ಜನತಾ ಕರ್ಫ್ಯೂ ಜನ ಜೀವನಕ್ಕೆ ಗರ

ಬೆಂಗಳೂರು, ಏ. ೨೮- ಮಹಾಮಾರಿ ಕೊರೊನಾದ ೨ನೇ ಅಲೆಯ ಆರ್ಭಟಕ್ಕೆ ತಡೆ ಹಾಕಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ೧೪ ದಿನಗಳ ಲಾಕ್‌ಡೌನ್ ಮಾದರಿ ಕರ್ಫ್ಯೂ ಕಳೆದ ರಾತ್ರಿಯಿಂದಲೇ ಜಾರಿಯಾಗಿದ್ದು, ಅವಶ್ಯಕ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳು ಬಂದ್ ಆಗಿದ್ದು, ರಾಜ್ಯಾದ್ಯಂತ ಜನಜೀವನ ಸ್ತಬ್ದಗೊಂಡಿದೆ.
ರಾಜ್ಯಾದ್ಯಂತ ವಾಣಿಜ್ಯ ವಹಿವಾಟು ಸೇರಿದಂತೆ, ಎಲ್ಲಾ ಚಟುವಟಿಕೆಗಳು ಬಂದ್ ಆಗಿವೆ. ಜನ ಜೀವನ ಸಂಪೂರ್ಣ ಸ್ತಬ್ದಗೊಂಡು ಇಡೀ ರಾಜ್ಯದಲ್ಲಿ ಅಘೋಷಿತ ಬಂದ್ ಘೋಷಿಸಿದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಗತ್ಯ ವಸ್ತುಗಳನ್ನು ಖರೀದಿಸಲು ಬೆಳಿಗ್ಗೆ ೬ ರಿಂದ ೧೦ರವರೆಗೂ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಈ ಅವಧಿಯಲ್ಲಿ ಅಂಗಡಿ – ಮುಂಗಟ್ಟುಗಳನ್ನು ತೆರೆಯಲಾಗಿತ್ತು. ೧೦ರ ನಂತರ ಮದ್ಯದ ಅಂಗಡಿಗಳು ಸೇರಿದಂತೆ, ಎಲ್ಲಾ ಅಗತ್ಯ ಸೇವೆಗಳ ಅಂಗಡಿಗಳಿಗೆ ಬೀಗ ಹಾಕಲಾಗಿದೆ.
ಸಾರಿಗೆ ಬಸ್ ಸೇರಿದಂತೆ, ವಾಹನ ಸಂಚಾರವೂ ಬಂದ್ ಆಗಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ.
ತುರ್ತು ವಾಹನ ಹಾಗೂ ಸರಕು ಸಾಗಣೆ ವಾಹನಗಳ ಓಡಾಟ, ಪೆಟ್ರೋಲ್ ಬಂಕ್ ಹೊರತುಪಡಿಸಿದರೆ, ರಾಜ್ಯದ ಎಲ್ಲೆಡೆ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ, ಎಲ್ಲೆಡೆ ಕೊರೊನಾ ತಡೆಯ ಕರ್ಫ್ಯೂ ಜಾರಿಯಾಗಿದ್ದು, ಜನರ ಅನಗತ್ಯ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಜನರ ಓಡಾಟವೂ ವಿರಳವಾಗಿದೆ.
ಎಲ್ಲಾ ಜಿಲ್ಲಾ ಗಡಿಗಳಲ್ಲೂ ಪೊಲೀಸರು ಚೆಕ್‌ಪೋಸ್ಟ್ ಸ್ಥಾಪಿಸಿ ಪ್ರತಿಯೊಂದು ವಾಹನಗಳ ಪರಿಶೀಲನೆ ನಡೆಸಿದ್ದಾರೆ. ತುರ್ತು ಹಾಗೂ ಅಗತ್ಯ ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ಅನಗತ್ಯವಾಗಿ ಓಡಾಡುವ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಪ್ರಕರಣಗಳು ನಡೆದಿವೆ.
