ಹತ್ತು ಗಂಟೆಯ ನಂತರವೂ ಸಾಕಷ್ಟು ಪ್ರಮಾಣದ ವಾಹನಗಳು ಚೆಕ್‌ಪೋಸ್ಟ್ ಮೂಲಕ ನಗರ ಪ್ರವೇಶಿಸಲು ಯತ್ನಿಸುತ್ತಿರುವುದು ಕಂಡು ಬಂದಿತ್ತು. ಪೊಲೀಸರು ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿ ಬಿಗಿ ತಪಾಸಣೆ ನಡೆಸುತ್ತಿದ್ದರು. ನಿಯಮ ಉಲ್ಲಂಘಿಸಿದವರನ್ನು ವಾಪಸ್ ಕಳುಹಿಸುತ್ತಿದ್ದರು. ದಂಡ ಹಾಕುವ ಪ್ರಕ್ರಿಯೆಯೂ ನಡೆದಿತ್ತು.
ಈ ಕಟ್ಟುನಿಟ್ಟಿನ ಕ್ರಮದ ಪರಿಣಾಮವೋ ಎಂಬಂತೆ ಎರಡನೇ ದಿನವಾದ ಗುರುವಾರ ಜನ ತಾವೇ ಸ್ವಯಂ ನಿಯಮಗಳಿಗೆ ಒಗ್ಗಿಕೊಂಡಿದ್ದಾರೆ. ಬೆಳಗ್ಗೆ ೬ರಿಂದ ೧೦ರ ನಡುವಿನ ಅವಧಿಯಲ್ಲಿ ನಗರ ಪ್ರದೇಶದಲ್ಲಿ ಹೇಳಿಕೊಳ್ಳುವಂಥ ಜನದಟ್ಟಣೆಯೂ ಇರಲಿಲ್ಲ. ವಾಹನಗಳ ಒತ್ತಡವೂ ಇರಲಿಲ್ಲ. ಹತ್ತರ ಬಳಿಕವೂ ಜನ ಸ್ವಯಂ ಪ್ರೇರಿತರಾಗಿ ನಿರ್ಗಮಿಸಿದರು. ಅಂಗಡಿ ಮುಂಗಟ್ಟುಗಳು ಸಮಯಕ್ಕೆ ಸರಿಯಾಗಿ ಮುಚ್ಚಿದವು. ನಂತರದ ಅವಧಿಯಲ್ಲೂ ಪೊಲೀಸರಿಗೆ ಹೆಚ್ಚಿನ ಒತ್ತಡ ಸೃಷ್ಟಿಯಾಗಲಿಲ್ಲ. ೨ ವಾರಗಳ ಕೊರೊನಾ ಕರ್ಫ್ಯೂವಿಗೆ ಜನ ಧನಾತ್ಮಕವಾಗಿ ಸ್ಪಂದಿಸುತ್ತಿರುವುದು ಕಂಡು ಬಂತು.