ಜನತಾ ಕರ್ಫ್ಯೂ ಪಡಿತರ ಆಹಾರಧಾನ್ಯಗಳ ಹೆಚ್ಚಳಕ್ಕೆ ಕನ್ನಡ ಭೂಮಿ ಆಗ್ರಹ

ಕಲಬುರಗಿ:ಎ.28:ಕೊರೊನಾ 2 ನೇ ಅಲೆಯ ಸೋಂಕು ತಡೆಗಟ್ಟಲು ರಾಜ್ಯದಲ್ಲಿ 14 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿ ಇರುವುದರಿಂದ ದಿನ ನಿತ್ಯ ದುಡಿಯುವ ಕೂಲಿ ಕಾರ್ಮಿಕರಿಗೆ ಹಾಗೂ ಬಡವರಿಗೆ ವಿತರಿಸುವ ಪಡಿತರ ಆಹಾರಧಾನ್ಯಗಳನ್ನು ಹೆಚ್ಚಿಸಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈಗಾಗಲೇ ನ್ಯಾಯಬೇಲೆ ಅಂಗಡಿಯಲ್ಲಿ ಒಂದು ಪಡಿತರ ಚೀಟಿಗೆ ನೀಡಲಾಗುವ 5 ಕೆಜಿ ಅಕ್ಕಿಯನ್ನು 10 ಕೆಜಿಗೆ,ಗೋಧಿ 8 ಕೆಜಿಗೆ ಹಾಗೂ ಸಕ್ಕರೆ 5 ಕೆಜಿಗೆ ಏರಿಕೆ ಮಾಡಬೇಕು.ಬಡವರ ಹಿತದೃಷ್ಟಿಯಿಂದ ಸರಕಾರ ಅವರ ಕುಟುಂಬ ನಿರ್ವಹಣೆಗೆ ಸಾಕಾಗುವಷ್ಟು ಆಹಾರಧಾನ್ಯಗಳನ್ನು ಒದಗಿಸಿದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.ಕೆಲಸವಿಲ್ಲದೇ ಜೀವನ ಸಾಗಿಸುವುದು ದುಸ್ತರವಾಗಿದೆ.ಕಳೆದ ವರ್ಷ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸಲಾಗಿತ್ತು.ಈ ಬಾರಿಯೂ ಪಡಿತರೇತರ ಕುಟುಂಬಗಳಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ನೀಡಬೇಕು.ಯಾರೂ ಹಸಿವಿನಿಂದ ಸಾಯದಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯವಾಗಿದೆ.

ರಾಜ್ಯದ ಬಹುತೇಕ ಉಗ್ರಾಣಗಳಲ್ಲಿ ಆಹಾರ ಧಾನ್ಯಗಳ ದಾಸ್ತಾನು ಇದೆ.ಅದನ್ನು ಈಗ ತುರ್ತು ಪರಿಸ್ಥಿತಿ ಉದ್ಭವಿಸಿದರಿಂದ ಬಳಸಿಕೊಳ್ಳಲು ಸರಕಾರ ಮುಂದಾಗಬೇಕು.ರೈತರ ಕುಟುಂಬಗಳಿಗೆ ಪ್ರೋತ್ಸಾಹ ಧನ ನೀಡಬೇಕು.ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.