ಇಡೀ ರಾಜ್ಯದಲ್ಲಿ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ನಿರ್ಮಾಣ ಕಾಮಗಾರಿ ಮತ್ತು ಕೃಷಿ ಚಟುವಟಿಕೆಗಳು ಮಾಮೂಲಿನಂತೆ ನಡೆದಿವೆ. ಆಸ್ಪತ್ರೆ ಸೇರಿದಂತೆ ತುರ್ತು ಸೇವೆಗಳಿಗೆ ಯಾವುದೇ ಅಡ್ಡಿಯಿಲ್ಲ.
ರಾಜಧಾನಿ ಬೆಂಗಳೂರು ಸಂಪೂರ್ಣ ಬಂದ್
ಕೊರೊನಾ ಕರ್ಫ್ಯೂ ಕಾರಣ ರಾಜ್ಯಧಾನಿ ಬೆಂಗಳೂರಿನಲ್ಲಿ ಅಘೋಷಿತ ಬಂದ್‌ನ ವಾತಾವರಣ ಇದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳು ಬಂದ್ ಆಗಿವೆ.
ಸಾರಿಗೆ ಬಸ್, ಬಿಎಂಟಿಸಿ ಬಸ್, ಆಟೋ, ಟ್ಯಾಕ್ಸಿ, ಮೆಟ್ರೋ ರೈಲು ಓಡಾಟವೂ ಬಂದ್ ಆಗಿದೆ.
ನಗರದಲ್ಲಿ ಪ್ರಮುಖ ರಸ್ತೆ ಹಾಗೂ ಮೇಲ್ಸೇತುವೆಗಳಿಗೆ ಬ್ಯಾರಿಕೇಡ್‌ಗಳನ್ನು ಹಾಕಿ ಬಂದ್ ಮಾಡಲಾಗಿದ್ದು, ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಎಪಿಎಂಸಿ ಸೇರಿದಂತೆ ಎಲ್ಲ ಮಾರುಕಟ್ಟೆಗಳು ಬಂದ್ ಆಗಿವೆ. ರಸ್ತೆಗಳಲ್ಲೂ ವಾಹನಗಳ ಓಡಾಟ ವಿರಳವಾಗಿದೆ.
ಕೊರೊನಾ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಎಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿದೆ. ಅನಗತ್ಯವಾಗಿ ಓಡಾಡುವವರನ್ನು ಪೊಲೀಸರು ಪ್ರಶ್ನೆ ಮಾಡುತ್ತಿದ್ದು, ಅಗತ್ಯ ಇದ್ದರೆ ಮಾತ್ರ ಅವರಿಗೆ ಓಡಾಡಲು ಅವಕಾಶ ಮಾಡಿಕೊಡುತ್ತಿದ್ದಾರೆ. ಉಳಿದಂತೆ ಅನಗತ್ಯವಾಗಿ ಓಡಾಡುವವರಿಗೆ ಕೆಲವೆಡೆ ಲಾಠಿ ರುಚಿ ತೋರಿಸಿ ಬಿಸಿ ಮುಟ್ಟಿಸಿರುವ ಪ್ರಕರಣಗಳು ವರದಿಯಾಗಿವೆ.
ಸ್ಪಂದನೆ
ಜನ ಸಹ ಕೊರೊನಾ ಕರ್ಫ್ಯೂಗೆ ಸಾಕಾರಾತ್ಮಕವಾಗಿ ಸ್ಪಂದಿಸಿದ್ದು, ಬಹುತೇಕ ಮಂದಿ ರಸ್ತೆಗೆ ಬಾರದೆ ಮನೆಯಲ್ಲೆ ಉಳಿದು ಸರ್ಕಾರದ ತೀರ್ಮಾನಕ್ಕೆ ಪರೋಕ್ಷ ಬೆಂಬಲ ನೀಡಿದ್ದಾರೆ.

ರಾಜ್ಯದಲ್ಲಿ ೧೪ ದಿನಗಳ ಕೊರೊನಾ ಕರ್ಫ್ಯೂ ಜಾರಿ

ಕರುನಾಡು ಸಂಪೂರ್ಣ ಸ್ತಬ್ಧ.

ಅವಶ್ಯ ಸೇವೆ ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳಿಗೆ ಬೀಗ

ಸಾರಿಗೆ ಬಸ್, ಕಾರು, ಆಟೋ, ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆ ಸೇವೆ ಸ್ಥಗಿತ

ಅಂಗಡಿ – ಮುಂಗಟ್ಟುಗಳು ಬಾಗಿಲು

ಆಸ್ಪತ್ರೆ, ಆರೋಗ್ಯ ಸೇವೆ, ಮೆಡಿಕಲ್ ಶಾಪ್‌ಗೆ ಅವಕಾಶ

ಇಡೀ ರಾಜ್ಯದಲ್ಲಿ ಅಘೋಷಿತ ಬಂದ್‌ನ ವಾತಾವರಣ.