ಜನತಾ ಕರ್ಫ್ಯೂ ಗಗನಕ್ಕೇರಿದ ತರಕಾರಿ ದರ

ಬೆಂಗಳೂರು,ಏ.೨೯- ಹೆಮ್ಮಾರಿ ಕೊರೊನಾದಿಂದಾಗಿ ರಾಜ್ಯದಲ್ಲಿ ೧೪ ದಿನಗಳ ಜನತಾ ಕರ್ಫ್ಯೂ ಜಾರಿಯಲ್ಲಿರುವುರಿಂದ ದೈನಂದಿನ ಜನಜೀವನ ಏರುಪೇರಾಗಿವೆ.
ಕೊವಿಡ್ ಕರ್ಫ್ಯೂನಿಂದಾಗಿ ಜನ ಮನೆಗಳಲ್ಲಿರುವ ಮಧ್ಯೆ, ಜನರಿಗೆ ಅತ್ಯಗತ್ಯವಾಗಿ ತರಕಾರಿ ಬೇಕಿದೆ.ಆದರೆ ಅವುಗಳ ಬೆಲೆ ಗಗನದಲ್ಲಿವೆ. ಜನಸಾಮಾನ್ಯ ಕೈಗೆಟುಕದಂತಾಗಿದೆ. ಇದೇ ವೇಳೆ ರಾಜಧಾನಿ ಸೇರಿದಂತೆ ಎಲ್ಲ ಕಡೆಗಳಲ್ಲೂ ಕೊವಿಡ್ ಕರ್ಫ್ಯೂನಿಂದಾಗಿ ಅಂಗಡಿಮುಂಗಟ್ಟುಗಳನ್ನು ಬೆಳಗ್ಗೆ ೧೦ ಗಂಟೆಗೇ ಮುಚ್ಚಿಸುತ್ತಿದ್ದಾರೆ.ಬೇಗ ಬೇಗ ಅಂಗಡಿ ಬಂದ್ ಮಾಡುವಂತೆ ಪೋಲೀಸರು ಖಡಕ್ ಎಚ್ಚರಿಕೆ ನೀಡುತ್ತಿದ್ದಾರೆ. ಖರೀದಿ- ಮಾರಾಟಕ್ಕಾಗಿ ಗ್ರಾಹಕರು ಮತ್ತು ವ್ಯಾಪಾರಿಗಳು ಬೇಗ ಬೇಗ ಅಗತ್ಯ ವಸ್ತು ಮಾರಾಟ, ಖರೀದಿ ಮಾಡಿ ಮನೆ ಸೇರುವ ಅವಸರದಲ್ಲಿದ್ದಾರೆ.
ಗ್ರಾಹಕರ ಜೇಬಿಗೆ ಕತ್ತರಿ..!
ನಗರದಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆಯಿಂದ ಕಂಗಾಲಾಗುವ ಪರಿಸ್ಥಿತಿ ಗ್ರಾಹಕರದ್ದಾಗಿದೆ. ಸಮಯ ಮೀರಿದರೆ ಅಗತ್ಯವಸ್ತುಗಳು ಸಿಗುವುದಿಲ್ಲ. ವಿಧಿಯಿಲ್ಲದೆ ಕೇಳಿದಷ್ಟು ಹಣ ಕೊಡಬೇಕಾದ ಸ್ಥಿತಿ ಎದುರಾಗಿದೆ.
೧೦ ರೂ. ಇದ್ದ ಒಂದು ಕಟ್ಟು ಕೊತ್ತಂಬರಿ ಈಗ ೩೦ ರೂಪಾಯಿಗೆ ಮಾರಾಟವಾಗುತ್ತಿದೆ. ೧ ಕೆಜಿ ಬೀನ್ಸ್ ೪೦-೫೦ ರೂಪಾಯಿಗೆ ಮಾರಾಟವಾಗುತ್ತಿದೆ. ಬಹುತೇಕ ಎಲ್ಲ ತರಕಾರಿಗಳ ಬೆಲೆಯೂ ಏರಿವೆ.
ಒಂದು ಕಟ್ಟು ವೀಳ್ಯೆದೆಲೆ ೩೦ ರೂ ಇತ್ತು, ಈಗ ೮೦ ರೂ ಆಗಿದೆ. ಒಂದು ನಿಂಬೆಹಣ್ಣು ೩ ರೂ. ಇತ್ತು, ಈಗ ೧೦ ರೂ.ಗೆ ಮಾರಾಟವಾಗುತ್ತಿದೆ.
೮೦ ರೂ. ಇದ್ದ ಬಟಾಣಿ ಬೆಲೆ ಈಗ ೧೫೦ ರೂ. ಗೆ ಏರಿಕೆಯಾಗಿದೆ.
ಗ್ರಾಹಕರು ಕಂಗಾಲು:
ಹೀಗೆ ಬೆಲೆ ಏರಿಕೆ ವಿರುದ್ಧ ಗ್ರಾಹಕರು ಕಂಗಾಲಾಗಿದ್ದು ಈಗಲೇ ಕೆಲಸ ಇಲ್ಲ, ಇಂತಹ ಸಮಯದಲ್ಲಿ ಏರಿಕೆ ಮಾಡಿದ್ರೆ ಹೇಗೆ..? ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಮಾರಾಟಗಾರರು ಮಾತ್ರ ಯಾವುದೇ ಕಾಳಜಿಯೂ ಇಲ್ಲದೆ ಇಷ್ಟ ಇದ್ದರೆ ತಗೋಳಿ, ಇಲ್ಲ ಅಂದರೆ ಹೋಗಿ ಎನ್ನಲಿದ್ದು ವಿಧಿಯಿಲ್ಲದೇ ತೆಗೆದುಕೊಳ್ಳಬೇಕು ಎನ್ನುವ ಅಸಹಾಯಕತೆ ಗ್ರಾಹಕದ್ದಾಗಿದೆ.