ಜನತಾ ಕರ್ಫ್ಯೂ ಶಿವಮೊಗ್ಗ ನಗರ ಸಂಪೂರ್ಣ ಸ್ತಬ್ಧ

ಶಿವಮೊಗ್ಗ, ಏ. ೨೮: ಕೊರೊನಾ ವೈರಸ್ ಹರಡುವಿಕೆ ನಿಯಂತ್ರಣಕ್ಕಾಗಿ ರಾಜ್ಯಾದ್ಯಂತ ಮಂಗಳವಾರ ರಾತ್ರಿಯಿಂದ ೧೪ ದಿನಗಳ ಕಾಲ ಜಾರಿಗೊಳಿಸಲಾಗಿರುವ ಜನತಾ ಕರ್ಫ್ಯೂಗೆ, ಬುಧವಾರ ಶಿವಮೊಗ್ಗ ನಗರದಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಯಿತು. ಇಡೀ ನಗರ ಸಂಪೂರ್ಣ ಸ್ತಬ್ದವಾಗಿತ್ತು.
ಬೆಳಿಗ್ಗೆ ೬ ಗಂಟೆಯಿಂದ ೧೦ ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಈ ವೇಳೆ ರಸ್ತೆಗಳಲ್ಲಿ ಜನ-ವಾಹನ ಸಂಚಾರ ದಟ್ಟಣೆ
ಹೆಚ್ಚಿದ್ದುದು ಕಂಡುಬಂದಿತು. ಬಹುತೇಕ ನಗರದೆಲ್ಲೆಡೆ ತರಕಾರಿ, ಹಾಲು, ದಿನಸಿ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು. ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಕಾಲಿಡಲು ಸಾಧ್ಯವಾಗದಷ್ಟು ಜನಸಂದಣಿ ಕಂಡುಬಂದಿತು. ಸಾಮಾಜಿಕ ಅಂತರ ಸಂಪೂರ್ಣ ಮರೆಯಾಗಿತ್ತು.
೧೦ ಗಂಟೆಯ ನಂತರ ಪೊಲೀಸರು ಆಸ್ಪತ್ರೆ, ಮೆಡಿಕಲ್ ಶಾಪ್ ಹೊರತುಪಡಿಸಿ ಉಳಿದೆಲ್ಲ ಅಂಗಡಿ-ಮುಂಗಟ್ಟುಗಳನ್ನು ಬಂದ್ ಗೊಳಿಸುವಂತೆ ಸೂಚಿಸಲಾರಂಭಿಸಿದರು. ಅರ್ಧ ಗಂಟೆಯಲ್ಲಿಯೇ ಪ್ರಮುಖ ರಸ್ತೆಗಳು ಜನ-ವಾಹನ ಸಂಚಾರವಿಲ್ಲದೆ ಬಣಗುಟ್ಟಲಾರಂಭಿಸಿದವು.
ದಂಡ: ಮಹಾನಗರ ಪಾಲಿಕೆ ಆರೋಗ್ಯ ವಿಭಾಗವು ಬೆಳಿಗ್ಗೆ ನಗರದ ವಿವಿಧೆಡೆ ಸಂಚರಿಸಿ, ಮಾಸ್ಕ್ ಇಲ್ಲದೆ ಓಡಾಡುತ್ತಿದ್ದವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿತು. ಪರಿಶೀಲನೆ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ನಗರದ ವಿವಿಧೆಡೆ ಭೇಟಿಯಿತ್ತು ಜನತಾ ಕರ್ಫ್ಯೂ ಅನುಷ್ಠಾನದ ಪರಿಶೀಲನೆ ನಡೆಸಿದರು.