‘ಜನತಾ ಕರ್ಫ್ಯೂ’ ಪುತ್ತೂರು ಪೇಟೆಯಲ್ಲಿ ಕಡೆಗಣನೆ

ಅನಗತ್ಯ ಓಡಾಟ ನಡೆಸಿದ ಖಾಸಗಿ ವಾಹನಗಳು

ಪುತ್ತೂರು, ಎ.೨೯- ಕೊರೊನಾ ಹೆಮ್ಮಾರಿಯ ನಿಗ್ರಹದ ಹಿನ್ನಲೆಯಲ್ಲಿ ಜಾರಿಗೊಂಡಿರುವ ಜನತಾ ಕರ್ಫ್ಯೂನ ಮೊದಲ ದಿನ ಪುತ್ತೂರು ಪೇಟೆಯಲ್ಲಿ ಪೊಲೀಸರ ರಿಯಾಯತಿ ಲಾಭ ಪಡೆದುಕೊಂಡು ಜನತೆಯ ಅನಗತ್ಯ ಓಡಾಟ ನಡೆಸುತ್ತಿರುವುದು ಕಂಡುಬಂತು.
ಮೊದಲ ದಿನದ ಹಿನ್ನಲೆಯಲ್ಲಿ ಪೊಲೀಸರು ಹೆಚ್ಚು ಕಟ್ಟುನಿಟ್ಟು ಮಾಡದ ಕಾರಣ ಈ ಅನಗತ್ಯ ಓಡಾಟ ನಡೆಸುವ ಮಂದಿಗೆ ಜನತಾ ಕರ್ಫ್ಯೂಗೆ ಹೆಚ್ಚಿನ ಸ್ಪಂದನೆ ನೀಡಲಿಲ್ಲ. ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಿಗ್ಗೆ ೬ ರಿಂದ ೧೦ ಗಂಟೆ ತನಕ ಅವಕಾಶ ನೀಡಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ದಿನನಿತ್ಯದ ವಸ್ತುಗಳನ್ನು ಖರೀದಿ ಮಾಡಿದರು. ಆದರೆ ೧೦ ಗಂಟೆಯ ನಂತರವೂ ಖಾಸಗಿ ವಾಹನಗಳ ಓಡಾಟ ಕಡಿಮೆಯಾಗಲಿಲ್ಲ. ಕಾರು, ಅಟೋ ರಿಕ್ಷಾ, ದ್ವಿಚಕ್ರ, ಜೀಪುಗಳ ಓಡಾಟ ನಿರಂತರವಾಗಿತ್ತು. ಸರ್ಕಾರದ ನಿಯಮಗಳನ್ನು ಉಲ್ಲಂಘಿಸುವ ರೀತಿಯಲ್ಲಿ ಈ ಅನಗತ್ಯ ಓಡಾಟ ನಡೆಸುತ್ತಿದ್ದ ಮಂದಿ ಪುತ್ತೂರಿನಲ್ಲಿ ತಿರುಗಾಟ ನಡೆಸಿದ್ದರು.
ಪುತ್ತೂರು ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರ ಜನತಾ ಕರ್ಫ್ಯೂಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿತ್ತು. ೧೦ ಗಂಟೆಯ ನಂತರ ಗ್ರಾಮೀಣ ಭಾಗದ ಪೇಟೆಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಆದರೆ ಪುತ್ತೂರು ಪೇಟೆಯಲ್ಲಿ ಮಾತ್ರ ವ್ಯತಿರಿಕ್ತವಾಗಿ ಖಾಸಗಿ ವಾಹನಗಳ ಓಡಾಟ ಕಂಡುಬಂತು.
ಎಪ್ರಿಲ್ ೨೯ರಂದು ಮದುವೆ ಕಾರ್ಯದ ಹಿನ್ನಲೆಯಲ್ಲಿ ಅಗತ್ಯವಸ್ತುಗಳನ್ನು ಖರೀದಿಸಲು ಬಂದವರು ಎಂಬ ನೆಪ ಹೇಳಿ ಓಡಾಟ ನಡೆಸುತ್ತಿದ್ದ ಮಂದಿಗೆ ಪೊಲೀಸರು ರಿಯಾಯಿತಿ ನೀಡಿದ ಕಾರಣ ಆರಾಮವಾಗಿಯೇ ಈ ಮಂದಿ ಪೇಟೆ ತಿರುಗುವ ಕಾಯಕ ನಡೆಸಿದರು. ಅಗತ್ಯ ವಸ್ತುಗಳ ಖರೀದಿಗಾಗಿ ೪ ಗಂಟೆಗಳ ಅವಕಾಶ ನೀಡಿದರೂ ಖರೀದಿ ಮಾಡುವುದನ್ನು ಬಿಟ್ಟು ಪೇಟೆ ಸುತ್ತುವ ಮೂಲಕ ಮೊದಲ ದಿನದ ಜನತಾ ಕರ್ಫ್ಯೂಗೆ ಪುತ್ತೂರು ಪೇಟೆಯ ಜನತೆ ಮನ್ನಣೆ ನೀಡಲಿಲ್ಲ.
ಈ ನಡುವೆ ಪುತ್ತೂರು- ಕಡಬ ತಾಲೂಕಿನಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಏರುಗತಿಯಲ್ಲಿ ಸಾಗಿದೆ. ಕೊರೊನಾ ಎರಡನೇ ಅಲೆಯಲ್ಲಿ ಪುತ್ತೂರು ಕಡಬ ಅವಿಭಜಿತ ತಾಲೂಕಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ೨೫ಕ್ಕಿಂತ ಕಡಿಮೆಯಾಗಿತ್ತು ಆದರೆ ಬುಧವಾರ ಈ ಸಂಖ್ಯೆ ೫೭ಕ್ಕೆ ಏರಿದೆ. ಪುತ್ತೂರಿನಲ್ಲಿ ೪೦ ಹಾಗೂ ಕಡಬ ತಾಲೂಕಿನಲ್ಲಿ ೧೭ ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆಯ ವರದಿ ತಿಳಿಸಿದೆ. ಇದರಲ್ಲಿ ೫ ವರ್ಷದ ಬಾಲಕಿ ಮತ್ತು ೭ ವರ್ಷದ ಬಾಲಕನಿಗೂ ಕೊರೊನಾ ಸೋಂಕು ತಗುಲಿದ್ದು, ಜನತಾ ಕರ್ಫ್ಯೂ ಪಾಲನೆ ಅತೀ ಅಗತ್ಯ ಎಂಬುವುದನ್ನು ಸಾಬೀತು ಪಡಿಸಿದೆ.