ಜನತಾ ಕರ್ಫ್ಯೂ ಜಾರಿ- ಅವಕಾಶ ಇದ್ದರೂ ಜನತೆಯ ಅನಗತ್ಯ ಅವಸರ

ಪುತ್ತೂರು, ಎ.೨೮- ರಾಜ್ಯ ಸರ್ಕಾರದ ಆದೇಶದಂತೆ ಬುಧವಾರದಿಂದ ೧೪ ದಿನಗಳ ಕಾಲ ರಾಜ್ಯದಲ್ಲಿ ಜನತಾ ಕರ್ಫ್ಯೂ ಜಾರಿಯಾಗಲಿದೆ. ಆದರೆ ಜನತೆಯ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ ೬ರಿಂದ ೧೦ ಗಂಟೆ ತನಕ ಅವಕಾಶ ನೀಡಲಾಗಿದೆ. ಹಾಗಿದ್ದರೂ ಮಂಗಳವಾರ ಪುತ್ತೂರು ನಗರದಲ್ಲಿ ಜಾತ್ರಾ ಸಂದರ್ಭದ ವಾಹನದಟ್ಟಣೆ. ಜನತೆಯ ಗಡಿಬಿಡಿ..ಧಾವಂತ ಅನಗತ್ಯವಾದ ಅವಸರ.
ಪಡಿತರ ವಸ್ತುಗಳ ಖರೀದಿ, ತರಕಾರಿ ಖರೀದಿಗಾಗಿ ಅಂಗಡಿಗಳ ಎದುರು ಮುಗಿಬಿದ್ದ ಜನತೆ ಕೊರೊನಾ ನಿಯಮಗಳನ್ನು ಗಾಳಿಗೆ ಎಸೆದಿದ್ದರು. ಮಾಸ್ಕ್ ಧಾರಣೆಗೂ ಪುರುಸೊತ್ತು ಇಲ್ಲದಂತೆ ವರ್ತಿಸಿದರು. ಪ್ರತೀ ದಿನ ಖರೀದಿ ಅವಕಾಶ ಇದೆ ಎಂದು ಅಂಗಡಿ ಮಾಲಕರು ತಿಳಿಸಿದರೂ ಜನತೆಗೆ ಅರ್ಥವಾಗಲಿಲ್ಲ. ಅಗತ್ಯ ಇದ್ದವರು, ಇಲ್ಲದವರು ಪೇಟೆಗೆ ಬಂದು ಇಡೀ ವಾತಾವರಣವನ್ನು ಮತ್ತಷ್ಟು ಕುಲಗೆಡಿಸುವ, ಸರ್ಕಾರದ ಮೂಲ ಉದ್ದೇಶವನ್ನೂ ಮರೆತವರಂತೆ ವರ್ತಿಸುವುದು ಕಂಡುಬಂತು.
ಪ್ರಯಾಣಿಕರಿಂದ ತುಂಬಿದ ಬಸ್‌ನಿಲ್ದಾಣ
ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್‌ಗಳು ಏ. ೨೭ ರಾತ್ರಿಯಿಂದ ಮೇ ೧೨ರವರೆಗೆ ಜನತಾ ಕರ್ಫ್ಯೂ ಜಾರಿಯಲ್ಲಿರುವುದರಿಂದ ಏ. ೨೭ರ ಸಂಜೆಯಿಂದ ಬಸ್ ಸಂಚಾರ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟನೆ ಇತ್ತು. ಪುತ್ತೂರು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಪ್ರಯಾಣಿಕರಿಂದ ತುಂಬಿತ್ತು. ಪುತ್ತೂರು-ಬೆಂಗಳೂರು ನಡುವಣ ೧೦ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸೋಮವಾರ ಮತ್ತು ಮಂಗಳವಾರ ಓಡಿಸಲಾಗಿದೆ.
ಮಂಗಳವಾರ ಸಂಜೆ ೬ರ ಬಳಿಕ ಯಾವುದೇ ಕೆಎಸ್ಸಾರ್ಟಿಸಿ ಬಸ್‌ಗಳ ಓಡಾಟ ಇರುವುದಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ತಂಗುವ ಬಸ್‌ಗಳ ಸಂಚಾರವನ್ನು ಮೊಟಕುಗೊಳಿಸಲಾಗಿದೆ. ಮಂಗಳವಾರ ರಾತ್ರಿ ೭ರೊಳಗೆ ಪುತ್ತೂರು ಘಟಕದ ಎಲ್ಲಾ ಕೆಎಸ್ಸಾರ್ಟಿಸಿ ಬಸ್‌ಗಳು ಡಿಪೋ ಸೇರುವಂತೆ ಆದೇಶಿಸಲಾಗಿದೆ.
ಜನತಾಕರ್ಫ್ಯೂ ಸಂದರ್ಭದಲ್ಲಿ ಅನಗತ್ಯ ಓಡಾಟಕ್ಕೆ ಸಂಪೂರ್ಣ ಬ್ರೇಕ್ ಬೀಳಲಿದೆ. ತುರ್ತು ಸಂದರ್ಭ ಹೊರತು ಪಡಿಸಿ ಸರ್ವೀಸ್ ರಿಕ್ಷಾಗಳ ಓಡಾಟ ಸಂಪೂರ್ಣ ಸ್ಥಗಿತಗೊಳ್ಳಲಿದೆ.
ಆದರೆ ಹೊಟೇಲ್‌ಗಳಿಗೆ
ಪಾರ್ಸೆಲ್ ಸರ್ವೀಸ್ ನೀಡಲು ಅನುಮತಿ ನೀಡಲಾದ ಕಾರಣ ಹೋಟೆಲ್‌ಗಳಿಗೆ ಅವಕಾಶ ಇದೆ. ಆದರೂ ಜನರ ಓಡಾಟ ಇಲ್ಲದ ಕಾರಣ ಎಲ್ಲಾ ಹೋಟೆಲ್‌ಗಳು ತೆರೆದಿರುವ ಸಾಧ್ಯತೆ ಕಡಿಮೆಯಾಗಿದೆ.